ಕೊಳವೆಬಾವಿಗೆ ಬಿದ್ದ ಬಾಲಕ – 9 ಗಂಟೆ ಕಾರ್ಯಾಚರಣೆ ನಡೆಸಿದರೂ ಬದುಕುಳಿಯಲಿಲ್ಲ

ಕೊಳವೆಬಾವಿಗೆ ಬಿದ್ದ ಬಾಲಕ – 9 ಗಂಟೆ ಕಾರ್ಯಾಚರಣೆ ನಡೆಸಿದರೂ ಬದುಕುಳಿಯಲಿಲ್ಲ

ಮಹಾರಾಷ್ಟ್ರ: 5 ವರ್ಷದ ಬಾಲಕ ಕೊಳವೆಬಾವಿಯೊಳಗೆ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ನಡೆದಿದೆ.

ಸೋಮವಾರ ಸಂಜೆ 4 ಗಂಟೆ ವೇಳೆ ಸಾಗರ್ ಬುಧ ಬರೇಲಾ ಎಂಬ ಬಾಲಕ ಜಮೀನಿನಲ್ಲಿ ಆಟವಾಡುತ್ತಿದ್ದ. ಈ ವೇಳೆ ಬಾಲಕ ಸುಮಾರು 200 ಅಡಿ ಆಳದ ತೆರೆದ ಕೊಳವೆಬಾವಿಯೊಳಗೆ ಕಾಲು ಜಾರಿ ಬಿದ್ದಿದ್ದಾನೆ. ಘಟನೆ ಬೆಳಕಿಗೆ ಬಂದ ಕೂಡಲೇ ಸ್ಥಳೀಯರು ಎನ್ ಡಿಆರ್ ಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.  ಸ್ಥಳಕ್ಕೆ ಆಗಮಿಸಿದ ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆಗೆ ಇಳಿದಿದ್ದಾರೆ. ಅಲ್ಲದೇ ವೈದ್ಯರು ಆ್ಯಂಬುಲೆನ್ಸ್, ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿದ್ದಾರೆ. ಬಾಲಕನ ಚಲನವಲನಗಳನ್ನು ಗಮನಿಸಿ ಆತನಿಗೆ ಕೃತಕ ಆಕ್ಸಿಜನ್ ನೆರವನ್ನು ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ 5 ದಿನ ಮಳೆ? – ಅವಧಿಗೂ ಮುನ್ನ ಮುಂಗಾರು ಮಳೆ

ಬಾಲಕ ಸುಮಾರು 15 ಅಡಿ ಆಳದಲ್ಲಿ ಸಿಲುಕಿದ್ದ. ಅಧಿಕಾರಿಗಳು ಆತನನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಬಾಲಕ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಸುಮಾರು 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಆತನನ್ನು ಹೊರತೆಗೆದರೂ ಅಷ್ಟರೊಳಗೆ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕ ಸಾಗರ್ ಕುಟುಂಬ ಮಧ್ಯಪ್ರದೇಶದ ಬುರ್ಹಾನ್ ಪುರ ಜಿಲ್ಲೆಯವರಾಗಿದ್ದಾರೆ. ಈ ಕುಟುಂಬ ಕಬ್ಬು ಕಡಿಯುವ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅಹಮದ್ ನಗರಕ್ಕೆ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

suddiyaana