ಹೆಚ್.ಡಿ ಕೆ ತೋಟದ ಮನೆಯಲ್ಲಿ 11 ದಿನಗಳ ಚಂಡಿಕಾಯಾಗ- ದೇವೇಗೌಡರ ಆರೋಗ್ಯಕ್ಕಾಗಿ ಕೋಟಿ ಮೃತ್ಯುಂಜಯ ಜಪ
ಪಂಚರತ್ನ ರಥಯಾತ್ರೆ ಯಶಸ್ಸಿಗೆ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವೃದ್ಧಿಗಾಗಿ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ. ಬಿಡದಿ ಕೇತಗಾನಹಳ್ಳಿ ಬಳಿಯ ತೋಟದ ಮನೆಯಲ್ಲಿ ಶುಕ್ರವಾರದಿಂದ 11 ದಿನಗಳ ಕಾಲ ಚಂಡಿಕಾಯಾಗ ಮತ್ತು ಕೋಟಿ ಮೃತ್ಯುಂಜಯ ಜಪ ನಡೆಯುತ್ತಿದೆ. ಪಂಚರತ್ನ ಯಾತ್ರೆ ಶ್ರೇಯಸ್ಸಿಗಾಗಿ 11 ದಿನಗಳ ಕಾಲ ಚಂಡಿಕಾ ಯಾಗ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವೃದ್ಧಿಗಾಗಿ ಕೋಟಿ ಮೃತ್ಯುಂಜಯ ಜಪ ಮಾಡುತ್ತಿರುವುದಾಗಿ ಸ್ವತಃ ಹೆಚ್. ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಬ್ರಹ್ಮಾಂಡ ಭ್ರಷ್ಟಾಚಾರ.. ಬೊಮ್ಮಾಯಿ ರಾಜೀನಾಮೆಗೆ ಒತ್ತಡ – ಬೆಂಗಳೂರಲ್ಲಿ ಕೆರಳಿದ ‘ಕೈ’ಪಡೆ!
ವಿವಿಧ ರಾಜ್ಯಗಳಿಂದ ಆಗಮಿಸಿರುವ 300 ಕ್ಕೂ ಅಧಿಕ ಪುರೋಹಿತರು ಈ ಮಹಾಯಾಗದಲ್ಲಿ ಭಾಗವಹಿಸಿದ್ದಾರೆ. ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ಆರಂಭವಾದ ಮಹಾ ಯಾಗದಲ್ಲಿ ಮಂತ್ರ ಪಾರಾಯಣ ಹಾಗೂ ಪೂಜಾ ಸಂಕಲ್ಪ ನೆರವೇರಿದೆ. ಕುಮಾರಸ್ವಾಮಿ ದಂಪತಿ ಸಾಂಪ್ರದಾಯಿಕ ಉಡುಗೆ ತೊಟ್ಟು ಯಾಗದಲ್ಲಿ ಪಾಲ್ಗೊಂಡಿದ್ದರು. ಮಾಜಿ ಸಚಿವ ಹೆಚ್ಡಿ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ, ನಿಖಿಲ್ ಪುತ್ರ ಅವ್ಯಾನ್ ದೇವ್ ಗೌಡ ಕೂಡಾ ಭಾಗಿಯಾಗಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಚ್.ಡಿ.ಕುಮಾರಸ್ವಾಮಿ ಅವರು, “ನಮ್ಮ ಪಂಚರತ್ನ ಯೋಜನೆ ಯಶಸ್ವಿಗಾಗಿ, ನಮ್ಮ ತಂದೆಯವರ ಆರೋಗ್ಯಕ್ಕಾಗಿ ಯಾಗ ಮಾಡಲಾಗುತ್ತಿದೆ. 250 – 300 ಜನ ಪುರೋಹಿತರು ಭಾಗಿಯಾಗಿದ್ದಾರೆ. 9 ದಿನಗಳ ಕಾಲ ಯಾಗ ನಡೆಯಲಿದೆ” ಎಂದು ತಿಳಿಸಿದರು.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಬಳಿಕ ದೇಶದಲ್ಲೇ 11 ದಿನಗಳ ದೊಡ್ಡ ಯಾಗ ನಡಿಸಿದ ಎರಡನೇ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಎಚ್.ಡಿ ಕುಮಾರಸ್ವಾಮಿ ಪಾತ್ರರಾಗಿದ್ದಾರೆ.