ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್ ಆರೋಪ- ನಟ ಚೇತನ್ ಅರೆಸ್ಟ್, 14 ದಿನಗಳ ನ್ಯಾಯಾಂಗ ಬಂಧನ
ವಿವಾದಕ್ಕೂ ನಟ ಚೇತನ್‌ಗೂ ಎಲ್ಲಿಲ್ಲದ ನಂಟು. ಈಗ ನಟ ಚೇತನ್ ಮತ್ತೆ ಅರೆಸ್ಟ್ ಆಗಿದ್ದಾರೆ. ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ಆರೋಪದ ಮೇಲೆ ನಟ ಚೇತನ್ ಅರೆಸ್ಟ್ ಆಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚೇತನ್ ವಿರುದ್ಧ, ಐಪಿಸಿ ಸೆಕ್ಷನ್ 295A, 505B ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಇಂದು ಬೆಳಗ್ಗೆ ಚೇತನ್ ಅವರನ್ನು ಬಂಧಿಸಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಈ ಪ್ರಕರಣವನ್ನು ವಿಚಾರಣೆ ಮಾಡಿದ 32ನೇ ಎಸಿಎಂಎಂ ನ್ಯಾಯಾಲಯವು ಚೇತನ್‌ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶವನ್ನು ಹೊರಡಿಸಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧೆ ಮಾಡುವಂತೆ ಪಟ್ಟು – ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ!
ಹಿಂದೂಪರ ಸಂಘಟನೆಗಳು ಚೇತನ್ ವಿರುದ್ಧ ದೂರು ನೀಡಿದ್ದವು. ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಮತ್ತೊಂದೆಡೆ ನಟ ಚೇತನ್ ಪರ ವಕೀಲರು, ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹಿಂದುತ್ವ ವಿರೋಧಿ ಪೋಸ್ಟ್ ಅನ್ನು ನಟ ಚೇತನ್ ಅವರೇ ಬರೆದಿದ್ದಾರೆ ಅನ್ನೋದಕ್ಕೆ ಸಾಕ್ಷಿ ಇಲ್ಲ. ಈ ಬಗ್ಗೆ ಪೊಲೀಸರು ಸುಳ್ಳು ಕೇಸ್ ಅನ್ನು ದಾಖಲಿಸಿಕೊಂಡಿದ್ದಾರೆ. ಹೀಗಾಗಿ, ಚೇತನ್ ಅವರನ್ನು ಬಿಡುಗಡೆ ಮಾಡಬೇಕು ಎಂದು ವಾದ ಮಂಡಿಸಿದ್ದಾರೆ. ಆದರೆ, ಈ ಬಗ್ಗೆ ಪೂರ್ಣ ಪ್ರಮಾಣದಲ್ಲಿ ವಿಚಾರಣೆ ನಡೆಸುವ ಉದ್ದೇಶದಿಂದ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಚೇತನ್ ಟ್ವೀಟ್‌ನಲ್ಲಿ ಏನಿದೆ?
‘ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ.
ಸಾವರ್ಕರ್ ಹೇಳಿಕೆ : ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಇದು ಒಂದು ಸುಳ್ಳು.
1992ರಲ್ಲಿ: ಬಾಬರಿ ಮಸೀದಿ ‘ರಾಮನ ಜನ್ಮಭೂಮಿ’ ಇದು ಒಂದು ಸುಳ್ಳು.
ಈಗ 2023ರಲ್ಲಿ: ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು- ಇದು ಕೂಡ ಒಂದು ಸುಳ್ಳು. ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು. ಸತ್ಯವೇ ಸಮಾನತೆ’ ಎಂದು ಅವರು ಬರೆದುಕೊಂಡಿದ್ದರು.