ನಂಬರ್-1 ಕಲುಷಿತ ನಗರ ದೆಹಲಿಯಲ್ಲ ಮುಂಬೈ – ಕೈ ಮೀರಿದ ಪರಿಸ್ಥಿತಿ.. ವೈದ್ಯರ ಎಚ್ಚರಿಕೆ ಏನು..?

ನಂಬರ್-1 ಕಲುಷಿತ ನಗರ ದೆಹಲಿಯಲ್ಲ ಮುಂಬೈ – ಕೈ ಮೀರಿದ ಪರಿಸ್ಥಿತಿ.. ವೈದ್ಯರ ಎಚ್ಚರಿಕೆ ಏನು..?

ದೇಶದಲ್ಲಿ ಅತ್ಯಂತ ಹೆಚ್ಚು ಮಾಲಿನ್ಯದಿಂದ ಕೂಡಿರುವ ನಗರ ಎಂದರೆ ರಾಷ್ಟ್ರ ರಾಜಧಾನಿ ದೆಹಲಿ ಹೆಸರು ಥಟ್ ಅಂತಾ ನೆನಪಿಗೆ ಬರುತ್ತೆ. ಆದ್ರೆ ಅಸಲಿ ವಿಚಾರ ಅಂದ್ರೆ ಈಗ ಕಲುಷಿತ ನಗರ ದೆಹಲಿ ಅಲ್ಲ ಮುಂಬೈ. ವಾಯು ಮಾಲಿನ್ಯದಿಂದಾಗಿ ಮುಂಬೈ ಸಿಟಿ ಅಕ್ಷರಶಃ ತತ್ತರಿಸಿ ಹೋಗಿದೆ.

ಮುಂಬೈನಲ್ಲಿ ಕಳೆದ ಮೂರು ತಿಂಗಳಿನಿಂದ ವಾಯುಮಾಲಿನ್ಯ ವಿಪರೀತವಾಗಿದ್ದು, ಮುಂಬೈ ನಿವಾಸಿಗಳು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶೀತ, ತಲೆನೋವು, ಗಂಟಲು ಸೋಂಕು, ನಿರಂತರ ಒಣ ಕೆಮ್ಮು ಮತ್ತು ಉಸಿರಾಟದ ತೊಂದರೆಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಮಾನವನ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ.ಸಲೀಲ್ ಬೇಂದ್ರೆ, ಕಳೆದ ಎರಡು ವಾರಗಳಲ್ಲಿ ಉಸಿರಾಟದ ತೊಂದರೆ ಮತ್ತು ಒಣ ಕೆಮ್ಮಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಡಬಲ್ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ : ಕ್ಯಾಂಪಸ್ ನಲ್ಲಿ ಪ್ರತಿಭಟಿಸಿದ್ರೆ ₹20 ಸಾವಿರ ದಂಡ – ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಯಾಕಿಂಥಾ ಶಿಕ್ಷೆ?

ಇನ್ನು ಜನವರಿ 29ರಿಂದ ಫೆಬ್ರವರಿ 8ರವರೆಗೆ ಸ್ವಿಸ್‌ ಏರ್‌ ಟ್ರ್ಯಾಕಿಂಗ್‌ ಇಂಡೆಕ್ಸ್‌ ಐಕ್ಯೂಏರ್‌ ವಾಯು ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆಸಿದೆ. ಈ ವೇಳೆ ಮುಂಬೈ ದೇಶದ ಅತ್ಯಂತ ಮಾಲಿನ್ಯ ಹೊಂದಿರುವ ನಗರ ಎಂದು ತಿಳಿದುಬಂದಿದೆ. ಮುಂಬೈ ವಿಶ್ವದಲ್ಲೇ 2ನೇ ಕಲುಷಿತ ನಗರ ಎಂಬ ಕುಖ್ಯಾತಿಗೆ ಗುರಿಯಾಗಿದೆ. ವಿಶೇಷವೆಂದರೆ ದೆಹಲಿ ಈ ಪಟ್ಟಿಯಲ್ಲಿ ಟಾಪ್​ 10ರಲ್ಲೂ ಕಾಣಿಸಿಕೊಂಡಿಲ್ಲ. ಜನವರಿ 29ರಂದು ಗಾಳಿಯ ಗುಣಮಟ್ಟದ ಶ್ರೇಯಾಂಕದಲ್ಲಿ ಮುಂಬೈ 10 ನೇಸ್ಥಾನದಲ್ಲಿತ್ತು. ಆದರೆ ಫೆಬ್ರವರಿ 2ರ ವೇಳೆಗೆ 2ನೇ ಸ್ಥಾನ ಪಡೆದುಕೊಂಡಿದೆ. ಫೆಬ್ರವರಿ 8ರವರೆಗೂ ದೇಶದ ವಾಣಿಜ್ಯ ನಗರಿ 2ನೇ ಸ್ಥಾನದಲ್ಲೇ ಮುಂದುವರಿದಿದೆ. ಇನ್ನು ಪಾಕಿಸ್ತಾನದ ಲಾಹೋರ್ ವಿಶ್ವದ ಅತ್ಯಂತ ಮಾಲಿನ್ಯಕಾರಕ ನಗರ ಎಂಬ ಕುಖ್ಯಾತಿ ಗಳಿಸಿದೆ.

suddiyaana