ಭ್ರಷ್ಟಾಚಾರದ ವಿರುದ್ಧ ಬಂದ್​ಗೆ ಕರೆ ಕೊಟ್ಟ ಕಾಂಗ್ರೆಸ್ – ಮಾರ್ಚ್ 9ರಂದು ಏನೆಲ್ಲಾ ಬಂದ್ ಆಗುತ್ತೆ ಗೊತ್ತಾ..?

ಭ್ರಷ್ಟಾಚಾರದ ವಿರುದ್ಧ ಬಂದ್​ಗೆ ಕರೆ ಕೊಟ್ಟ ಕಾಂಗ್ರೆಸ್ – ಮಾರ್ಚ್ 9ರಂದು ಏನೆಲ್ಲಾ ಬಂದ್ ಆಗುತ್ತೆ ಗೊತ್ತಾ..?

ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಬಲೆಗೆ ಬಿದ್ದಿರೋದು ಕಾಂಗ್ರೆಸ್​ಗೆ ಮೃಷ್ಟಾನ್ನ ಭೋಜನ ಸಿಕ್ಕಿದಂತಾಗಿದೆ. ಇದನ್ನೇ ಅಸ್ತ್ರ ಮಾಡಿಕೊಂಡು ಕೇಸರಿ ಪಾಳಯದ ವಿರುದ್ಧ ಕೈ ಪಡೆ ತಿರುಗಿ ಬಿದ್ದಿದೆ.

ಭ್ರಷ್ಟಾಚಾರದ ವಿರುದ್ಧ ಗುಡುಗಿರುವ ಕಾಂಗ್ರೆಸ್‌ ಮಾರ್ಚ್ 9 ರಂದು ರಾಜ್ಯ ಬಂದ್‌ಗೆ ಕರೆ ನೀಡಿದೆ. ಎಐಸಿಸಿ ಸೂಚನೆ ಅನುಸಾರ ಈ ಹೋರಾಟ ಕೈಗೆತ್ತಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆ ತಪ್ಪಿಸುವ ದೃಷ್ಟಿಯಿಂದ ಅಂದು(ಮಾ.9) ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ಸಾಂಕೇತಿಕ ಬಂದ್‌ ಮಾಡಲು ಕೆಪಿಸಿಸಿ ನಿರ್ಧರಿಸಿದೆ.

ಇದನ್ನೂ ಓದಿ : ವಿರೂಪಾಕ್ಷಪ್ಪ ಪತ್ತೆಗೆ ಅಧಿಕಾರಿಗಳ ತಲಾಶ್ – ಇಂದು ಅಥವಾ ನಾಳೆ ಆಪ್ತನ ಬಂಧನವಾಗುತ್ತೆಂದ ಬಿಎಸ್​ವೈ!

ಕರ್ನಾಟಕದ ಪ್ರತಿ ನಗರದಲ್ಲಿ ಬಿಜೆಪಿ ಮತ್ತು ಬೊಮ್ಮಾಯಿ ಸರ್ಕಾರದ ವಿರದ್ಧ ಕಾಂಗ್ರೆಸ್‌ ಪ್ರತಿಭಟನೆ ನಡೆಸಲು ಸಜ್ಜಾಗಿದೆ. 40 ಪರ್ಸೆಂಟ್‌ ಕಮಿಷನ್‌ ಹಗರಣ, ವರ್ಗಾವಣೆ, ಪೋಸ್ಟಿಂಗ್‌ಗೆ ಲಂಚ, ಮೈಸೂರು ಸ್ಯಾಂಡಲ್‌ ಸೋಪ್‌ ಸಂಸ್ಥೆಯಲ್ಲಿ ಲಂಚ, ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರು, ಸಹಾಯಕ ಎಂಜಿನಿಯರ್‌, ಜೂನಿಯರ್‌ ಎಂಜಿನಿಯರ್‌, ಪೌರ ಕಾರ್ಮಿಕರು, ಕೆಎಂಎಫ್‌ ಹುದ್ದೆ, ಸಹಾಯಕ ರಿಜಿಸ್ಟ್ರಾರ್‌ ನೇಮಕದ ಅಕ್ರಮದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ರಾಜ್ಯದ ಜನ ನಮಗೆ ನೆಮ್ಮದಿ ಸಿಗಬೇಕೆಂದು ಕಾಯುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀರಾವರಿ, ಲೋಕೋಪಯೋಗಿ ಮಧ್ಯಂತರ ಟೆಂಡರ್ ಕೊಡುತ್ತಿದ್ದಾರೆ. ಅಷ್ಟೆ ಅಲ್ಲ ಕೆಲಸದ ಸೂಚನೆಯನ್ನು‌ ನೀಡುತ್ತಿದ್ದಾರೆ. ಚುನಾವಣೆಯಲ್ಲಿ ಹಣ ಮಾಡಲು ಇದೊಂದು ತಂತ್ರ. ಮೊದಲೇ ಕಾಮಗಾರಿಯ ಹಣ ಬಿಡುಗಡೆ ಮಾಡುತ್ತಿದ್ದಾರೆ. ಆದರೆ ನಾವು ಪ್ರತಿಯೊಂದು ಇಲಾಖೆಯನ್ನು ಟ್ರ್ಯಾಕ್ ಮಾಡುತ್ತಿದ್ದೇವೆ. ಇಂಧನ ಇಲಾಖೆಯಲ್ಲಿ ಟೆಂಡರ್ ಕರೆಯದೆ ಕೆಲಸ ಕೊಡುತ್ತಿದ್ದಾರೆ. ಬಿಜೆಪಿ ಅವರಿಗೆ ನೀತಿ ಸಂಹಿತೆ ಬಂದ ಮೇಲೆ ಹಣ ಮಾಡಲು ಆಗುವುದಿಲ್ಲ ಎಂದು ಲೋಕಾಯುಕ್ತ ಸಂಸ್ಥೆಗೆ ಕಾಂಗ್ರೆಸ್, ಜೆಡಿಎಸ್ ನಾಯಕರ ಮೇಲೆ ದಾಳಿ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಮಾ.9 ರಂದು ಬೆಳಗ್ಗೆ 9 ರಿಂದ 11ರ ವರೆಗೆ ಕಾಂಗ್ರೆಸ್ ಬಂದ್‌ ನಡೆಸಲಿದೆ. ಆದರೆ ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು, ಕೂಡಲೇ ಬಂದ್‌ ಹಿಂಪಡೆಯಬೇಕು ಎಂದು ಜೆಡಿಎಸ್‌ ಆಗ್ರಹಿಸಿದೆ. ಮಾ.9ರಂದು ದ್ವಿತೀಯ ಪಿಯು ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಬಸ್‌ಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್‌ ನಾಯಕರು ಬಂದ್‌ ರದ್ದುಪಡಿಸಬೇಕು. ಇಲ್ಲವೇ ಸಮಯದಲ್ಲಿ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

suddiyaana