‘ಭಾಗ್ಯಗಳು ನಿಲ್ಲುವಂತಿಲ್ಲ.. ನಿಂತರೆ ಸರ್ಕಾರವೇ ಉಳಿಯುವುದಿಲ್ಲ’ – ಪತ್ರದ ಮೂಲಕ ನೋವು ಬಿಚ್ಚಿಟ್ಟ ಹೆಚ್​ಡಿಕೆ!

‘ಭಾಗ್ಯಗಳು ನಿಲ್ಲುವಂತಿಲ್ಲ.. ನಿಂತರೆ ಸರ್ಕಾರವೇ ಉಳಿಯುವುದಿಲ್ಲ’ – ಪತ್ರದ ಮೂಲಕ ನೋವು ಬಿಚ್ಚಿಟ್ಟ ಹೆಚ್​ಡಿಕೆ!

ಬಹುಮತ ಪಡೆಯದೇ ಎರಡೆರಡು ಸಲ ಸಿಎಂ ಆಗಿದ್ದ ಹೆಚ್​.ಡಿ ಕುಮಾರಸ್ವಾಮಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನಗೆಲ್ಲಲು ನಾನಾ ಸರ್ಕಸ್ ಮಾಡುತ್ತಿದ್ದಾರೆ. ಈಗಾಗ್ಲೇ ಪಂಚರತ್ನ ಯಾತ್ರೆಯ ಮೂಲಕ ಕ್ಷೇತ್ರಗಳಲ್ಲಿ ರೌಂಡ್ಸ್ ಹಾಕುತ್ತಿದ್ದಾರೆ. ಇದೀಗ ಜನರಿಗೆ ಭಾವನಾತ್ಮಕ ಪತ್ರ ಬರೆಯುವ ಮೂಲಕ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.

ಅಭಿಮಾನಿಗಳಿಂದ ರೈತ ನಾಯಕ ಎಂದು ಕರೆಸಿಕೊಳ್ಳುವ ಹೆಚ್.​ಡಿ ಕುಮಾರಸ್ವಾಮಿ ರೈತ ಅಸ್ತ್ರ ಪ್ರಯೋಗಿಸಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಹೀಗಾಗಿ ಸಾಲಮನ್ನಾದಿಂದ 27 ಲಕ್ಷ ಕುಟುಂಬಗಳಿಗೆ ಅನುಕೂಲವಾಗಿರುವ ಬಗ್ಗೆ ಪ್ರಸ್ತಾಪಿಸಿ ರೈತರಿಗೆ ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ. ಹಾಗೂ ಪತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಜೊತೆಗಿನ ಸಮ್ಮಿಶ್ರ ಸರ್ಕಾರದ ಬಗ್ಗೆ ಹಾಗೂ ಆಗ ಆದ ಅನ್ಯಾಯದ ಬಗ್ಗೆ ಉಲ್ಲೇಖಿಸಿದ್ದಾರೆ. ಪತ್ರದ ಮೂಲಕ ಕುಮಾರಸ್ವಾಮಿ ಪರ ಅನುಕಂಪದ ಅಲೆ ಸೃಷ್ಟಿಯಾಗಲಿದೆ.

ಇದನ್ನೂ ಓದಿ :  ಬಿಜೆಪಿಯಿಂದ ನಿಲ್ಲದ ಪಕ್ಷಾಂತರ ಪರ್ವ – ಮರಳಿ ‘ಕೈ’ ಹಿಡಿಯುತ್ತಾರಾ ಮಾಲಕರೆಡ್ಡಿ..?

ನಾಡಿನ ಸಮಸ್ತ ಅನ್ನದಾತ ಬಂಧುಗಳಿಗೆ ನನ್ನ ನಮಸ್ಕಾರಗಳು, ನಿಮ್ಮ ಮನೆ ಮಗನಾದ ನಾನು ಅನಿವಾರ್ಯ ಕಾರಣದಿಂದ ಈ ಪತ್ರ ಬರೆಯುತ್ತಿದ್ದೇನೆ. ತಮಗೆಲ್ಲರಿಗೂ ವಿಷಯ ಗೊತ್ತಿಲ್ಲ ಎಂದಲ್ಲ, ಮತ್ತೊಮ್ಮೆ ನೆನಪಿಸುವುದು ನನ್ನ ಕರ್ತವ್ಯ. ಎರಡು ಬಾರಿ ನಾನು ಆಕಸ್ಮಿಕವಾಗಿ ಈ ರಾಜ್ಯದ ಮುಖ್ಯಮಂತ್ರಿಯಾದೆ. ಒಮ್ಮೆ ಬಿಜೆಪಿ ಜತೆ, ಇನ್ನೊಮ್ಮೆ ಕಾಂಗ್ರೆಸ್ ಜತೆ, ಎರಡೂ ಬಾರಿ ನಾನು ಆಡಳಿತ ನಡೆಸಿದ ಆ ಅವಧಿಯಲ್ಲಿ ಅನುಭವಿಸಿದ ಚಿತ್ರಹಿಂಸೆ ನನಗಷ್ಟೇ ಗೊತ್ತು. ಆದರೂ, ನಾನು ನಿಮಗೆ ಕೊಟ್ಟ ಮಾತು ತಪ್ಪಲಿಲ್ಲ. 2006ರಲ್ಲಿ ನೀವೆಲ್ಲರೂ ಅತೀವ ಸಂಕಷ್ಟಕ್ಕೆ ಸಿಲುಕಿದ್ದೀರಿ. ನಿಮ್ಮಲ್ಲಿ ಅನೇಕರು ಸಾಲಕ್ಕೆ ಸಿಲುಕಿ ಸಾವಿನ ಹೊಸ್ತಿಲಲ್ಲಿ ನಿಂತಿದ್ದಿರಿ, ಆ ದುರಿತ ಕಾಲದಲ್ಲಿ ನಿಮ್ಮ ನೆರವಿಗೆ ಧಾವಿಸುವುದು ನನ್ನ ಕರ್ತವ್ಯವಾಗಿತ್ತು. ಆಗ 2,600 ಕೋಟಿ ರೂ. ಸಾಲಮನ್ನಾ ಮಾಡಬೇಕು ಎಂದಾಗ ಅಂದಿನ ಮಿತ್ರಪಕ್ಷ ಬಿಜೆಪಿ ಸ್ಪಷ್ಟವಾಗಿ ವಿರೋಧ ಮಾಡಿತ್ತು, ಆಗ ನನ್ನ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿ ಹಣಕಾಸು ಇಲಾಖೆ ಹೊಣೆ ಹೊತ್ತುಕೊಂಡಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು, ಸಾಲಮನ್ನಾ ಮಾಡಲು ಹಣ ಇಲ್ಲ, ನಾವೇನು ನೋಟು ಪ್ರಿಂಟ್ ಮಾಡಲು ಆಗುತ್ತದೆಯೇ? ಎಂದು ಮೂದಲಿಸಿದ್ದರು. ಈ ಮಾತು ನನಗೆ ತೀವ್ರ ಘಾಸಿ ಉಂಟು ಮಾಡಿತ್ತು. ಆದರೂ, ಬಿಜೆಪಿ ಒತ್ತಡಕ್ಕೆ ಮಣಿಯದೆ 2,600 ಕೋಟಿ ರೂ.ಗಳಷ್ಟು ನಿಮ್ಮ ಸಾಲಮನ್ನಾ ಮಾಡಿದ್ದೆ.

ಇನ್ನು 2018, ಆ ಚುನಾವಣೆಗೆ ಮುನ್ನ 5 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಕಾಲದಲ್ಲಿ ರಾಜ್ಯದಲ್ಲಿ ನೀವೆಲ್ಲರೂ ಕಂಡೂ ಕೇಳರಿಯದಷ್ಟು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಿರಿ, ಒಂದೆಡೆ ಬರ, ಅಲ್ಪಸ್ವಲ್ಪ ಫಸಲಿಗೆ ಸಿಗದ ಬೆಲೆ. ಇನ್ನೊಂದೆಡೆ ಸಾಲ ಕೊಟ್ಟ ಬ್ಯಾಂಕುಗಳಿಂದ, ಖಾಸಗಿ ಲೇವಾದೇವಿಗಾರರಿಂದ ಕಿರುಕುಳ, ಅನೇಕ ರೈತರು ಮಾನಕ್ಕೆ ಹೆದರಿ ನೇಣಿಗೆ ಕೊರಳು ಕೊಟ್ಟರು. ಕೆಲವು ರೈತರು ಕೀಟನಾಶಕ ಸೇವಿಸಿ ಜೀವ ಚೆಲ್ಲಿದರು. ಮಂಡ್ಯ ಜಿಲ್ಲೆಯಲ್ಲೇ 200ಕ್ಕೂ ರೈತರು ಸಾಲಕ್ಕೆ ಹೆದರಿ ಜೀವ ಕಳೆದುಕೊಂಡರು. ರಾಜ್ಯದ ಉದ್ದಗಲಕ್ಕೂ ಅನ್ನದಾತರ ಸಾವಿನ ಸರಣಿಯೇ ಆರಂಭವಾಯಿತು. ಇದನ್ನು ನೋಡಿ ನಿಮ್ಮಂತೆಯೇ ನನ್ನ ಮನಸ್ಸು ತಡೆಯಲಿಲ್ಲ. ಆಗ ಅಧಿಕಾರದಲ್ಲಿದ್ದ ಪೂರ್ಣ ಬಹುಮತದ ಕಾಂಗ್ರೆಸ್‌ ಸರಕಾರ ಸಂಕಷ್ಟದಲ್ಲಿದ್ದ ನಿಮ್ಮ ನೆರವಿಗೆ ಬರಲಿಲ್ಲ. ರಾಜ್ಯದ ಉದ್ದಗಲಕ್ಕೂ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ತಿರುಗಾಡಿದೆ. ಪ್ರತಿ ಸಾವಿನ ಮನೆಗೆ ಹೋದೆ. ನನ್ನ ಕೈಲಾದಷ್ಟು ಸಹಾಯ ಮಾಡಿದೆ. ಮತ್ತೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಅಂಗಲಾಚಿ ಬೇಡಿಕೊಂಡೆ. ನಾನಿದ್ದೇನೆ, ನನ್ನ ಸರಕಾರ ಬಂದರೆ ನಾನು ನಿಮ್ಮ ಸಾಲಮನ್ನು ಮಾಡುತ್ತೇನೆ ಎಂದು ಮಾತು ಕೊಟ್ಟೆ. ಆದರೆ, 2018ರ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಬಂದಿದ್ದು ಕೇವಲ 39 ಸ್ಥಾನ. ರೈತರ ಸಾಲಮನ್ನಾ ಮಾಡುವ ನನ್ನ ಸಂಕಲ್ಪ ಕಮರಿ ಹೋಯಿತೆಂದು ದುಃಖವಾಯಿತು. ಆದರೆ, ನನ್ನ ಸಂಕಲ್ಪ, ರೈತರ ಮೇಲಿನ ಕಾಳಜಿ ದೊಡ್ಡದು ಎನ್ನುವುದು ಪುನಹ ಸಾಬೀತಾಯಿತು. ಕಾಂಗ್ರೆಸ್‌ ಜತೆ ಮೈತ್ರಿ ಸರಕಾರ ರಚನೆ ಆಯಿತು. ಸಾಲಮನ್ನಾ ಮಾಡಬೇಕು ಎಂದಾಗ, ಕಾಂಗ್ರೆಸ್ ನಿಂದಲೂ ತೀವ್ರ ವಿರೋಧ ಸಾಲಮನ್ನಾ ಭರವಸೆ ನಿಮ್ಮದು, ನಮ್ಮದಲ್ಲ, ನಿಮಗೆ ಹೇಗೋ ಬಹುಮತ ಬಂದಿಲ್ಲ, ಸಾಲಮನ್ನಾ ಆಗಲ್ಲ ಎಂದು ಜನರಿಗೆ ಹೇಳಿಬಿಡಿ  ಎಂದು ಕಾಂಗ್ರೆಸ್ಸಿಗರು ನನ್ನ ಮೇಲೆ ಭಾರೀ ಒತ್ತಡ ಹೇರಿದರು. ಅಷ್ಟೇ ಅಲ್ಲ, ನಮ್ಮ ಭಾಗ್ಯಗಳು ಯಾವೂ ನಿಲ್ಲುವ ಹಾಗಿಲ್ಲ. ಒಂದು ವೇಳೆ ನಿಂತರೆ ಈ ಸರಕಾರ ಇರುವುದೇ ಇಲ್ಲ ಎನ್ನುವ ಧಮ್ಮಿ ಬೇರೆ ಹಾಕಿದ್ದರು’ ಎಂದು ಹೆಚ್​ಡಿ ಕುಮಾರಸ್ವಾಮಿ ರೈತರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

suddiyaana