ಬಾವಿಗೆ ಬಿದ್ದ ಆನೆಮರಿ ರಕ್ಷಣೆ – ಕಾಡಿಗೆ ಬಿಡುವ ವೇಳೆ ಕಣ್ಣೀರಿಟ್ಟ ಅರಣ್ಯಾಧಿಕಾರಿಗಳು
ಚೆನ್ನೈ: ಬಾವಿಗೆ ಬಿದ್ದ ಆನೆಮರಿಯನ್ನು ರಕ್ಷಿಸಿ ಕಾಡಿಗೆ ಬಿಡುವ ವೇಳೆ ಅರಣ್ಯಾಧಿಕಾರಿಗಳು ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ಚೆನ್ನೈನ ಪೆನ್ನಾಗರಂನಲ್ಲಿ ನಡೆದಿದೆ.
ಸುಮಾರು ನಾಲ್ಕು ತಿಂಗಳ ಪ್ರಾಯದ ಗಂಡು ಆನೆಮರಿಯೊಂದು ತಾಯಿಯಿಂದ ಬೇರ್ಪಟ್ಟು ತಾಯಿಯನ್ನು ಹುಡುಕಿಕೊಂಡು ಕೃಷಿ ಭೂಮಿಯತ್ತ ಆಗಮಿಸಿತ್ತು. ಈ ವೇಳೆ ಜಮೀನಿನಲ್ಲಿದ್ದ ಬಾವಿಯೊಳಗೆ ಆನೆ ಮರಿ ಬಿದ್ದಿದೆ. ಇದನ್ನು ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಇರಲಾರದೆ ಇರುವೆ ಬಿಟ್ಟುಕೊಂಡ ಅಜ್ಜ – ಮೊಸಳೆ ಮುಂದೆ ಬೇಕಿತ್ತಾ ಸಾಹಸ?
ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮಾಡಿ ಆನೆ ಮರಿಯನ್ನು ರಕ್ಷಿಸಿದ್ದಾರೆ. ಬಳಿಕ ಹೊಗೇನಕಲ್ ಅರಣ್ಯದ ಒಟ್ಟರಪಟ್ಟಿ ವಿಭಾಗಕ್ಕೆ ಒಪ್ಪಿಸಲಾಗಿತ್ತು. ಅಲ್ಲಿ ಇಲಾಖೆಯ ಪಶು ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಅರಣ್ಯ ಸಿಬ್ಬಂದಿ ಮಹೇಂದ್ರನ್ ಆರೈಕೆ ಮಾಡುತ್ತಿದ್ದರು.
ಆನೆಮರಿ ಅರಣ್ಯ ಇಲಾಖೆಯ ಸಿಬ್ಬಂದಿಯ ಆರೈಕೆಯಿಂದ ಚೇತರಿಸಿಕೊಂಡು ಆರೋಗ್ಯವಾಗಿದೆ. ಹೀಗಾಗಿ ಆನೆಯನ್ನು ಪುನಃ ಕಾಡಿಗೆ ಬಿಡಲು ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದರು. ಅದರನ್ವಯ ಮರಿ ಆನೆಯನ್ನು ಅರಣ್ಯ ಇಲಾಖೆಯ ವಿಶೇಷ ವಾಹನದಲ್ಲಿ ಧರ್ಮಪುರಿ ಜಿಲ್ಲೆಯ ಹೊಗೇನಕಲ್‌ನಿಂದ ಕೃಷ್ಣಗಿರಿ ಜಿಲ್ಲೆಯ ಅಂಚೇಟಿ ಮೂಲಕ ಮುದುಮಲೈಗೆ ಸಾಗಿಸಲಾಗಿದೆ. ಈ ವೇಳೆ ವಾರಗಳ ಕಾಲ ಆರೈಕೆ ಮಾಡಿ, ಆನೆಯ ಪ್ರೀತಿಗೆ ಪಾತ್ರರಾಗಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಯನ್ನು ಕಾಡಿಗೆ ಬಿಡುವ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
Baby elephant that fell into a well in Dharmapuri Distt in Tamil Nadu rescued by the Forest Department : pic.twitter.com/0vPG17G9JB
— All India Radio News (@airnewsalerts) March 11, 2023