ಬಣ್ಣ ಬಣ್ಣದ ರಂಗು ಎಲ್ಲೆಡೆಯೂ ಸಂಭ್ರಮದ ಗುಂಗು – ಹೋಳಿ ಹಬ್ಬಕ್ಕೂ ಇದೆ ವಿವಿಧ ಹಿನ್ನೆಲೆ..!
ಇವತ್ತು ಹೋಳಿ ಹಬ್ಬದ ಸಂಭ್ರಮ. ಈ ದಿನವನ್ನು ಕಾಮದಹನ, ಹೋಲಿಕಾ ದಹನ, ಮನ್ಮಥ ದಹನ ಎಂಬ ಬೇರೆ ಬೇರೆ ಹೆಸರುಗಳಿಂದಲೂ ಕರೆಯುತ್ತಾರೆ. ಈ ಹಬ್ಬ ಬದುಕಲ್ಲಿ ರಂಗು ತುಂಬುತ್ತದೆ. ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಜನ ಮಿಂದೇಳುತ್ತಾರೆ. ಯಾವುದೇ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಹೊಂದಿರುತ್ತದೆ. ಅದೇ ರೀತಿ ಹೋಳಿ ಬಣ್ಣಗಳ ಹಬ್ಬವಾಗಿದ್ದು ಇದರ ಮಹತ್ವವನ್ನು ತಿಳಿದುಕೊಳ್ಳಲೇಬೇಕು. ಈ ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸಲಾಗುತ್ತದೆ. ಹೋಳಿ ವಸಂತದ ಆಗಮನವನ್ನು ಸಾರುವ ಹಬ್ಬ ಎಂದು ಹೇಳಲಾಗುತ್ತದೆ. ಹೋಳಿ ಹಬ್ಬದ ಆಚರಣೆ ದಿನ ಕಾಮನ ಸುಂದರ ಪ್ರತಿಮೆ ಮಾಡಿ ಶೃಂಗರಿಸಿ ಊರಿನ ಕಾಮನ ಕಟ್ಟೆಯ ಮೇಲೆ ಚಪ್ಪರ ಕಟ್ಟಿ ಇಡುತ್ತಾರೆ. ಕಾಮನ ಮುಂದೆ ಮಂಗಳ ವಾದ್ಯಗಳನ್ನು ಊದುತ್ತಾರೆ. ಅದಲ್ಲದೆ ಪರಸ್ಪರ ಬೈಗುಳ, ಬಣ್ಣದ ನೀರು, ಸಗಣಿಯ ಗಂಜಲಗಳನ್ನು ಎರಚುತ್ತಾರೆ. ಇದು ಕೆಲವರ ಆಚರಣೆ. ಇನ್ನು ಕೆಲವರು ಪರಸ್ಪರ ಬಣ್ಣ ಎರಚಿಕೊಂಡು ರಂಗು ಚೆಲ್ಲಾಡುತ್ತಾ ಸಂಭ್ರಮಿಸುತ್ತಾರೆ.
ಇದನ್ನೂ ಓದಿ: ಕಾಶಿ ವಿಶ್ವನಾಥ ದೇಗುಲದಲ್ಲಿ ಇನ್ಮುಂದೆ ಲಡ್ಡು ಪ್ರಸಾದ ಸಿಗಲ್ಲ – ಯಾಕೆ ಗೊತ್ತಾ?
ಇನ್ನು ಈ ಹೋಳಿ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ. ಇದರ ಹಿನ್ನೆಲೆಯೇನು ಅನ್ನೋ ಬಗ್ಗೆಯೂ ಕೆಲವರಿಗೆ ಕುತೂಹಲವಿರುತ್ತದೆ. ಹಿಂದೆ ತಾರಕಾಸುರನೆಂಬ ರಾಕ್ಷಸನಿದ್ದನು. ಆತ ದುರಹಂಕಾರಿಯೂ ಹಾಗೂ ಕ್ರೂರಿಯೂ ಆಗಿದ್ದನು. ತಾರಕಾಸುರ ತನಗೆ ಸಾವು ಬರದಿರಲಿ ಎಂದು ತಪಸ್ಸು ಮಾಡಿದ್ದನು. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಆಗ ನನಗೆ ಮರಣ ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂಬ ವರವನ್ನು ಕೇಳಿದ್ದನು. ತಾರಕಾಸುರನ ತಪ್ಪಸ್ಸನ್ನು ಮೆಚ್ಚಿ ಬ್ರಹ್ಮ ವರವನ್ನು ಕೊಡುತ್ತಾನೆ. ಆಗ ತನಗೆ ವರ ಸಿಕ್ಕಿದೆ ಎಂದು ತಾರಕಾಸುರ ಮೆರೆಯುತ್ತಿರುತ್ತಾನೆ. ಇತ್ತ ಭೋಗ ಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ಆಗ ದೇವತೆಗಳು ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ ಅಂದರೆ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದ್ದರು. ಈ ವೇಳೆ ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸಲ್ಪಡುತ್ತದೆ.
ಹೋಳಿ ಹಬ್ಬದ ಹಿನ್ನೆಲೆ ಹೀಗೂ ಇದೆ..!
ಹಿರಣ್ಯಕಶಿಪುವಿನ ಸಹೋದರಿ ಹೆಸರು ಹೋಲಿಕಾ. ಹಿರಣ್ಯಕಶಿಪು ತನ್ನ ರಾಜ್ಯದಲ್ಲಿ ದೇವರನ್ನು ಪೂಜಿಸುವುದನ್ನು ನಿಷೇಧಿಸಿದ್ದು, ತನ್ನನ್ನೇ ದೇವರೆಂದು ಪೂಜಿಸುವಂತೆ ಆದೇಶಿಸಿದ್ದನು. ಆದರೆ ಆತನ ಮಗ ಪ್ರಹ್ಲಾದ ವಿಷ್ಣು ದೇವರ ಪರಮ ಭಕ್ತನಾಗಿದ್ದನು. ತಾನು ಎಷ್ಟೆ ಪ್ರಯತ್ನ ಮಾಡಿದರು ಮಗನಿಂದ ವಿಷ್ಣು ದೇವರ ಆರಾಧಾನೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಕೊನೆಗೆ ಹಿರಣ್ಯಕಶಿಪು ತನ್ನ ಮಗನನ್ನು ದಂಡಿಸಲು ತೀರ್ಮಾನಿಸುತ್ತಾನೆ. ಆಗ ಬೆಂಕಿಯು ಸುಡದಂತೆ ವರವನ್ನು ಪಡೆದಿದ್ದ ತನ್ನ ತಂಗಿ ಹೋಲಿಕಾಳ ಸಹಾಯವನ್ನು ಹಿರಣ್ಯಕಶಿಪು ಪಡೆಯುತ್ತಾನೆ. ಹಿರಣ್ಯಕಶಿಪು ತನ್ನ ಮಗನನ್ನು ಆಕೆಯ ತೊಡೆಯ ಮೇಲೆ ಕೂರಿಸಿಕೊಳ್ಳುವಂತೆ ತಂಗಿಯಲ್ಲಿ ಕೇಳಿದನು. ಹೋಲಿಕಾ ಅಣ್ಣನ ಆಜ್ಞೆಯಂತೆ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾಳೆ. ಆದರೆ ಈ ಪಾಪಕೃತ್ಯವನ್ನು ಹೋಲಿಕಾ ಮಾಡಿದ್ದರಿಂದಾಗಿ, ಆಕೆಯ ವರ ನಿಷ್ಫಲವಾಗುತ್ತದೆ. ಇದರಿಂದ ಹೋಲಿಕಾ ಸುಟ್ಟು ಬೂದಿಯಾಗುತ್ತಾಳೆ. ಪ್ರಹ್ಲಾದ ಸುರಕ್ಷಿತವಾಗಿ ಬೆಂಕಿಯಿಂದ ಹೊರಬರುತ್ತಾನೆ. ಅದಕ್ಕಾಗಿ ಪ್ರತೀ ವರ್ಷ ಹೋಲಿಯ ಮುನ್ನ ಹಿಂದೂ ಮನೆಗಳಲ್ಲಿ ಹೋಲಿಕಾಳನ್ನು ಸುಡುತ್ತಾರೆ.
ಕೃಷ್ಣ – ರಾಧೆಗೂ ಹೋಳಿ ಹಬ್ಬಕ್ಕೂ ಇದೆ ಸಂಬಂಧ..!
ಕೃಷ್ಣ ಮತ್ತು ರಾಧೆಯ ಪ್ರೀತಿಯ ಕಥೆ ಯಾರಿಗೆ ಗೊತ್ತಿಲ್ಲ. ಪೂತನಿಯ ವಿಷದ ಹಾಲನ್ನುಂಡ ಕೃಷ್ಣನ ಮೈಬಣ್ಣವು ನೀಲಿಯಾಯಿತು. ಕೃಷ್ಣನು ಕಡು ನೀಲಿ ಮೈಬಣ್ಣ ಹೊಂದಿದ್ದರೆ ಪ್ರೇಯಸಿ ರಾಧಾ ಬಿಳಿ ಮೈಬಣ್ಣ ಹೊಂದಿದ್ದಳು. ಒಮ್ಮೆ ಕೃಷ್ಣನು ತನ್ನ ತಾಯಿ ಯಶೋಧೆ ಬಳಿ ರಾಧೆಯ ಮೈ ಬಣ್ಣ ಬಿಳಿಯಾಗಿದೆ ರಾಧೆಯೂ ತನ್ನಂತೆ ನೀಲಿ ಬಣ್ಣದವಳಾಗಬೇಕಾದರೆ ನಾನು ಏನು ಮಾಡಬೇಕೆಂದು ಕೇಳುತ್ತಾನೆ. ಆಗ ಯಶೋದೆ ಶ್ರೀಕೃಷ್ಣನಲ್ಲಿ ರಾಧೆಗೆ ಬಣ್ಣ ಹಚ್ಚುವಂತೆ ಸಲಹೆ ನೀಡುತ್ತಾಳೆ. ಆಗ ಶ್ರೀಕೃಷ್ಣನು ರಾಧೆಗೆ ನೀಲಿ ಬಣ್ಣವನ್ನು ಹಚ್ಚುವುದರ ಮೂಲಕ ಆಕೆಯನ್ನು ತನ್ನ ಮೈಬಣ್ಣದಂತೆ ಮಾಡುತ್ತಾನೆ. ಕೃಷ್ಣ ಮತ್ತು ರಾಧೆಯ ಪ್ರೇಮಕಥೆಯನ್ನು ಸ್ಮರಿಸಲು, ಜನರು ಹೋಲಿಕಾ ದಹನದ ಮರುದಿನ ಹೋಳಿ ಹಬ್ಬವನ್ನು ಆಚರಿಸುತ್ತಾರೆ.