ಏಷ್ಯಾದಲ್ಲೇ ಮೊದಲ ಬಾರಿಗೆ ಎರಡೂ ತೋಳುಗಳ ಕಸಿ – ಭಾರತೀಯ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
ಜೈಪುರ: ಏಷ್ಯಾದಲ್ಲೇ ಇದೇ ಮೊದಲ ಬಾರಿಗೆ ಭಾರತೀಯ ವೈದ್ಯರು ಎರಡು ಕೈಗಳನ್ನು ಕಳೆದುಕೊಂಡ ವ್ಯಕ್ತಿಗೆ ಯಶಸ್ವಿಯಾಗಿ ತೋಳುಗಳ ಕಸಿ ಮಾಡಿದ್ದಾರೆ.
ಮುಂಬೈನ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ರಾಜಸ್ಥಾನದ ಅಜ್ಮೀರ್ ಮೂಲದ ಪ್ರೇಮರಾಮ್ (33) ಎರಡೂ ತೋಳುಗಳಿಗೆ ಕಸಿಮಾಡಿಕೊಂಡ ಏಷ್ಯಾದ ಮೊದಲ ವ್ಯಕ್ತಿ.
ಪ್ರೇಮರಾಮ್ 10 ವರ್ಷಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಕಂಬದಿಂದ ಶಾಕ್ ಹೊಡೆದಿತ್ತು. ಈ ವೇಳೆ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಪ್ರೇಮರಾಮ್ ಅವರ ಜೀವ ಉಳಿಯಬೇಕಾದರೆ ಅವರ ಎರಡೂ ಕೈಗಳನ್ನು ಕತ್ತರಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದು, ಇದಕ್ಕೆ ಕುಟುಂಬಸ್ಥರು ಸಮ್ಮತಿ ಸೂಚಿಸಿದ್ದರು.
ಇದನ್ನೂ ಓದಿ: ಬಾವಿಗೆ ಬಿದ್ದ ಆನೆಮರಿ ರಕ್ಷಣೆ – ಕಾಡಿಗೆ ಬಿಡುವ ವೇಳೆ ಕಣ್ಣೀರಿಟ್ಟ ಅರಣ್ಯಾಧಿಕಾರಿಗಳು
ಪ್ರೇಮರಾಮ್ ಎರಡು ಕೈಗಳನ್ನು ಕಳೆದುಕೊಂಡ ಬಳಿಕ ಆತನಿಗೆ ಕೃತಕ ಕೈಗಳನ್ನು ಅಳವಡಿಸಲು ಪ್ರಯತ್ನಿಸಲಾಗುತ್ತದೆ. ಆದರೆ ಅದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಛಲ ಬಿಡದ ಪ್ರೇಮರಾಮ್ ಕೈಗಳಿಂದ ಮಾಡುವ ಕೆಲಸಗಳನ್ನು ಕಾಲಿನಿಂದ ಮಾಡಲು ಅಭ್ಯಾಸ ಮಾಡುತ್ತಾರೆ. ಅಷ್ಟೇ ಅಲ್ಲದೇ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ. ಇತ್ತೀಚೆಗಷ್ಟೇ ಅವರು ಬಿಇಡಿ ಶಿಕ್ಷಣವನ್ನು ಮುಗಿಸಿದ್ದಾರೆ.
ಇದೀಗ ಹತ್ತಾರು ವರ್ಷಗಳ ಬಳಿಕ ಪ್ರೇಮರಾಮ್ ತನ್ನ ಎರಡು ಕೈಗಳನ್ನು ಮರಳಿ ಪಡೆಯಬೇಕೆಂಬ ಕನಸು ನನಸಾಗಿದೆ. ಮುಂಬೈನ್ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡ ಸುಮಾರು 16 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ತೋಳುಗಳ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಪ್ರೇಮರಾಮ್ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಚಿಕಿತ್ಸೆ ಮುಂದಿನ 18 ರಿಂದ 24 ತಿಂಗಳವರೆಗೆ ಮುಂದುವರೆಯಲಿದೆ.
ಈ ಬಗ್ಗೆ ಪ್ರೇಮರಾಮ್ ಮಾತನಾಡಿದ್ದು, ‘ ನಾನು ಎರಡು ಕೈಗಳನ್ನು ಕಳೆದುಕೊಂಡು ತುಂಬಾ ನೋವಿನಲ್ಲಿದ್ದೆ. ದಿನನಿತ್ಯದ ನನ್ನ ಕೆಲಸಗಳನ್ನು ಮಾಡಲು ಕುಟುಂಬಸ್ಥರನ್ನು ಅವಲಂಭಿಸಬೇಕಿತ್ತು. ನಾನು ಸೋಲು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಒಂದಲ್ಲ ಒಂದು ದಿನ ಈ ಸಮಸ್ಯೆಗೆ ಪರಿಹಾರ ಸಿಗುತ್ತೆ ಅನ್ನೋ ನಂಬಿಕೆ ಇತ್ತು. ನನ್ನ ಕುಟುಂಬಸ್ಥರಿಗೆ ಹಾಗೂ ವೈದ್ಯರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.