ಗರ್ಭಿಣಿ ನಾಯಿಗೆ ರಕ್ತದಾನ..! – ಜೀವ ಕಾಪಾಡಿದ ನೆಚ್ಚಿನ ಶ್ವಾನ
ರಕ್ತದಾನ ಮಾಡಿ.. ಜೀವ ಉಳಿಸಿ. ರಕ್ತದಾನವೇ ಶ್ರೇಷ್ಠದಾನ ಅನ್ನೋ ಸಂದೇಶಗಳನ್ನು ನೋಡುತ್ತೇವೆ. ಅದು ನಿಜ ಕೂಡಾ. ಆದರೆ, ರಕ್ತದಾನ ಬರೀ ಮನುಷ್ಯರಿಗೆ ಮಾತ್ರವಲ್ಲ. ಪ್ರಾಣಿಗಳಿಗೂ ರಕ್ತದಾನದ ಅನಿವಾರ್ಯತೆ ಇರುತ್ತದೆ. ಹಾವೇರಿಯಲ್ಲಿ ಗರ್ಭಿಣಿ ನಾಯಿಗೆ ಮತ್ತೊಂದು ನಾಯಿ ರಕ್ತ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಾವೇರಿ ಜಿಲ್ಲೆಯ ಅಕ್ಕಿಆಲೂರು ಪಟ್ಟಣದಲ್ಲಿ ಲ್ಯಾಬ್ರಡಾರ್ ಜಾತಿಗೆ ಸೇರಿದ ಗರ್ಭಿಣಿ ನಾಯಿಯ ಪ್ರಾಣ ಉಳಿಸಲು ಮೊತ್ತೊಂದು ನಾಯಿ ರಕ್ತದಾನ ಮಾಡಿದೆ.
ಇದನ್ನೂ ಓದಿ: ಮರಿಯ ಕುತ್ತಿಗೆ ಹಿಡಿದಿತ್ತು ಸಿಂಹ – ಕಂದನನ್ನು ಕಾಪಾಡಿದ್ದೇಗೆ ಗೊತ್ತಾ ಜಿರಾಫೆ?
ಜಿಪ್ಸಿ ಎಂಬ ಹೆಸರಿನ ನಾಯಿ ಎರಡು ತಿಂಗಳ ಗರ್ಭಿಣಿಯಾಗಿದ್ದು, ಕಳೆದ 5 ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ. ಈ ಸಂಬಂಧ ನಾಯಿ ಮಾಲೀಕ ನಿಖಿಲ್ ಹಡಲಗಿ, ಜಿಪ್ಸಿಯನ್ನು ಕರೆದುಕೊಂಡು ಪಶು ವೈದ್ಯರ ಬಳಿ ಹೋದರು. ಆಗ ವೈದ್ಯರು ನಾಯಿಯ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಿದ್ದು, ಕೂಡಲೇ ರಕ್ತ ಹಾಕಬೇಕು ಎಂದು ಹೇಳಿದ್ದಾರೆ. ಆಗ ನಿಖಿಲ್, ವೈಭವ ಪಾಟೀಲ್ ಅವರನ್ನು ಸಂಪರ್ಕಿಸಿದರು. ಇವರು ಕೂಡ ಲ್ಯಾಬ್ರಡಾರ್ ಜಾತಿಗೆ ಸೇರಿದ ಜಿಮ್ಮಿ ಹೆಸರಿನ ಗಂಡು ನಾಯಿ ಸಾಕಿದ್ದು, ಜಿಪ್ಸಿಗೆ ರಕ್ತದಾನ ಮಾಡಲು ಒಪ್ಪಿಕೊಂಡರು. ಬಳಿಕ ವೈದ್ಯರು ಯಶಸ್ವಿಯಾಗಿ ರಕ್ತ ವರ್ಗಾವಣೆ ಮಾಡಿದರು. ಈಗ ಜಿಪ್ಸಿ ಆರೋಗ್ಯವಾಗಿದೆ. ಜಿಪ್ಸಿಯು ಉಣ್ಣಿ ಜ್ವರದಿಂದ ಬಳಲುತ್ತಿದ್ದು, ಕಳೆದ 4-5 ದಿನಗಳಿಂದ ಆಹಾರ ಸೇವಿಸದೆ ನಿಶ್ಯಕ್ತವಾಗಿತ್ತು ಎಂದು ಪಶುವೈದ್ಯರು ತಿಳಿಸಿದ್ದಾರೆ. ನಾಯಿಯ ಜೀವಕ್ಕೆ ಅಪಾಯವಿದ್ದು, ಜೀವ ಉಳಿಸಲು ರಕ್ತ ವರ್ಗಾವಣೆ ಅಗತ್ಯವಾಗಿತ್ತು ಎಂದು ಅರಳೇಲೇಶ್ವರದ ಹಿರಿಯ ಪಶು ವೈದ್ಯಾಧಿಕಾರಿ ಡಾ.ಅಮಿತ್ ಪುಠಾಣಿಕರ ತಿಳಿಸಿದ್ದಾರೆ.