ಅಯ್ಯೋ ನನ್ನ ಹೆಂಡ್ತಿ ಯಾವಾಗ್ಲೂ ನಿದ್ದೆ ಮಾಡ್ತಾಳೆ – ಠಾಣೆ ಮೆಟ್ಟಿಲೇರಿದ ಪತಿ
ಬೆಂಗಳೂರು: ಗಂಡ ಹೆಂಡತಿ ಅಂದ ಮೇಲೆ ಕೆಲವೊಂದು ಮನಸ್ತಾಪ ಸಾಮಾನ್ಯ. ಕೆಲವೊಂದು ಬಾರಿ ಸಣ್ಣ ಪುಟ್ಟ ಮನಸ್ತಾಪಗಳು ತಾರಕಕ್ಕೇರಿ ದೊಡ್ಡ ರಂಪಾಟವೇ ನಡೆದುಹೊಗುತ್ತದೆ. ಅಲ್ಲದೇ ಕೆಲ ಜಗಳಗಳು ಠಾಣೆ ಮೆಟ್ಟಿಲೇರಿರುವ ಪ್ರಸಂಗಗಳು ನಡೆದಿವೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಪತ್ನಿಯ ನಿದ್ರಾ ಕಾಟಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಠಾಣೆ ಮೆಟ್ಟಿಲೇರಿದ್ದಾನೆ.
ಈ ಘಟನೆ ಬೆಂಗಳೂರಿನ ಬಸವನಗುಡಿಯಲ್ಲಿ ನಡೆದಿದೆ. ಕ್ರಮಾನ್ ಖಾನ್ ಎಂಬಾತ ಕೆಲ ವರ್ಷಗಳ ಹಿಂದೆ ಆಯೇಷಾ ಫರ್ಹೀನ್ ಎಂಬಾಕೆಯನ್ನು ಮದುವೆಯಾಗಿದ್ದಾನೆ. ಕಳೆದ 5 ವರ್ಷಗಳಿಂದ ಆಯೇಷಾ ಎಷ್ಟು ಹೊತ್ತಿಗೂ ನಿದ್ದೆ ಮಾಡುತ್ತಿರುತ್ತಾಳಂತೆ. ಇದರಿಂದ ಬೇಸತ್ತ ಕ್ರಮಾನ್ ಖಾನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಇದನ್ನೂ ಓದಿ: ರಸ್ತೆಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ ರಾಕ್ಷಸ – ವ್ಯಾಪಕ ಆಕ್ರೋಶ
ತನ್ನ ಪತ್ನಿ ಆಯೇಷಾ ಫರ್ಹೀನ್ ಎಷ್ಟು ಹೊತ್ತಿಗೂ ನಿದ್ದೆ ಮಾಡುತ್ತಿರುತ್ತಾಳೆ. ರಾತ್ರಿ ಮಲಗಿದರೆ ಮಧ್ಯಾಹ್ನ 12.30 ರವರೆಗೂ ನಿದ್ದೆ ಮಾಡುತ್ತಾಳೆ. ಮತ್ತೆ ಸಂಜೆ 5. 30ಕ್ಕೆ ನಿದ್ದೆ ಮಾಡಿದರೆ ರಾತ್ರಿ 9 . 30 ಕ್ಕೆ ಎದ್ದೇಳುತ್ತಿದ್ದಾಳೆ. ಕಳೆದ ಐದು ವರ್ಷಗಳಿಂದ ಹೀಗೆ ಮಾಡುತ್ತಿದ್ದಾಳೆ. ಆಯೇಷಾ ಯಾವುದೇ ಮನೆಗೆಲಸ ಮಾಡುತ್ತಿಲ್ಲ. ತನ್ನ ತಾಯಿಯೇ ಅಡುಗೆ ಮಾಡಿ ಬಡಿಸಬೇಕು. ಈ ಬಗ್ಗೆ ನಾನು ಇಷ್ಟು ವರ್ಷಗಳ ಕಾಲ ಸುಮ್ಮನಿದ್ದೆ. ಮನೆಯಲ್ಲಿ ಕೆಲಸ ಮಾಡಲು ಹೇಳಿದರೆ ತನ್ನ ಜೊತೆ ಜಗಳವಾಡಿ 15 ರಿಂದ 20 ದಿನ ತವರು ಮನೆ ಸೇರಿಕೊಳ್ಳುತ್ತಾಳೆ. ಇಷ್ಟೇ ಅಲ್ಲದೇ ಹುಟ್ಟುಹಬ್ಬದ ನೆಪದಲ್ಲಿ 20 ರಿಂದ 25 ಜನರನ್ನು ಮನೆಗೆ ಕರೆಸಿ ಆ ನೆಪದಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.
ಆಯೇಷಾ ರಾಯಲ್ ಲೈಫ್ ಲೀಡ್ ಮಾಡಲು ನನ್ನನ್ನು ಮದುವೆಯಾಗಿದ್ದಾಳೆ. ಆಕೆಗೆ ಮದುವೆಗೆ ಮುಂಚೆಯೇ ಈ ಕಾಯಿಲೆ ಇತ್ತು. ಅದನ್ನು ಮರೆಮಾಚಿ ಆಕೆಯ ಕುಟುಂಬಸ್ಥರು ಮದುವೆ ಮಾಡಿಸಿದ್ದಾರೆ. ಆಕೆಗೆ ನನ್ನ ಮೇಲೆ ಕಿಂಚಿತ್ತೂ ಪ್ರೀತಿ, ಮಮಕಾರ ಇಲ್ಲ. ಆಸ್ತಿ ಲಪಟಾಯಿಸಲು ಮದುವೆಯಾಗಿದ್ದಾಳೆ ಅಂತಾ ದೂರಿನಲ್ಲಿ ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ಆತನ ಮಾವ ಆರಿಪುಲ್ಲ, ಅತ್ತೆ ಹೀನಾ ಕೌಸರ್, ಮೈದುನ ಮೊಹಮ್ಮದ್ ಮೋಯಿನ್ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.