ಕೆನಡಾಗೆ ತೆರಳಿದ್ದ 700 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ – ವಿದ್ಯಾಭ್ಯಾಸಕ್ಕೆ ಹೋದವರಿಗೆ ಆಗಿದ್ದೇನು?
ಸಾಕಷ್ಟು ವಿದ್ಯಾರ್ಥಿಗಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕು ಅಂತಾ ಕನಸು ಕಾಣುತ್ತಾರೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಅಲ್ಲದೇ ತಾವು ಹೋಗುವ ದೇಶದ ವೀಸಾ ಪಡೆಯಲು ಏಜೆಂಟ್ ಗಳ ಮೊರೆ ಹೋಗೋದನ್ನು ನೋಡಿದ್ದೇವೆ. ಈ ವೇಳೆ ವಿದ್ಯಾರ್ಥಿಗಳಿಂದ ಏಜೆಂಟ್ ಗಳು ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿರುವ ಬಗ್ಗೆ ಆಗಾಗ ಸುದ್ದಿಯಾಗುತ್ತಿರುತ್ತದೆ. ಇದೀಗ ಇಂತಹದ್ದೇ ಪ್ರಕರಣವೊಂದು ಬಯಲಾಗಿದೆ. ನಕಲಿ ವೀಸಾ ಹೊಂದಿದ್ದ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ಎರಿಕ್ ಗಾರ್ಸೆಟ್ಟಿ ನೇಮಕ – 2 ವರ್ಷಗಳ ಹಗ್ಗಜಗ್ಗಾಟಕ್ಕೆ ತೆರೆ!
ಭಾರತೀಯ ವಿದ್ಯಾರ್ಥಿಗಳು ಜಲಂಧರ್ ನಲ್ಲಿರುವ ಬ್ರಿಜೇಶ್ ಮಿಶ್ರಾ ನೇತೃತ್ವದ ಶಿಕ್ಷಣ ವಲಸೆ ಸೇವೆಗಳ ಮೂಲಕ ಅಧ್ಯಯನ ವೀಸಾಗಳಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಈ ಸಂಸ್ಥೆ ವಿಮಾನ ಟಿಕೆಟ್, ಭದ್ರತಾ ಠೇವಣಿಗಳನ್ನು ಹೊರತುಪಡಿಸಿ, ಪ್ರೀಮಿಯರ್ ಇಸ್ ಸ್ಟಿಟ್ಯೂಟ್ ಹಂಬರ್ ಕಾಲೇಜಿನ ಪ್ರವೇಶ ಶುಲ್ಕಸೇರಿದಂತೆ ಎಲ್ಲಾ ವೆಚ್ಚಗಳಿಗಾಗಿ ಸುಮಾರು 16 ಲಕ್ಷ ರೂಪಾಯಿ ಪಡೆದಿದ್ದರು.
ಭಾರತದ ವಿದ್ಯಾರ್ಥಿಗಳು 2018 – 19 ರಲ್ಲಿ ಅಧ್ಯಯನಕ್ಕಾಗಿ ಕೆನಡಾಗೆ ಹೋಗಿದ್ದರು. ಈ ವಿದ್ಯಾರ್ಥಿಗಳು ಕೆನಡಾದಲ್ಲಿ ಶಾಶ್ವತ ನಿವಾಸಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ವಿದ್ಯಾರ್ಥಿಗಳ ಪ್ರವೇಶ ಪತ್ರ, ವೀಸಾಗೆ ನೀಡಿದ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ.
700 ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಈಗಾಗಲೇ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. ಕೆಲಸದ ಪರವಾನಗಿಯ ಜೊತೆಗೆ ಕೆಲಸದ ಅನುಭವವನ್ನು ಪಡೆದಿದ್ದಾರೆ. ಆದರೆ ವೀಸಾ ವಂಚನೆ ಬಯಲಾದ ನಂತರ ವಿದ್ಯಾರ್ಥಿಗಳನ್ನು ಕೆನಡಿಯನ್ ಬಾರ್ಡರ್ ಸೆಕ್ಯುರಿಟಿ ಏಜೆನ್ಸಿ ಗಡಿಪಾರು ಮಾಡಿದೆ.
ವೀಸಾ ವಂಚನೆ ಕೆನಡಾದಲ್ಲಿ ಮೊದಲ ಬಾರಿಗೆ ಕಂಡುಬಂದಿದೆ. ಕೆನಡಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿವಿಧ ಉದ್ದೇಶಗಳಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಈ ವೇಳೆ ಕಾಲೇಜುಗಳ ನಕಲಿ ಆಫರ್ ಲೆಟರ್ ಗಳನ್ನು ಪಡೆದು ನಕಲಿ ಶುಲ್ಕ ಪಾವತಿ ರಶೀದಿಗಳನ್ನು ಪಡೆದು ವಂಚಿಸುತ್ತಾರೆ. ಏಕೆಂದರೆ ಕಾಲೇಜುಗಳ ಪ್ರವೇಶ ಶುಲ್ಕ ಪಾವತಿಸಿದ ನಂತರವೇ ವೀಸಾಗಳನ್ನು ನೀಡಲಾಗುತ್ತದೆ. ಅದಕ್ಕಾಗಿ ಈ ರೀತಿಯ ವಂಚನೆ ಮಾಡುತ್ತಾರೆ ಅಂತಾ ತಜ್ಞರು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ವೀಸಾ ಒದಗಿಸಿರುವ ಏಜೆಂಟ್ ಗಳು ಸಾಕಷ್ಟು ಜಾಣತನ ಮೆರೆದಿದ್ದಾರೆ. ಎಲ್ಲಾ ದಾಖಲೆಗಳಿಗೆ ವಿದ್ಯಾರ್ಥಿಗಳಿಂದ ಮಾತ್ರ ಸಹಿ ಪಡೆದಿದ್ದಾರೆ. ಎಲ್ಲೂ ಏಜೆಂಟ್ ಗಳ ವಿವರಗಳನ್ನು ದಾಖಲಿಸಿಲ್ಲ. ವಿದ್ಯಾರ್ಥಿಗಳನ್ನೇ ಸ್ವಯಂ ಅರ್ಜಿದಾರರನ್ನಾಗಿ ಮಾಡಿದ್ದಾರೆ. ಈ ವಂಚನೆಯಲ್ಲಿ ಏಜೆಂಟ್ ಗಳು ಭಾಗಿಯಾಗಿರುವುದನ್ನು ಪತ್ತೆ ಹಚ್ಚೋದು ಕಷ್ಟ ಅಂತಾ ಪೊಲೀಸರು ತಿಳಿಸಿದ್ದಾರೆ.