ಮತ್ತೆ ಶುರುವಾಯ್ತು ಕೊರೊನಾ ಆತಂಕ – ಆರೋಗ್ಯ ಇಲಾಖೆ ಸಲಹಾ ಪಟ್ಟಿ ಬಿಡುಗಡೆ
ಹೋದೆಯಾ ಪಿಶಾಚಿ ಅಂದ್ರೆ ಬಂದೆಯಾ ಗವಾಕ್ಷಿಲಿ ಅಂತಾ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆಯಾಗ್ತಿದೆ. ಕರ್ನಾಟಕ ಸೇರಿದಂತೆ ದೇಶದಲ್ಲಿ ಕೊರೋನಾ ಸೋಂಕು ಪುನಃ ಉಲ್ಬಣಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ4.46 ಕೋಟಿಗೆ ಏರಿದೆ. 126 ದಿನಗಳ ನಂತರ ಮಾರ್ಚ್ 18 ರಂದು, 24 ಗಂಟೆಗಳಲ್ಲಿ 800 ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದೆ. ಇದು ಕಳೆದ ನಾಲ್ಕು ತಿಂಗಳುಗಳಲ್ಲಿ ಅತಿ ಹೆಚ್ಚು ದಾಖಲಾದ ಪ್ರಕರಣಗಳು.
ಇದನ್ನೂ ಓದಿ: ಮುಹೂರ್ತಕ್ಕೂ ಮುನ್ನವೇ ಉರಿಗೌಡ-ನಂಜೇಗೌಡ ಚಿತ್ರಕ್ಕೆ ಬ್ರೇಕ್ – ಮುನಿರತ್ನಗೆ ನಿರ್ಮಲಾನಂದನಾಥ ಶ್ರೀಗಳು ಹೇಳಿದ್ದೇನು..?
ರಾಷ್ಟ್ರೀಯ ಕೋವಿಡ್ ಚೇತರಿಕೆ ದರವು 98.80 ಪ್ರತಿಶತದಷ್ಟಿದೆ. ಕೇರಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ನಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಕರ್ನಾಟಕದಲ್ಲಿ ಶುಕ್ರವಾರ 127 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ.
‘ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಪೌಷ್ಠಿಕ ಆಹಾರ ಸೇವಿಸಿ’
ಕೊರೋನಾ ಸೋಂಕು ಪುನಃ ಉಲ್ಬಣಿಸುವ ಸಾಧ್ಯತೆ ಇರುವುದರಿಂದ ಸೋಂಕಿನ ವಿರುದ್ಧ ಹೋರಾಡಲು ಉತ್ತಮ ಪೌಷ್ಟಿಕ, ತಾಜಾ ಹಾಗೂ ಶುದ್ಧ ಆಹಾರ ಸೇವಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಸಲಹಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪೌಷ್ಟಿಕ, ತಾಜಾ ಹಾಗೂ ಶುದ್ಧ ಆಹಾರ ಸೇವಿಸಬೇಕು. ಉಪ್ಪು, ಸಕ್ಕರೆಯನ್ನು ಕಡಿಮೆ ಸೇವಿಸಬೇಕು. ಮನೆಯಲ್ಲಿಯೇ ಅಡುಗೆ ಮಾಡಿ, ಹೊರಗಡೆ ತಿನ್ನುವುದನ್ನು ತ್ಯಜಿಸಬೇಕು ಎಂಬುದನ್ನೂ ಸೇರಿದಂತೆ 20ಕ್ಕೂ ಹೆಚ್ಚು ಆಹಾರ ಸೇವನೆ ಸಲಹೆಗಳನ್ನು ನೀಡಿದೆ. ಪ್ರತಿ ದಿನ ತಾಜಾ ಮತ್ತು ಸಂಸ್ಕರಿಸದ ಆಹಾರ ಸೇವಿಸಬೇಕು. ಹಣ್ಣುಗಳು, ಹಸಿರು ತರಕಾರಿ, ಸೊಪ್ಪುಗಳು, ದ್ವಿದಳ ಧಾನ್ಯಗಳು, ಮೆಕ್ಕೆ ಜೋಳ, ರಾಗಿ, ಗೋಧಿಯಂತಹ ಧಾನ್ಯಗಳು, ಆಲೂಗಡ್ಡೆ, ಗೆಣಸಿನಂತಹ ಬೇರುಗಳು, ಮಾಂಸ, ಮೊಟ್ಟೆ, ಮೀನು, ಹಾಲನ್ನು ಸೇವಿಸಬಹುದು. ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಹೊತ್ತು ಬೇಯಿಸಿದರೆ ಅವುಗಳಲ್ಲಿನ ಜೀವಸತ್ವಗಳು ನಾಶವಾಗುತ್ತವೆ ಎಂದು ಹೇಳಿದೆ. ಮಕ್ಕಳಿಗೆ ಪ್ರತಿ ದಿನ ಮೂರು ಬಾರಿ ಹಾಲು ಕುಡಿಸಬೇಕು. 2 ವರ್ಷದೊಳಗಿನ ಮಕ್ಕಳಿಗೆ ಸಂಪೂರ್ಣ ಹಾಲು, 2 ವರ್ಷ ಮೇಲ್ಪಟ್ಟಮಕ್ಕಳಿಗೆ ಕೆನೆ ತೆಗೆದ ಹಾಲನ್ನು ನೀಡಬೇಕು. ಮಧುಮೇಹ, ಹೆಚ್ಚು ರಕ್ತದೊತ್ತಡ, ಬೊಜ್ಜುತನ, ಹೃದ್ರೋಗ, ಕ್ಯಾನ್ಸರ್, ಮೂತ್ರಪಿಂಡ ರೋಗ ಇತ್ಯಾದಿಗಳಿಂದ ಬಳಲುತ್ತಿರುವವರು ವೈದ್ಯಕೀಯ ಸಲಹೆಯನ್ನು ಕಡ್ಡಾಯವಾಗಿ ಪಡೆದು ವೈದ್ಯರು, ಪೌಷ್ಟಿಕ ಸಮಾಲೋಚಕರು ಸೂಚಿಸಿದ ಆಹಾರ ಸೇವಿಸಬೇಕು ಎಂಬುದನ್ನು ಸೇರಿಸಿದಂತೆ 20 ಆರೋಗ್ಯ ಸಲಹೆಗಳನ್ನು ನೀಡಿದ್ದಾರೆ.
‘ಐಪಿಎಲ್ ಮೇಲೂ ಕೊರೋನಾ ಕರಿನೆರಳು’
ಐಪಿಎಲ್ ಪಂದ್ಯಾವಳಿಗೆ ಕೊರೋನಾ ಮಾರ್ಗಸೂಚಿ ನೀಡಲಾಗಿದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ಆಡಳಿತವು ಮುನ್ನೆಚ್ಚರಿಕಾ ಕ್ರಮವಾಗಿ ಈ ವಾರ ಎಲ್ಲಾ ಫ್ರಾಂಚೈಸಿಗಳಿಗೆ ವೈದ್ಯಕೀಯ ಮಾರ್ಗದರ್ಶಿನೀಡಿದೆ. ಇದರ ಪ್ರಕಾರ, ಒಂದು ವೇಳೆ ಆಟಗಾರರಿಗೆ ಕೊರೊನಾ ಪಾಸಿಟಿವ್ ಬಂದರೆ, ಎರಡು ಕೊರೊನಾ ವರದಿಗಳು ನೆಗೆಟಿವ್ ಬಂದ ಮೇಲೆ ಮಾತ್ರ ಆಡಲು ಅವಕಾಶ ನೀಡಲಾಗುತ್ತದೆ. ಸೋಂಕಿತ ಆಟಗಾರ 7 ದಿನಗಳ ಕಾಲ ಐಸೋಲೇಶನ್ನಲ್ಲಿ ಇರಬೇಕಾಗುತ್ತದೆ. ಈ ಮಾರ್ಗಸೂಚಿಯಲ್ಲಿ ಕೊರೊನಾ ಸೋಂಕಿತ ಆಟಗಾರರು 7 ದಿನಗಳ ಕಾಲ ಪ್ರತ್ಯೇಕವಾಗಿರಬೇಕು ಎಂದು ಬರೆಯಲಾಗಿದೆ. ಐದನೇ ದಿನ, ಅವರು ಆರ್ಟಿಪಿಸಿಆರ್ ಪರೀಕ್ಷೆಯನ್ನು ಮಾಡಬಹುದು. ಕಳೆದ 24 ಗಂಟೆಗಳಲ್ಲಿ ಯಾವುದೇ ಔಷಧಿ ಇಲ್ಲದೆ ಅವರಲ್ಲಿ ಕೊರೊನಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದಾದರೆ ಐದನೇ ಮತ್ತು ಆರನೇ ದಿನದಂದು ಎರಡು RTPCR ಪರೀಕ್ಷೆಗಳ ವರದಿಯು ನಕಾರಾತ್ಮಕವಾಗಿ ಬಂದ ನಂತರವೇ ಆಟಗಾರರು ತಂಡವನ್ನು ಸೇರಲು ಸಾಧ್ಯವಾಗುತ್ತದೆ. ಐಪಿಎಲ್ ಆರಂಭವಾಗಲು ಕೆಲ ದಿನಗಳು ಮಾತ್ರ ಬಾಕಿ ಇರುವುದರಿಂದ ಪಂದ್ಯಗಳ ಟಿಕೆಟ್ಗಳು ಸಹ ಮಾರಾಟವಾಗುತ್ತಿದೆ. ಆದರೆ ಒಂದೊಮ್ಮೆ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಳವಾದಲ್ಲಿ ಮತ್ತೆ ಮೈದಾನಕ್ಕೆ ಪ್ರೇಕ್ಷಕರಿಗೆ ನೋ ಎಂಟ್ರಿ ಅನ್ನೋ ಸಾಧ್ಯತೆಯೂ ಇದೆ.