ಧ್ರುವನಾರಾಯಣ್ ಅಗಲಿಕೆಗೆ ಕಣ್ಣೀರಿಟ್ಟ ಡಿ.ಕೆ ಶಿವಕುಮಾರ್ – ಪಕ್ಷಾತೀತವಾಗಿ ನಾಯಕರ ಸಂತಾಪ..!
ಕಾಂಗ್ರೆಸ್ ಪಾಳಯದಲ್ಲಿ ಅಜಾತಶತ್ರುವಿನಂತೆ ಬೆಳೆದಿದ್ದ ಧ್ರುವನಾರಾಯಣ್ ರ ದಿಢೀರ್ ಅಗಲಿಕೆ ಕಾಂಗ್ರೆಸ್ ಪಾಳಯಕ್ಕೆ ಅರಗಿಸಿಕೊಳ್ಳಲಾಗದ ಹೊಡೆತ ನೀಡಿದೆ.. ತಮ್ಮ ನಾಯಕನ ಸಾವಿಗೆ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ..
ಯಾರನ್ನೂ ನೋಯಿಸದ ಧ್ರುವನಾರಾಯಣ್ ರಾಜ್ಯಕ್ಕೆ ಆಸ್ತಿಯಾಗಿದ್ದರು.. ಅವ್ರ ದಿಢೀರ್ ಅಗಲಿಕೆ ನಂಬಲಾಗುತ್ತಿಲ್ಲ ಎಂದು ಡಿಕೆಶಿ ಭಾವುಕರಾದ್ರು.. ಹಾಗೇ ಧ್ರುವನಾರಾಯಣ್ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡಿದ್ದು ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ರು.. ಮತ್ತೊಂದೆಡೆ ಸಂತಾಪ ಸೂಚಕವಾಗಿ ಪ್ರಜಾಧ್ವನಿ ಯಾತ್ರೆಗಳನ್ನ ಹಾಗೂ ಇತರೆ ನಿಗದಿತ ಕಾರ್ಯಕ್ರಮಗಳನ್ನ ರದ್ದುಪಡಿಸಲಾಗಿದೆ.
ಇದನ್ನೂ ಓದಿ: 1 ಮತದಿಂದ ವಿಧಾನಸೌಧ ಪ್ರವೇಶಿಸಿದ್ದ ನಾಯಕ – ಧ್ರುವನಾರಾಯಣ್ ರಾಜಕೀಯ ಹಾದಿಯೇ ರೋಚಕ!
ಇನ್ನು ಇವತ್ತು ಮೈಸೂರಿನ ನಿವಾಸ ಹಾಗೂ ಕಾಂಗ್ರೆಸ್ ಕಚೇರಿಯಲ್ಲಿ ಧ್ರುವನಾರಾಯಣ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.. ಸಂಜೆ ಮೃತದೇಹವನ್ನ ನಂಜನಗೂಡಿಗೆ ತಂದು ಬಳಿಕ ಹುಟ್ಟೂರು ಹೆಗ್ಗವಾಡಿ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತೆ.. ಗ್ರಾಮದ ಅವರ ಜಮೀನಿನಲ್ಲೇ ತಂದೆ ತಾಯಿ ಸಮಾಧಿ ಪಕ್ಕ ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.. ಏನೇ ಹೇಳಿ ತಮ್ಮ ಪ್ರಬುದ್ಧ ರಾಜಕಾರಣದಿಂದಲೇ ಜನಮನಗೆದ್ದಿದ್ದ ಆರ್.ಧ್ರುವನಾರಾಯಣ್ ಅಗಲಿಕೆ ರಾಜ್ಯದ ಪಾಲಿಗೆ ತುಂಬಲಾರದ ನಷ್ಟವೇ ಸರಿ.