ಬಿಜೆಪಿಗೆ ಬೆಂಬಲವಷ್ಟೇ.. ಅಧಿಕೃತ ಸೇರ್ಪಡೆ ಇಲ್ಲ – ‘ಕಮಲ’ ಮುಡಿಯಲು ಸುಮಲತಾಗಿರುವ ಸವಾಲುಗಳೇನು..?

ಬಿಜೆಪಿಗೆ ಬೆಂಬಲವಷ್ಟೇ.. ಅಧಿಕೃತ ಸೇರ್ಪಡೆ ಇಲ್ಲ – ‘ಕಮಲ’ ಮುಡಿಯಲು ಸುಮಲತಾಗಿರುವ ಸವಾಲುಗಳೇನು..?

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಇವತ್ತು ಸುದ್ದಿಗೋಷ್ಠಿ ನಡೆಸಿ ಬಿಜೆಪಿಗೆ ತಮ್ಮ ಸಂಪೂರ್ಣ ಬೆಂಬಲ ಇದೆ ಅಂತಾ ಘೋಷಣೆ ಮಾಡಿದ್ದಾರೆ. ಸಂಸದೆ ಯಾವ ಪಕ್ಷ ಸೇರ್ಪಡೆಯಾಗ್ತಾರೆ ಅನ್ನೋ ಗೊಂದಲ, ಊಹಾಪೋಹಗಳಿಗೂ ತೆರೆ ಬಿದ್ದಿದೆ. ಆದ್ರೆ ಸುಮಲತಾ ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದಷ್ಟೇ ಘೋಷಣೆ ಮಾಡಿದ್ದಾರೆ. ಎಲ್ಲೂ ಕೂಡ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಹೇಳಿಲ್ಲ. ಯಾಕಂದ್ರೆ ಬಿಜೆಪಿ ಸೇರೋದಾಗಿ ಅಧಿಕೃತವಾಗಿ ಘೋಷಿಸಿದ್ರೆ ತಮ್ಮ ಸಂಸದೆ ಸ್ಥಾನವನ್ನೇ ಕಳೆದುಕೊಳ್ಳಬೇಕಾಗುತ್ತೆ.

ಇದನ್ನೂ ಓದಿ : ಅಭಿವೃದ್ಧಿ ಮಂತ್ರ.. ಮೋದಿ ಜಪ.. ಜೆಡಿಎಸ್ ವಿರುದ್ಧ ವಾಗ್ಬಾಣ – ‘ಕೇಸರಿ’ ಪತಾಕೆ ಹಾರಿಸಿದ ಸುಮಲತಾ!

ಅಷ್ಟಕ್ಕೂ ಸುಮಲತಾ ಅಂಬರೀಶ್ ಅವರು ಪಕ್ಷೇತರ ಸಂಸದೆಯಾಗಿದ್ದು, ಬಿಜೆಪಿ ಸೇರ್ಪಡೆ ಹಾದಿ ಅಷ್ಟು ಸುಲಭವಿಲ್ಲ. ಯಾಕಂದ್ರೆ ಸಂವಿಧಾನದ 10ನೇ ಷೆಡ್ಯೂಲ್​ನಡಿ ಪಕ್ಷ ಸೇರಲು ಅವಕಾಶವಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದ 6 ತಿಂಗಳೊಳಗೆ ರಾಜಕೀಯ ಪಕ್ಷ ಸೇರಬೇಕು. 6 ತಿಂಗಳ ನಂತರ ಸೇರಿದರೆ ಸಂಸದ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಒಂದು ವೇಳೆ ರಾಜಕೀಯ ಪಕ್ಷ ಸೇರಬೇಕಿದ್ದರೆ ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

ಸಂಸತ್ತಿನ ಯಾವುದೇ ಸದನದ ಸದಸ್ಯರಾಗಿ ರಾಜಕೀಯ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗದೇ ಸ್ವತಂತ್ರವಾಗಿ ಸ್ಪರ್ಧಿಸಿ ಆಯ್ಕೆಯಾಗುವ ಸದಸ್ಯರು ಯಾವುದಾದರೊಂದು ರಾಜಕೀಯ ಪಕ್ಷ ಸೇರಿದರೆ ಅನರ್ಹಗೊಳ್ಳುತ್ತಾರೆ. ಉಭಯ ಸದನಗಳ ಪೈಕಿ ಒಂದು ಸದನಕ್ಕೆ ನಾಮನಿರ್ದೇಶಿತ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸದಸ್ಯರು, ಹೀಗೆ ಆಯ್ಕೆಯಾದ 6 ತಿಂಗಳ ನಂತರ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡರೆ ಅವರು ಅನರ್ಹಗೊಳ್ಳುತ್ತಾರೆ. ಸಂಸದೆ ಸುಮಲತಾ ವಿಚಾರದಲ್ಲಿ ಆಗಿರುವುದೂ ಇದೇ. ಸಂಸದೆಯಾಗಿ ಆಯ್ಕೆಯಾದ 6 ತಿಂಗಳೊಳಗೆ ಸುಮಲತಾ ಬಿಜೆಪಿ ಸೇರಿಲ್ಲ. ಆದರೆ ಈಗ ಅಧಿಕೃತವಾಗಿ ಬಿಜೆಪಿ ಸೇರಿದರೆ ಅವರು ತಮ್ಮ ಸಂಸದೆ ಸ್ಥಾನದಿಂದ ಅನರ್ಹಗೊಳ್ಳುವ ಭೀತಿ ಎದುರಿಸಬೇಕಾಗುತ್ತದೆ. ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬಿಜೆಪಿ ಸೇರಲು ಅಡ್ಡಿಯಿರುವುದಿಲ್ಲ. ಆದರೆ ಸ್ವತಂತ್ರ ಸಂಸದೆಯಾಗಿದ್ದುಕೊಂಡು ರಾಜಕೀಯ ಪಕ್ಷದ ಸದಸ್ಯೆಯಾಗುವುದು ಸಂವಿಧಾನದ 10 ನೇ ಶೆಡ್ಯೂಲ್ ಪ್ರಕಾರ ಪಕ್ಷಾಂತರ ನಿಷೇಧ ನಿಯಮಾವಳಿಯಂತೆ ಅನರ್ಹಗೊಳ್ಳುತ್ತಾರೆ. ಲೋಕಸಭೆಯ ಸ್ಪೀಕರ್ ಅನರ್ಹತೆ ಬಗ್ಗೆ ತೀರ್ಮಾನಿಸುತ್ತಾರೆ.

ಹಾಗಾದ್ರೆ ಸುಮಲತಾ ಮುಂದಿರುವ ಆಯ್ಕೆಗಳು ಏನಂದ್ರೆ, ಸುಮಲತಾ ಬಿಜೆಪಿ ಸೇರ್ಪಡೆಯಾಗಲು ಬಯಸಿದರೂ ಅಧಿಕೃತವಾಗಿ ಸೇರಲು ಸಾಧ್ಯವಿಲ್ಲ. ಬದಲಿಗೆ ಬಿಜೆಪಿಯನ್ನು ಬಾಹ್ಯವಾಗಿ ಬೆಂಬಲಿಸಬಹುದು. ರಾಜಕೀಯ ಪಕ್ಷದ ಸದಸ್ಯತ್ವ ಪಡೆಯುವಂತಿಲ್ಲ. ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿಯೂ ಸುಮಲತಾ ಭಾಗವಹಿಸುವಂತಿಲ್ಲ. ಭಾಗವಹಿಸಿದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳ್ಳುತ್ತಾರೆ. ಬಾಹ್ಯ ಬೆಂಬಲ ನೀಡಿದರೆ ಬಿಜೆಪಿ ಹೊರಡಿಸುವ ವಿಪ್ ಕೂಡಾ ಸುಮಲತಾರಿಗೆ ಅನ್ವಯವಾಗುವುದಿಲ್ಲ. ಅವರು ಸ್ವತಂತ್ರ ಸಂಸದೆಯಾಗಿ ಮುಂದುವರಿಯಬೇಕಾಗಲಿದೆ.

suddiyaana