ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆ – ಕಾರಣವೇನು ಗೊತ್ತಾ?
ಬೆಂಗಳೂರು: ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಮಾರ್ಚ್ 24 ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಅಲ್ಲದೇ 3 ವಾರಗಳ ಕಾಲ ಯಾವುದೇ ಮುಷ್ಕರ ನಡೆಸದಂತೆ ಆದೇಶ ಹೊರಡಿಸಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಾರ್ಚ್ 24 ರಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆನೀಡಿದ್ದರು. ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ಗೆ ಹೆಚ್.ಎಂ.ವೆಂಕಟೇಶ್ ಎಂಬುವವರು ಪಿಐಎಲ್ ಸಲ್ಲಿಸಿದ್ದರು. ಮಾ.20ರಂದು ಕಾರ್ಮಿಕ ಇಲಾಖೆ ಆಯುಕ್ತರು ಸಭೆ ಕರೆದಿದ್ದರು. ಆದರೆ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಏಪ್ರಿಲ್ 6ರಂದು ಮುಂದಿನ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಹೈಕೋರ್ಟ್ಗೆ ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘ಭಾಗ್ಯಗಳು ನಿಲ್ಲುವಂತಿಲ್ಲ.. ನಿಂತರೆ ಸರ್ಕಾರವೇ ಉಳಿಯುವುದಿಲ್ಲ’ – ಪತ್ರದ ಮೂಲಕ ನೋವು ಬಿಚ್ಚಿಟ್ಟ ಹೆಚ್ಡಿಕೆ!
ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆದರೆ ಬಸ್ ಸಂಚಾರ ಸ್ಥಗಿತವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು, ನೌಕರರು, ಪ್ರಯಾಣಿಕರಿಗೆ ತೊಂದರೆ ಉಂಟಾಗಲಿದೆ. ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಲಿದೆ. ಏಪ್ರಿಲ್ 6ರಂದು ಮುಂದಿನ ಸಭೆಯಿರುವ ಹಿನ್ನೆಲೆ 3 ವಾರಗಳ ಕಾಲ ಮುಷ್ಕರಕ್ಕೆ ಮುಂದಾಗದಂತೆ ಸಿಜೆ ಪ್ರಸನ್ನ ಬಿ.ವರಾಳೆ, ಅಶೋಕ್ ಎಸ್.ಕಿಣಗಿ ಅವರಿದ್ದ ಪೀಠ ಸಂಘಟನೆಗಳಿಗೆ ಸೂಚನೆ ನೀಡಿದೆ.
ಮಾರ್ಚ್ 21ರಂದು ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದರು. ಈ ವೇಳೆ 15% ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ ಈಗ ಮತ್ತೆ ಸಮಾನ ಮನಸ್ಕರ ವೇದಿಕೆ ಸಾರಿಗೆ ಮುಷ್ಕರಕ್ಕೆ ಕರೆ ನೀಡಿದೆ. ಸಾರಿಗೆ ನೌಕರರ ಮುಖಂಡ ಚಂದ್ರು ನಾಲ್ಕು ನಿಗಮದ ಬಸ್ಗಳನ್ನ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಕರೆ ನೀಡಿದ್ದರು.