ವಿರಾಟ್ ಕೊಹ್ಲಿಯ ಸ್ಪೂರ್ತಿಯ ಮಾತು – ಆರ್ಸಿಬಿ ತಂಡಕ್ಕೆ ಸಿಕ್ತು ಮೊದಲ ಗೆಲುವು
ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್ಸಿಬಿ ತಂಡ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಸತತ 5 ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಖಾತೆ ತೆರೆದಿದ್ದು, ಪ್ಲೇ ಆಪ್ ಹಂತಕ್ಕೇರುವ ಕನಸು ಮತ್ತೆ ಚಿಗುರಿದೆ. ಆದರೆ, ಈ ಗೆಲುವಿನ ಹಿಂದಿರುವ ರೂವಾರಿ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ. ಆರ್ಸಿಬಿ ತಂಡದ ಜೊತೆ 15 ವರ್ಷಗಳ ಬಾಂಧವ್ಯ ಹೊಂದಿರುವ ವಿರಾಟ್ ಕೊಹ್ಲಿ, ಸತತ ಸೋಲಿನಿಂದ ಕಂಗೆಟ್ಟಿರುವ ಮಹಿಳಾ ತಂಡವನ್ನು ಹುರಿದುಂಬಿಸಿದ್ದರು. ವಿರಾಟ್ ಕೊಹ್ಲಿ ತಂಡಕ್ಕೆ ಧೈರ್ಯ ನೀಡಿದ ಮೇಲೆ ಮೊದಲ ಗೆಲುವು ಪಡೆದ ಖುಷಿಯಲ್ಲಿದೆ ಆರ್ಸಿಬಿ ತಂಡ.
ಇದನ್ನೂ ಓದಿ: ಸತತ ನಾಲ್ಕನೇ ಸೋಲು ಕಂಡ ಆರ್ಸಿಬಿ – ಸ್ಮೃತಿ ಮಂಧಾನ ಪ್ರತಿಕ್ರಿಯೆಗೆ ಫ್ಯಾನ್ಸ್ ಶಾಕ್
ಡಿವೈ ಪಾಟೀಲ್ ಮೈದಾನದಲ್ಲಿ ಯುಪಿ ವಾರಿಯರ್ಸ್ ಎದುರಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ತನ್ನ ಗೆಲುವಿನ ಬರ ತೀರಿಸಿಕೊಂಡಿದೆ. ಜೊತೆಗೆ ಪ್ಲೇ ಆಪ್ ಗೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಆರ್ಸಿಬಿ ತಂಡ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯಲು ವಿಫಲವಾಗಿದ್ದರೂ ಮೂರನೇ ಸ್ಥಾನ ಪಡೆಯುವ ಅವಕಾಶ ಸಿಕ್ಕಿದೆ. ಭಾರತ ಕ್ರಿಕೆಟ್ ದಿಗ್ಗಜ ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಮಹಿಳಾ ತಂಡವನ್ನು ಭೇಟಿಮಾಡಿ ಸ್ಪೂರ್ತಿಯ ಮಾತುಗಳನ್ನಾಡಿದ್ದೇ ತಂಡದ ಗೆಲುವಿನ ಗುಟ್ಟು. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಆರ್ಸಿಬಿ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮೃತಿ ಮಂಧನಾ, ” ವಿರಾಟ್ ಕೊಹ್ಲಿಯವರು ನೀಡಿದ ಸಲಹೆ ನಮಗೆ ಪ್ರಯೋಜನವಾಯಿತು. ಅವರನ್ನು ನಮ್ಮೆಲ್ಲರಲ್ಲೂ ಉತ್ತಮ ರೀತಿಯಲ್ಲಿ ಸ್ಪೂರ್ತಿ ತುಂಬಿದರು. ಇದಷ್ಟೇ ಅಲ್ಲದೇ ನಮ್ಮ ತಂಡದ ಜತೆ ಸಾಕಷ್ಟು ಹೊತ್ತು ಮಾತನಾಡಿದರು” ಎಂದು ಹೇಳಿದರು.