ವಧುವಿನ ಬಾಳಿಗೆ ಶಾಪವಾದ ಬ್ಯೂಟಿಪಾರ್ಲರ್ – ಮೇಕಪ್ ನಿಂದ ಮದುವೆಯೇ ಕ್ಯಾನ್ಸಲ್!

ವಧುವಿನ ಬಾಳಿಗೆ ಶಾಪವಾದ ಬ್ಯೂಟಿಪಾರ್ಲರ್ – ಮೇಕಪ್ ನಿಂದ ಮದುವೆಯೇ ಕ್ಯಾನ್ಸಲ್!

ಹಾಸನ: ಮದುವೆ ಅಂದಾಗ ಹೆಣ್ಣು ಮಕ್ಕಳು ಹತ್ತಾರು ದಿನಗಳಿಂದ ಸಿದ್ಧತೆ ನಡೆಸುತ್ತಾರೆ. ತಾನು ಅಂದವಾಗಿ ಕಾಣಬೇಕು. ದೇವಲೋಕದ ಸುಂದರ ಕನ್ಯೆಯಂತೆ ಕಾಣಬೇಕು ಎಂದು ನಾನಾ ರೀತಿಯ ಕನಸು ಕಂಡಿರುತ್ತಾರೆ. ಹಾಗಾಗಿ ಮದುವೆಗೆ ಕೆಲವು ದಿನಗಳು ಬಾಕಿ ಉಳಿದಿವೆ ಅಂದಾಗ ಪಾರ್ಲರ್ ಗೆ ಹೋಗಿ ಏನೇನೋ ಫೇಶಿಯಲ್ ಗಳನ್ನು ಮಾಡಿಸುತ್ತಾರೆ. ಇದೀಗ ಹಾಸನದ ಯುವತಿಯೊಬ್ಬಳು ಮದುವೆಯಾಗಲು ತಯಾರಾಗಿ ಹೊಸ ಜೀವನದ ಕನಸು ಕಂಡಿದ್ದಳು. ಆದರೆ ಆಕೆಯ ಕನಸು ನನಸಾಗುವ ಮುನ್ನವೇ ಮೇಕಪ್ ಅವಳ ಮುಖಕ್ಕೆ ಗ್ರಹಣದಂತೆ ಆವರಿಸಿಕೊಂಡಿದೆ.

ಇದನ್ನೂ ಓದಿ: ಪತ್ನಿಗಾಗಿ ಬರೋಬ್ಬರಿ 7 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣ– ಆಧುನಿಕ  ಶಹಜಹಾನ್ ಇವರೇ ನೋಡಿ…

ಹೌದು, ಹಾಸನದ ಅರಸೀಕೆರೆಯಲ್ಲಿ ವಧುವಿಗೆ ಹೊಸ ಮಾದರಿಯ ಮೇಕಪ್ ಶಾಪವಾಗಿ ಪರಿಣಮಿಸಿದೆ. ಇದರಿಂದಾಗಿ ಆಕೆಯ ಮುಖ ಸಂಪೂರ್ಣ ವಿರೂಪಗೊಂಡಿದೆ. ಹೀಗಾಗಿ ಆಕೆಯ ಮದುವೆಯೇ ಕ್ಯಾನ್ಸಲ್ ಆಗಿದೆ.

ವಧು ತನ್ನ ಮದುವೆಗಾಗಿ ನಗರದ ಗಂಗಾಶ್ರೀ ಹರ್ಬಲ್ ಬ್ಯೂಟಿ ಪಾರ್ಲರ್ ಆ್ಯಂಡ್ ಸ್ಪಾಗೆ ತೆರಳಿದ್ದಾಳೆ. ಈ ವೇಳೆ ಬ್ಯೂಟಿಪಾರ್ಲರ್‌ನ ಮಾಲಕಿ ಗಂಗಾ ಹೊಸ ಬಗೆಯ ಮೇಕಪ್ ಇದೆ. ಅದನ್ನು ಮಾಡಿಸಿಕೊಂಡರೆ ಇನ್ನೂ ಅಂದವಾಗಿ ಕಾಣುತ್ತೀರಿ ಎಂದು ಹೇಳಿದ್ದಾರೆ. ಗಂಗಾ ಮಾತು ಕೇಳಿದ ವಧು ಈ ಮೇಕಪ್ ಮಾಡಿಸಿಕೊಳ್ಳಲು ಒಪ್ಪಿಕೊಂಡಿದ್ದಾಳೆ. ಬಳಿಕ ಗಂಗಾ ವಧು ಮುಖಕ್ಕೆ ಸ್ಟೀಮ್ ನೀಡಿದ್ದಾಳೆ. ಇದರಿಂದಾಗಿ ವಧುವಿನ ಮುಖ ಸಂಪೂರ್ಣ ಊದಿಕೊಂಡು ಸುಟ್ಟಂತೆ ಕಪ್ಪಾಗಿದೆ ಎಂದು ವರದಿಯಾಗಿದೆ.

ವಧುವಿನ ವಿರೂಪಗೊಂಡ ಮುಖ ನೋಡಿ ಮದುವೆಯಾಗಲು ವರ ಹಾಗೂ ವರನ ಕುಟುಂಬಸ್ಥರು ನಿರಾಕರಿಸಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ನಡೆದಿದ್ದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮದುವೆ ಕ್ಯಾನ್ಸಲ್ ಆದ ಹಿನ್ನೆಲೆ ವಧು ಮನೆಯವರು ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು  ಬ್ಯೂಟಿಪಾರ್ಲರ್ ಮಾಲಕಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

suddiyaana