ಮದುವೆ ಮನೆಯಲ್ಲಿ ಡಿಜೆ ಅಬ್ಬರ – ವೇದಿಕೆ ಮೇಲೆಯೇ ಕುಸಿದು ಪ್ರಾಣ ಬಿಟ್ಟ ಮದುಮಗ!
ಮದುವೆ ಅಂದಮೇಲೆ ಸಂಭ್ರಮ ಇರಲೇಬೇಕಲ್ವಾ. ಈಗಂತೂ ಮೆಹೆಂದಿ ಶಾಸ್ತ್ರ, ಅರಿಶಿನಶಾಸ್ತ್ರ, ಚಪ್ಪರ ಶಾಸ್ತ್ರ ಅದು ಇದು ಅನ್ಕೊಂಡು ವಾರಗಟ್ಟಲೆ ಸೆಲೆಬ್ರೇಷನ್ ಮಾಡ್ತಾರೆ. ಇನ್ನೂ ಕೆಲವು ಕಡೆ ಅಬ್ಬರದ ಡಿಜೆ ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಾರೆ. ಆದ್ರೆ ಇಲ್ಲಿ ಡಿಜೆ ಸದ್ದು ವರನ ಪ್ರಾಣವನ್ನೇ ಕಸಿದಿದೆ.
ಬಿಹಾರದಲ್ಲಿ (Bihar) ನಡೆದಿರೋ ಈ ಘಟನೆ ಮದುವೆ (Marriage) ಮನೆಯಲ್ಲಿ ಸೂತಕ ಆವರಿಸುವಂತೆ ಮಾಡಿದೆ. ವಿವಾಹ ಸಮಾರಂಭದಲ್ಲಿ ವಧು-ವರರು ಹಾರಗಳನ್ನು ಬದಲಾಯಿಸಿಕೊಂಡ ಕೆಲವೇ ಕ್ಷಣಗಳಲ್ಲಿ ವರ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾನೆ. ಹೈ ಡೆಸಿಬಲ್ ಡಿಜೆ ಮ್ಯೂಸಿಕ್ ಪರಿಣಾಮ ವರ ಅಸ್ವಸ್ಥನಾಗಿ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ (Hospital)ಸ್ಥಳಾಂತರಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಈ ಮಹಿಳೆ ನಿದ್ರೆ ಮಾಡಿದ್ರೆ 4 ದಿನವಾದ್ರೂ ಎಚ್ಚರವಾಗಲ್ಲ – ‘ಸ್ಲೀಪಿಂಗ್ ಬ್ಯೂಟಿʼಯ ಸೀಕ್ರೆಟ್ ಏನು?
ಬುಧವಾರದಂದು ಸುರೇಂದ್ರ ಮತ್ತು ವಧು ಇಬ್ಬರೂ ಮದುವೆಗೆ ಸಿದ್ಧಪಡಿಸಲಾದ ವೇದಿಕೆ ಮೇಲೆ ನಿಂತಿದ್ದರು. ನವಜೋಡಿ ಹಾರ ಬದಲಾಯಿಸಿಕೊಂಡು ಇತರ ಧಾರ್ಮಿಕ ವಿಧಿಗಳನ್ನು ಮುಗಿಸಿದ್ದಾರೆ. ಈ ವೇಳೆ ಸುರೇಂದ್ರ ಅವರು ತಮ್ಮ ಮದುವೆಯ ಮೆರವಣಿಗೆಯಲ್ಲಿ ಪ್ಲೇ ಆಗುತ್ತಿದ್ದ ಡಿಜೆಯ ಭಾರಿ ಶಬ್ದವನ್ನು ತಗ್ಗಿಸುವಂತೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೂ ಇವರ ಮಾತನ್ನು ಯಾರು ಕೇಳಿಲ್ಲ. ಹಾರ ಬದಲಿಸಿಕೊಂಡ ಕೆಲವೇ ಕ್ಷಣಗಳಲ್ಲಿ, ಸುರೇಂದ್ರ ವೇದಿಕೆಯ ಮೇಲೆ ಕುಸಿದುಬಿದ್ದಿದ್ದಾರೆ. ನಂತರ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತು, ಆದರೆ ಸುರೇಂದ್ರ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸುರೇಂದ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಶಂಕಿಸಿದ್ದಾರೆ.
ಮದುವೆಯಲ್ಲಿ ವಿಪರೀತವಾಗಿ ಡಿಜೆ ಸೌಂಡ್ ಕೊಟ್ಟಿದ್ದು ಗ್ರಾಮಸ್ಥರು ಕೂಡ ಶಬ್ಧವನ್ನು ತಗ್ಗಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಅವರ ಮನವಿಯನ್ನು ಕಡೆಗಣಿಸಲಾಯಿತು. ಜೋರು ಮ್ಯೂಸಿಕ್ನಿಂದಲೇ ಆತನಿಗೆ ಹೃದಯಾಘಾತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮತ್ತೊಂದೆಡೆ ಸ್ಥಳೀಯ ಆಡಳಿತ ಡಿಜೆ ಮೇಲೆ ಕಟ್ಟುನಿಟ್ಟಾದ ನಿಷೇಧವೇರಿದೆ. ಆದರೂ ಇದರ ಬಳಕೆ ಮಾಡಿರುವುದು ನಿಷೇಧದ ಬಗ್ಗೆ ಹಲವು ಪ್ರಶ್ನೆ ಮೂಡಿಸಿದೆ.