ರಾಜ್ಯದಲ್ಲಿ ಅಬ್ಬರಿಸಿದ ಮಳೆ – ಸಿಡಿಲಿಗೆ ರೈತ ಬಲಿ – ಹಾಳಾಗಿ ಹೋಯ್ತು ಸಾವಿರಾರು ಎಕರೆ ಬೆಳೆ

ರಾಜ್ಯದಲ್ಲಿ ಅಬ್ಬರಿಸಿದ ಮಳೆ – ಸಿಡಿಲಿಗೆ ರೈತ ಬಲಿ – ಹಾಳಾಗಿ ಹೋಯ್ತು ಸಾವಿರಾರು ಎಕರೆ ಬೆಳೆ

ಕಳೆದ ಮೂರು ದಿನಗಳಿಂದ ಮುಂಗಾರು ಪೂರ್ವ ಮಳೆ ಆರಂಭವಾಗಿದೆ. ಹಲವೆಡೆ ಧಾರಾಕಾರ ಮಳೆ ಜೊತೆಗೆ ಆಲಿಕಲ್ಲು ಮಳೆ ಸುರಿದಿದ್ದು ರೈತರಿಗೆ ಅಪಾರ ನಷ್ಟವಾಗಿದೆ. ಅದರಲ್ಲೂ ರಾಜ್ಯದ ಗಡಿ ಜಿಲ್ಲೆಗಳಾದ ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸುರಿದ ಭಾರಿ ಪ್ರಮಾಣದ ಮಳೆಗೆ ಸಾವಿರಾರು ಎಕರೆ ಬೆಳೆ ನಷ್ಟವಾಗಿದೆ.  ಬೀದರ್‌ ಜಿಲ್ಲೆಯ ಕಮಲನಗರ ತಾಲ್ಲೂಕಿನ ಸೋನಾಳ ಗ್ರಾಮದ ರೈತ ಮಾಧರಾವ ಬೀರ್ಗೆ ( 37) ಸಿಡಿಲು ಬಡಿದು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:  ಉದ್ಘಾಟನೆಯಾದ ಒಂದೇ ವಾರಕ್ಕೆ ಅವಾಂತರ – ಹೊಳೆಯಂತಾದ ಬೆಂಗಳೂರು-ಮೈಸೂರು ದಶಪಥ

ಎಂದಿನಂತೆ ಹೊಲಕ್ಕೆ ಹೋಗಿದ್ದ ರೈತ ಮಾಧರಾವ ಬೀರ್ಗೆ, ಮಳೆಗೆ ಸಿಲುಕಿದ್ದಾರೆ. ಮಳೆ ಕಡಿಮೆಯಾಗುವ ತನಕ ಮರದ ಬಳಿ ಆಶ್ರಯ ಪಡೆದುಕೊಂಡಿದ್ದಾರೆ. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮತ್ತೊಂದೆಡೆ ಭಾಲ್ಕಿಯ ಕೂಡಲಿ ಗ್ರಾಮದಲ್ಲಿ ಕೋಳಿ ಸಾಕಾಣಿಕೆಗೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯ ಭಾರಕ್ಕೆ ಕುಸಿದು ಬಿದ್ದಿದೆ. ಇದರ ಪರಿಣಾಮ ನೂರಾರು ಕೋಳಿಗಳು ಸಾವನ್ನಪ್ಪಿವೆ. ಜೊತೆಗೆ ಶೆಡ್‌ನಿಂದ ಹೊರಬಂದ ಕೋಳಿಗಳು ಆಲಿಕಲ್ಲು ಮಳೆಗೆ ಸಿಲುಕಿ ಸಾವನ್ನಪ್ಪಿವೆ. ಇದರಿಂದ ಕೋಳಿ ಸಾಕಣಿಕೆ ಮಾಡುತ್ತಿದ್ದ ರೈತನಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಇನ್ನು ಕೆಲವು ಗ್ರಾಮಗಳಲ್ಲಿ ಕೋಳಿಫಾರ್ಮ್‌ಗೆ ನಿರ್ಮಿಸಲಾಗಿದ್ದ ಶೆಡ್‌ಗಳು ಹಾರಿಕೊಂಡು ಹೋಗಿವೆ.

ಬೆಳೆಗಳನ್ನ ಹಾಳು ಮಾಡಿದ ಮಳೆ

ಬೀದರ್‌ನಲ್ಲಿ ಬಿಳಿಜೋಳದ ಬೆಳೆ ಆಲಿಕಲ್ಲು ಮಳೆಯಿಂದ ಮಣ್ಣು ಪಾಲಾಗಿದೆ. ಸಾವಿರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಜೋಳ ಕಟಾವಿಗೆ ಬಂದಿತ್ತು. ಇನ್ನು 15 ದಿನಗಳಲ್ಲಿ ಕಟಾವು ಮಾಡಬೇಕಿದ್ದ ಸಾವಿರಾರು ಎಕರೆ ಜೋಳದ ಬೆಳೆ ಸಂಪೂರ್ಣ ನಾಶವಾಗಿದೆ. ಆಲಿಕಲ್ಲು  ಮಳೆಯಿಂದ ಜೋಳದ ಗಿಡಗಳು ಸಂಪೂರ್ಣ ಭಾಗಿದ್ದು, ಜೋಳ ಮಣ್ಣು ಪಾಲಾಗಿದೆ. ಇನ್ನು ಕಟಾವು ಮಾಡಿ, ಒಕ್ಕಣೆ ಮಾಡಿದರೂ ಅದನ್ನು ಮಾರಾಟ ಮಾಡಲು ಬೆಲೆ ಸಿಗುವುದಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಇನ್ನು ಈ ವರ್ಷ ಮಾವಿನ ಫಸಲು ಕೂಡಾ ಚೆನ್ನಾಗಿ ಬಂದಿತ್ತು. ಆಲಿಕಲ್ಲು ಮಳೆಯಿಂದ ಕಾಯಿಗಳಿಗೆ ಹೊಡೆತ ಬಿದ್ದು ಬಹುತೇಕ ಕಾಯಿಗಳು ಉದುರಿವೆ.

suddiyaana