ಸ್ಮಾರ್ಟ್ ಸಿಟಿ ಬೆಂಗಳೂರಿಗೆ ಜಾಗತಿಕ ಮನ್ನಣೆ – ತಂಬಾಕು, ಧೂಮಪಾನ ನಿಯಂತ್ರಣ ವಿಶ್ವಕ್ಕೆ ಮಾದರಿ

ಸ್ಮಾರ್ಟ್ ಸಿಟಿ ಬೆಂಗಳೂರಿಗೆ ಜಾಗತಿಕ ಮನ್ನಣೆ – ತಂಬಾಕು, ಧೂಮಪಾನ ನಿಯಂತ್ರಣ ವಿಶ್ವಕ್ಕೆ ಮಾದರಿ

ನ್ಯೂಯಾರ್ಕ್: ಸ್ಮಾರ್ಟ್ ಸಿಟಿ ಬೆಂಗಳೂರು ಜಾಗತಿಕ ಪ್ರಶಸ್ತಿಯೊಂದಕ್ಕೆ ಭಾಜನವಾಗಿದೆ. ಧೂಮಪಾನ ನಿಯಂತ್ರಣ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಯಲು ಕೈಗೊಂಡ ಯಶಸ್ವಿ ಕ್ರಮಗಳಿಗಾಗಿ ಬೆಂಗಳೂರಿಗೆ ವಿಶ್ವ ಆರೋಗ್ಯ ಸಂಸ್ಥೆ ಬೆಂಬಲಿತ ಜಾಗತಿಕ ಮಟ್ಟದ ಹೆಲ್ತ್‌ ಸಿಟಿ ಪ್ರಶಸ್ತಿ ಲಭಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಬೆಂಬಲಿತ ಜಾಗತಿಕ ಪ್ರಶಸ್ತಿಗೆ ಜಗತ್ತಿನ 5 ನಗರಗಳು ಆಯ್ಕೆಯಾಗಿವೆ. ಅವುಗಳಲ್ಲಿ ಬೆಂಗಳೂರು, ಉರುಗ್ವೆಯ ಮೊಂಟೆವಿಡಿಯೋ, ಮೆಕ್ಸಿಕೋದ ಮೆಕ್ಸಿಕೋ ನಗರ, ಕೆನಡಾದ ವ್ಯಾಂಕೋವರ್‌, ಗ್ರೀಸ್‌ನ ಅಥೆನ್ಸ್‌ ನಗರಗಳು ಹೆಲ್ತ್‌ ಸಿಟಿ ಪ್ರಶಸ್ತಿಗೆ ಭಾಜನವಾಗಿದ್ದು, ಈ ಪ್ರಶಸ್ತಿಯ ಜೊತೆಗೆ 1 ಕೋಟಿ ರೂಪಾಯಿ ನಗದು ಒಳಗೊಂಡಿದೆ.

ಇದನ್ನೂ ಓದಿ: ಹೊರಾಂಗಣ ಆಟ ನಿಷೇಧಿಸಿದ ಉಡುಪಿ ಜಿಲ್ಲಾಡಳಿತ – ಕಾರ್ಮಿಕರ ಕೆಲಸದ ಸಮಯವನ್ನೂ ಬದಲಿಸಿದ್ದೇಕೆ  ಗೊತ್ತಾ..?

ಪ್ರಶಸ್ತಿ ಪಡೆದುಕೊಂಡ ನಗರಗಳು ತಮ್ಮ ನಗರದ ಜನರ ಆರೋಗ್ಯ ಕಾಪಾಡುವ ಮೂಲಕ, ನಗರಗಳನ್ನು ವಾಸಯೋಗ್ಯವನ್ನಾಗಿ ಮಾಡಿದೆ. ಅಷ್ಟೇ ಅಲ್ಲದೇ ಸಾಂಕ್ರಾಮಿಕವಲ್ಲದ ರೋಗ ತಡೆಗೆ ಮಹತ್ವದ ಕಾಣಿಕೆ ನೀಡಿವೆ. ಇತರೆ ನಗರಗಳು ಇಂಥ ಕ್ರಮಗಳನ್ನು ಪಾಲಿಸಲು ಈ ನಗರಗಳು ಮಾದರಿಯಾಗಿವೆ ಎಂದು ಪ್ರಶಸ್ತಿಗೆ ಪಾತ್ರವಾದ ನಗರಗಳ ಬಗ್ಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬಣ್ಣಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ.ಟೆಡ್ರೋಸ್‌ ಘೇಬ್ರಯೇಸಸ್‌ ಈ ಬಗ್ಗೆ ಮಾತನಾಡಿದ್ದು, ಬೆಂಗಳೂರು ತಂಬಾಕು ನಿಯಂತ್ರಣಕ್ಕೆ ಕೈಗೊಂಡ ಕ್ರಮ ಎಲ್ಲ ನಗರಗಳಿಗೂ ಮಾದರಿಯಾಗಿದೆ. ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಕ್ಕೆ ಇರುವ ಹಾಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದಕ್ಕಾಗಿ ಪ್ರಶಸ್ತಿ ಪ್ರಕಟಿಸಲಾಗಿದೆ. ತಮ್ಮ ನಗರದ ಜನರ ಆರೋಗ್ಯ ಕಾಪಾಡಲು ಮೇಯರ್‌ಗಳು ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬುದಕ್ಕೆ ಈ ನಗರಗಳ ಮೇಯರ್‌ಗಳು ಉದಾಹರಣೆಯಾಗುತ್ತಾರೆ ಎಂದು ಹೇಳಿದ್ದಾರೆ.

suddiyaana