‘ಗುಳಿಗ’ ದೈವಕ್ಕೆ ಅವಮಾನ ಮಾಡಿದ್ರಾ ‘ಆರಗ’ ? – ಜ್ಞಾನೇಂದ್ರನ ಅಜ್ಞಾನಕ್ಕೆ ದೈವ ಆರಾಧಕರು ಗರಂ..!

‘ಗುಳಿಗ’ ದೈವಕ್ಕೆ ಅವಮಾನ ಮಾಡಿದ್ರಾ ‘ಆರಗ’ ? – ಜ್ಞಾನೇಂದ್ರನ ಅಜ್ಞಾನಕ್ಕೆ ದೈವ ಆರಾಧಕರು ಗರಂ..!

ಗೃಹಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ಮುಖಂಡನನ್ನು ಟೀಕಿಸುವ ಭರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ತುಳುನಾಡಿನ ದೈವ ‘ಗುಳಿಗ’ವನ್ನು ಅವಮಾನಿಸಿದ್ದಾರೆ ಎಂದು ದೈವ ಆರಾಧಾಕರು ಗರಂ ಆಗಿದ್ದಾರೆ. ಗೃಹಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಸಾಕಷ್ಟು ವಿವಾದಕ್ಕೂ ಕಾರಣವಾಗಿದೆ. ತೀರ್ಥಹಳ್ಳಿಯ ರಂಗ ಸಿಂಗಾರ ಕಲಾವಿದರ ತಂಡದ ಗೌರವ ಅಧ್ಯಕ್ಷ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಸಹಕಾರದಲ್ಲಿ ‘ಶಿವದೂತೆ ಗುಳಿಗೆ’ ಎಂಬ ತುಳು ನಾಟಕವನ್ನು ಮಾರ್ಚ್ 14 ರ ಸಂಜೆ, ತೀರ್ಥಳ್ಳಿಯಲ್ಲಿ ಆಯೋಜನೆ ಮಾಡಲಾಗಿತ್ತು. ಈ ನಾಟಕ ಪ್ರದರ್ಶನಕ್ಕೆ ತೀರ್ಥಹಳ್ಳಿ ಪಟ್ಟಣದ ತುಂಬೆಲ್ಲ ಫ್ಲೆಕ್ಸ್ ಬ್ಯಾನರ್ ಗಳನ್ನು ಹಾಕಲಾಗಿತ್ತು. ಈ ನಾಟಕದ ಪ್ರಚಾರ ಸಮಯದಲ್ಲಿ ಪಟ್ಟಣದ ತುಂಬೆಲ್ಲ ತುಳು ನಾಡಿನ ಬಾವುಟಗಳು ರಾರಾಜಿಸುತ್ತಿದ್ದವು. ಅಲ್ಲಿಂದಲೇ ಈ ಪ್ರದರ್ಶನ ರಾಜಕೀಯ ತಿರುವು ಪಡೆದುಕೊಂಡಿತ್ತು.

ಇದನ್ನೂ ಓದಿ:  “ಬಿಜೆಪಿ ಆಡಳಿತದಲ್ಲಿ ಮನುಷ್ಯನ ಜೀವಕ್ಕೆ ಬೆಲೆ ಇದೆಯಾ?” – ಆರಗ ಜ್ಞಾನೇಂದ್ರಗೆ ಟ್ವೀಟ್ ಮೂಲಕ ಜೆಡಿಎಸ್ ಪ್ರಶ್ನೆ

ಈ ನಾಟಕ ನಡೆದ ಮರುದಿನವೇ ತೀರ್ಥಹಳ್ಳಿಯಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್ ವಿರುದ್ಧ ಮಾತಾಡುವ ಭರದಲ್ಲಿ ಗುಳಿಗ ದೈವವನ್ನೇ ಅವಮಾನಿಸಿದ್ದಾರೆ. ‘ಇಲ್ಲಿ ನಾನು ನೋಡುತ್ತಾ ಬಂದೆ, ನಿನ್ನೆಯಿಂದ ಎಂತದೋ ಗುಳಿಗೆ – ಗುಳಿಗೆ ಅಂತ ಹಾಕಿದ್ದಾರೆ. ಬಹಳ ಅಪಾಯ ಇದು..! ಯಾವ ಗುಳಿಗೆ ಇವರು ಕೊಡ್ತಾರೆ ಅಂತ ಗೊತ್ತಿಲ್ಲ..! ಜಾಪಾಳ್ ಗುಳಿಗೆ ಕೊಟ್ಟರು ಕೊಡಬಹುದು. ಏಕೆಂದರೆ ಇವರು ಹೊಸ ಹೊಸ ನಾಟಕಗಳನ್ನ ಶುರು ಮಾಡಿದ್ದಾರೆ ಎಂದು ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಹಾಕಿದ್ದ ನಾಟಕದ ಪೋಸ್ಟರ್ ವಿಚಾರವಾಗಿ ವ್ಯಂಗ್ಯ ಮಾಡಿದ್ದರು. ಗೃಹಸಚಿವರು ಆಡಿರುವ ಮಾತು ಈಗ ದೈವ ಆರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಗೃಹಸಚಿವರು ಕರಾವಳಿಯ ದೈವ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು. ಗೃಹ ಸಚಿವರು ಫ್ಲೆಕ್ಸ್ ನೋಡಿ ಗುಳಿಗೆ-ಗುಳಿಗೆ ಎಂದು ಹೇಳಿದ್ದಾರೆ. ನಮ್ಮ ದೈವವನ್ನು ಒಂದು ಮಾತ್ರೆಗೆ ಹೋಲಿಸಿದ್ದಾರೆ. ನಮ್ಮ ದೈವವೇ ಅವರಿಗೆ ಉತ್ತರ ಕೊಡಬೇಕು. ಎಲ್ಲಾ ಗುಳಿಗ ಶಕ್ತಿಗಳು ಒಟ್ಟು ಸೇರಿ ಅವರಿಗೆ ತಕ್ಕ ಶಾಸ್ತಿ ಮಾಡಬೇಕು. ದೈವ-ದೇವರ ಸನ್ನಿಧಿಯಲ್ಲಿ ಬಂದು ಗೃಹಸಚಿವರು ಕ್ಷಮೆ ಯಾಚಿಸಬೇಕು ಎಂದು ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಪ್ರಭಾಕರ ಶಾಂತಿಕೋಡಿ ಒತ್ತಾಯಿಸಿದ್ದಾರೆ ಒಂದು ವಾರದ ಗಡುವು ನೀಡುತ್ತೇವೆ. ಒಂದು ವಾರದಲ್ಲಿ ಬರದೆ ಇದ್ದರೆ ಮಂಗಳೂರು ಭೇಟಿ ಕಾರ್ಯಕ್ರಮದಲ್ಲಿ ಘೇರಾವ್ ಹಾಕುತ್ತೇವೆ. ಇನ್ಮುಂದೆ ದೈವಾರಾಧನೆಯನ್ನು ನಾಟಕ, ಯಕ್ಷಗಾನದಲ್ಲಿ ಬಳಕೆ ಮಾಡಬೇಡಿ. ದೈವರಾಧನೆಗೆ ಈ ರೀತಿ ನಡೆಯುವ ಅಪಚಾರ ತಪ್ಪಿಸಲು ದೈವರಾಧಕರ ಸಮಾವೇಶ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಆರಗ ಜ್ಞಾನೇಂದ್ರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

suddiyaana