ಜನವರಿಯಲ್ಲೇ 29 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳು ಬ್ಯಾನ್ – ನಿಮ್ಮ ಅಕೌಂಟ್ ಸೇಫ್ ಇದ್ಯಾ..?

ಜನವರಿಯಲ್ಲೇ 29 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳು ಬ್ಯಾನ್ – ನಿಮ್ಮ ಅಕೌಂಟ್ ಸೇಫ್ ಇದ್ಯಾ..?

ಜನ ಈಗಂತೂ ಊಟ ಬಿಟ್ರೂ ಮೊಬೈಲ್ ಬಿಡಲ್ಲ. ಅದ್ರಲ್ಲೂ ಯೂಟ್ಯೂಬ್, ಫೇಸ್ ಬುಕ್, ಇನ್ಸ್ ಟಾಗ್ರಾಂ, ರೀಲ್ಸ್ ನಲ್ಲೂ ಹಣ ಬರುತ್ತೆ ಅಂದ ಮೇಲಂತೂ ಮೊಬೈಲ್​ನಲ್ಲೇ ಮುಳುಗಿ ಹೋಗಿರ್ತಾರೆ. ಇನ್ನು ಫ್ರೆಂಡ್ಸ್, ಫ್ಯಾಮಿಲಿ ಅನ್ಕೊಂಡು ಯಾವಾಗ್ಲೂ ವಾಟ್ಸಾಪ್​ನಲ್ಲಿ ಇರೋರಿಗೂ ಏನು ಕಮ್ಮಿ ಇಲ್ಲ. ಆದ್ರೆ ಈಗ ವಾಟ್ಸಾಪ್ ಬಳಕೆದಾರರಿಗೆ ಮೆಟಾ ಕಂಪನಿ ಬಿಗ್ ಶಾಕ್ ನೀಡಿದೆ.

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಜನವರಿ ತಿಂಗಳಲ್ಲಿ ಬರೋಬ್ಬರಿ 29 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. ಬಳಕೆದಾರರ ಸುರಕ್ಷತಾ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸಾಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಜನವರಿ 01-31ರ ಅವಧಿಯಲ್ಲಿ ಅನೇಕ ದೂರುಗಳನ್ನು ಸ್ವೀಕರಿಸಲಾಗಿದೆ. ವಾಟ್ಸಾಪ್​ (WhatsApp) ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 29,18,000 ಕ್ಕೂ ಅಧಿಕ ವಾಟ್ಸ್​ಆ್ಯಪ್​ ಖಾತೆಗಳನ್ನು ಬ್ಯಾನ್ (Ban) ಮಾಡಲಾಗಿದೆ ಎಂದು ಮೆಟಾ ತಿಳಿಸಿದೆ. ಈ ಹಿಂದೆ ಡಿಸೆಂಬರ್ ತಿಂಗಳಲ್ಲಿ ಕೂಡ ಭಾರತದಲ್ಲಿ 37 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿಷೇಧಿಸಿರೋದಾಗಿ ವಾಟ್ಸಾಪ್ ಹೇಳಿತ್ತು.

ಇದನ್ನೂ ಓದಿ : ಕ್ಯಾಂಪಸ್ ನಲ್ಲಿ ಪ್ರತಿಭಟಿಸಿದ್ರೆ ₹20 ಸಾವಿರ ದಂಡ – ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಯಾಕಿಂಥಾ ಶಿಕ್ಷೆ?

ಬ್ಯಾನ್‌ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿರುವುದು ಕಂಡುಬಂದಿದೆ. ಇದಲ್ಲದೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ. ಕಳೆದ ವರ್ಷದ ಮೇ 26 ರಂದು ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು (5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು) ಪ್ರತಿ ತಿಂಗಳು ವರದಿಗಳನ್ನು ಪ್ರಕಟಿಸಬೇಕು. ಈ ವರದಿಯಲ್ಲಿ ಸ್ವೀಕರಿಸಿದ ದೂರುಗಳು ಹಾಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಬೇಕು.

ವಾಟ್ಸ್‌ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸಾಪ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ಬ್ಯಾನ್ ಮಾಡಬಹುದು.

suddiyaana