ತಂದೆ, ಸಹೋದರರರಿಂದ ಮರೆಯಲಾರದ ಉಡುಗೊರೆ – ಮಗಳ ಮದುವೆಗೆ ಸಿಕ್ಕ ‘ತವರಿನ ಸಿರಿ’ ನೋಡಿ ಭಾವುಕ
ಹೆಣ್ಣು ಮಕ್ಕಳಿಗೆ ತವರಿನಿಂದ ಏನೇ ಸಿಕ್ಕಿದರು ಅದುವೇ ದೊಡ್ಡ ಉಡುಗೊರೆ. ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ತವರಿನ ಮೇಲೆ ಅಕ್ಕರೆ ಇನ್ನೂ ಹೆಚ್ಚಾಗಿಯೇ ಇರುತ್ತೆ. ಹೀಗಿರುವಾಗ ತವರಿನಿಂದ ಸಿರಿಯೇ ಉಡುಗೊರೆಯಾಗಿ ಸಿಕ್ಕರೆ ಅದಕ್ಕಿಂತ ಖುಷಿ ಇನ್ನೇನಿದೆ. ಇಲ್ಲಂತೂ ತವರಿನಿಂದ ಸಿಕ್ಕಿರುವುದು ಭರ್ಜರಿ ಉಡುಗೊರೆ. ಅಲ್ಲಿ ಕಂಡು ಬಂದಿದ್ದು ಭಾವುಕ ಸನ್ನಿವೇಶ. ಜೊತೆಗೆ ತವರಿನ ಪ್ರೀತಿ. ತವರಿನ ವಾತ್ಸಲ್ಯ.. ಉತ್ತರ ಭಾರತದಲ್ಲಿ ಮದುವೆಗಳಲ್ಲಿ ಮದುವೆಗೂ ಮೊದಲು ಮಮೆರ್ ಅಥವಾ ಮೈರಾ ಅಂದರೆ, ಮನೆಯಿಂದ ಗಂಡನ ಮನೆಗೆ ಹೋದ ಹೆಣ್ಣುಮಗಳ ಮಕ್ಕಳಿಗೆ ಮದುವೆ ಸಮಯದಲ್ಲಿ ಕೊಡುವ ಉಡುಗೊರೆಗೆ ವಿಶೇಷ ಸ್ಥಾನವಿದೆ. ಅಳಿಯ ಅಥವಾ ಸೊಸೆ ಯಾರದ್ದೇ ವಿವಾಹವಿದ್ದರೂ ಮನೆಗೆ ಬರುವ ಸೋದರ ಮಾವ ಸಿಹಿ ತಿಂಡಿ, ಆಭರಣ, ಸೀರೆ, ಹಣ ಮುಂತಾದ ಉಡುಗೊರೆಗಳನ್ನು ನೀಡಿ ಶುಭಕಾರ್ಯ ಶುರುಮಾಡುತ್ತಾರೆ. ಅದರಂತೆ ರಾಜಸ್ಥಾನದ ನಾಗಪುರದಲ್ಲೂ ಮಮೆರ್ ಕಾರ್ಯಕ್ರಮ ನಡೆದಿತ್ತು. ಇಲ್ಲಿ ವಧುವಿಗೆ ಸೋದರ ಮಾವನ ಕಡೆಯಿಂದ ಸಿಕ್ಕಿದ್ದು ಅಂತಿಂಥಾ ಉಡುಗೊರೆಯಲ್ಲ. ಮೂರು ಕೋಟಿ ರೂಪಾಯಿ ಮೊತ್ತದ ಭರ್ಜರಿ ಉಡುಗೊರೆ. ಹಾಗಂತಾ ಇವರು ಶ್ರೀಮಂತ ಕುಟುಂಬದವರಲ್ಲ. ಆದರೆ, ತಮಗೆ ಸಿರಿ ತಂದುಕೊಟ್ಟ ಮನೆ ಮಗಳನ್ನು ಇವರು ಮರೆತಿಲ್ಲ. ಹೀಗಾಗಿ ಮೊಮ್ಮಗಳ ಮದುವೆಗೆ ಭರ್ಜರಿ ಉಡುಗೊರೆ ನೀಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ಇದನ್ನೂ ಓದಿ: 18 ತಿಂಗಳ ಮಗುವಿನ ಕೈಯಲ್ಲಿ 43 ಬಗೆಯ ಕಲಾಕೃತಿ – ಅತ್ಯಂತ ಕಿರಿಯ ಕಲಾವಿದ ಬಿರುದು
ಹೀಗೆ ಸೋದರ ಮಾವಂದಿರ ಕೈಲಿ ಅದ್ದೂರಿ ಗಿಫ್ಟ್ ಪಡೆದ ಅದೃಷ್ಟವಂತ ವಧುವೇ ಅನುಷ್ಕಾ. ಈಕೆ ಘೇವರಿ ದೇವಿ ಹಾಗೂ ಭನ್ವರ್ಲಾಲ್ ಪೊತಲಿಯಾ ಎಂಬುವವರ ಪುತ್ರಿ. ಈಕೆಯ ಮದುವೆಗೆ ತಾಯಿಯ ತವರು ಕಡೆಯಿಂದ ಸಿಕ್ಕಿದ್ದು ಕೋಟಿ ಕೋಟಿ ರೂಪಾಯಿಗಳ ಉಡುಗೊರೆ. ಅನುಷ್ಕಾಳ ತಾಯಿ ಘೇವರಿ ದೇವಿಯ ತಂದೆ, ನಾಗಪುರದ ಬುರ್ಡಿ ಗ್ರಾಮದ ನಿವಾಸಿಯಾಗಿರುವ ಭನ್ವರ್ಲಾಲ್ ಘರ್ವ. ಇವರು ತಮ್ಮ ಮೂವರು ಗಂಡು ಮಕ್ಕಳಾದ ಹರೇಂದ್ರ, ರಾಮೇಶ್ವರ್ ಹಾಗೂ ರಾಜೇಂದ್ರ ಜೊತೆ ಮದುವೆ ಮನೆಗೆ ಆಗಮಿಸಿ ತಮ್ಮ ಮೊಮ್ಮಗಳಿಗೆ ಒಟ್ಟು ಮೂರು ಕೋಟಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಈ ವೇಳೆ ಘೇವರಿ ದೇವಿ ತನ್ನ ತವರಿನ ಸಿರಿ ಹಾಗೂ ಹೃದಯ ವೈಶಾಲ್ಯತೆಯನ್ನು ನೋಡಿ ಭಾವುಕರಾಗಿದ್ದಾರೆ. ಈ ವೇಳೆ ಮಾತನಾಡಿದ ವಧುವಿನ ತಾತ ಭನ್ವರ್ಲಾಲ್ ಘರ್ವ, ಘೇವರಿ ದೇವಿ ನಮ್ಮ ಏಕೈಕ ಮಗಳಾಗಿದ್ದು, ಆಕೆ ಹುಟ್ಟಿದ ನಂತರ ನಮ್ಮ ಮನೆ ಬೆಳಗಿತು. ಆಕೆಯ ನಂತರವೇ ಆಕೆಯ ಮೂವರು ಸಹೋದರರು ಸಾಕಷ್ಟು ಐಶ್ವರ್ಯಾ ಗಳಿಸಿ ಶ್ರೀಮಂತರಾದರು ಎಂದಿದ್ದಾರೆ. ಹೀಗಾಗಿ ಗರ್ವದಿಂದಲೇ ತನ್ನ ಗಂಡು ಮಕ್ಕಳ ಜೊತೆ ಮದುವೆ ಮನೆಗೆ ಬಂದ ತಂದೆ, ಹರಿವಾಣದಲ್ಲಿ ದುಡ್ಡು ಹಾಗೂ ಆಸ್ತಿಪತ್ರವನ್ನು ಇಟ್ಟು ಉಡುಗೊರೆ ನೀಡಿದ್ದಾರೆ. 80 ಲಕ್ಷ ರೂಪಾಯಿ ನಗದು, ಆಭರಣ, ಆಸ್ತಿಪತ್ರ ಹಾಗೂ ಒಂದು ಟ್ಯಾಕ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಮದುವೆ ಸಮಾರಂಭಕ್ಕೆ ಬಂದ ಸಂಬಂಧಿಕರೆಲ್ಲಾ ಇದ್ದರೆ ಇಂಥಾ ತವರು ಇರಬೇಕು ಎಂದು ಅಚ್ಚರಿ ಪಟ್ಟಿದ್ದಾರೆ.