ಸಾಲ ಮರುಪಾವತಿ ಮಾಡದೇ ಸಂಕಷ್ಟ – ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಹರಾಜು

ಸಾಲ ಮರುಪಾವತಿ ಮಾಡದೇ ಸಂಕಷ್ಟ – ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಹರಾಜು

ಈ ಹಿಂದೆ ಕರ್ನಾಟಕ ಕರಕುಶಲ ವಸ್ತುಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಯವರ ಮನೆಯನ್ನು ಬ್ಯಾಂಕ್ ಹರಾಜಿಗಿಟ್ಟಿದೆ. ಬೇಳೂರು ರಾಘವೇಂದ್ರ ಶೆಟ್ಟಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5 ಕೋಟಿ ರೂಪಾಯಿಗೂ ಅಧಿಕ ಸಾಲ  ಪಡೆದಿದ್ದರು. ಸಾಲವನ್ನು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ನ್ಯಾಯಾಲಯ ರಾಘವೇಂದ್ರ ಅವರ ಮನೆಯನ್ನು ಬ್ಯಾಂಕ್ ವಶಕ್ಕೆ ನೀಡಿತ್ತು. ಇದೀಗ ಬ್ಯಾಂಕ್ 3 ದಿನಗಳಲ್ಲಿ ಮನೆಯನ್ನು ಹರಾಜಿಗಿಡಲು ಮುಂದಾಗಿದೆ.

ಇದನ್ನೂ ಓದಿ:  ಬಿಸಿಲಿನಿಂದ ಕಂಗೆಟ್ಟಿದ್ದ ಜನರನ್ನ ತಣಿಸಲಿದ್ದಾನೆ ವರುಣ – ಇಂದು & ನಾಳೆ ಎಲ್ಲೆಲ್ಲಿ ಮಳೆ ಸಾಧ್ಯತೆ..?

ಸಂಜಯನಗರದ ಡಾಲರ್ಸ್ ಕಾಲೋನಿಯಲ್ಲಿ ಎಸ್ಎಂಸಿ ಬೆವರ್ಲಿ ಅಪಾರ್ಟ್‌ಮೆಂಟ್‌ನಲ್ಲಿ ರಾಘವೇಂದ್ರ ಶೆಟ್ಟಿಯವರ ಫ್ಲ್ಯಾಟ್ ಇದೆ. ರಾಘವೇಂದ್ರ ಶೆಟ್ಟಿ ಮಾಡಿದ್ದ ಸಾಲ, ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ನ್ಯಾಯಾಲಯ ಕಳೆದ ಡಿಸೆಂಬರ್‌ನಲ್ಲಿ ಆದೇಶ ನೀಡಿ ಮನೆಯನ್ನು ಬ್ಯಾಂಕ್ ವಶಕ್ಕೆ ನೀಡಿದೆ. ಇದೀಗ ಬ್ಯಾಂಕ್ ವಶಕ್ಕೆ ಪಡೆದಿರುವ ಮನೆಯನ್ನು ಇನ್ನು ಮೂರು ದಿನಗಳಲ್ಲಿ ಹರಾಜು ಹಾಕಲು ಸಿದ್ಧತೆ ನಡೆಸುತ್ತಿದೆ. ಆದರೆ ಈ ನಡುವೆ ಬುಧವಾರ ಮಧ್ಯರಾತ್ರಿ ರಾಘವೆಂದ್ರ ಶೆಟ್ಟಿ ಕಡೆಯವರು ಮನೆಗೆ ಹಾಕಲಾಗಿದ್ದ ಸೀಲ್ ಅನ್ನು ಒಡೆದು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಸ್ವಾಧೀನಪಡೆದ ಮನೆಯನ್ನ ಇನ್ನು ಮೂರು ದಿನಗಳಲ್ಲಿ ಬ್ಯಾಂಕ್ ಹರಾಜಿಗಿಡಲು ಸಜ್ಜಾಗುವಾಗಲೇ ಬೇಳೂರು ರಾಘವೇಂದ್ರ ಶೆಟ್ಟಿ ಕಡೆಯವರು ಮಾರ್ಚ್ 15ರ ರಾತ್ರಿ ಬ್ಯಾಂಕ್ ಸಿಬ್ಬಂದಿ ಹಾಕಿದ್ದ ಸೀಲ್ ಓಪನ್ ಮಾಡಿ ಬೀಗ ಒಡೆದು ಫ್ಲಾಟ್ ಗೆ ಅಕ್ರಮ ಪ್ರವೇಶ ಮಾಡಿದ್ದಾರೆ. ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿರುವುದನ್ನು ತಿಳಿದ ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳು ಮನೆಯೊಳಗಿದ್ದವರಿಗೆ ಬಾಗಿಲು ತೆರೆಯುವಂತೆ ಸೂಚಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬಾಗಿಲನ್ನು ತೆರೆದಿದ್ದಾರೆ. ಜೊತೆಗೆ ಆತ್ಮಹತ್ಯೆಯ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನಲಾಗ್ತಿದೆ. ಇದೀಗ ಅತಿಕ್ರಮವಾಗಿ ಮನೆ ಪ್ರವೇಶ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

suddiyaana