ಮೆಸ್ಸಿಯಿಂದ ‘ಗೋಲ್ಡನ್’ ಗಿಫ್ಟ್ – ವಿಶ್ವಕಪ್ ಗೆದ್ದ ತನ್ನ ತಂಡದ ಸದಸ್ಯರಿಗೆ ವಿಶೇಷ ಉಡುಗೊರೆ
ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ (Messi) ಇರೋದೇ ಹಾಗೆ. ಏನೇ ಮಾಡಿದರೂ ಫುಲ್ ಡಿಫರೆಂಟ್. ಅದರಲ್ಲೂ ಫಿಫಾ ವಿಶ್ವಕಪ್ ಎತ್ತಿಹಿಡಿದ ಅರ್ಜೆಂಟೀನಾ ತಂಡದ ಕ್ಯಾಪ್ಟನ್ ತಮ್ಮ ಗೆಲುವನ್ನು ಸ್ಮರಣೀಯವಾಗಿಸಲು ತಂಡದ ಪ್ರತಿಯೊಬ್ಬ ಸದಸ್ಯರಿಗೂ ಸರ್‌ಪ್ರೈಸ್ ಗಿಫ್ಟ್ ನೀಡಲು ಮುಂದಾಗಿದ್ದಾರೆ. ಅದು ಕೂಡಾ ಸಾಧಾರಣ ಉಡುಗೊರೆಯಲ್ಲ. ಅದು ಮೆಸ್ಸಿ ಕಡೆಯಿಂದ ಸಿಗಲಿರುವ ಗೋಲ್ಡನ್ ಗಿಫ್ಟ್. 2022ರಲ್ಲಿ ಕತಾರ್‌ನಲ್ಲಿ ನಡೆದ ಫಿಫಾ ಫುಟ್‌ಬಾಲ್ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ಐತಿಹಾಸಿಕ ಗೆಲುವು ದಾಖಲಿಸಿತ್ತು. ಫಿಫಾ ವಿಶ್ವಕಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ತಮ್ಮ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಹಾಗೂ ಸಹಾಯಕ ಸಿಬ್ಬಂದಿಗೂ ದುಬಾರಿ ಉಡುಗೊರೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಮೊದಲದಿನವೇ ಟೀಮ್ ಇಂಡಿಯಾ ಆಟಗಾರರ ಪೆವಿಲಿಯನ್ ಪರೇಡ್ – 109 ರನ್‌ಗಳಿಗೆ ಭಾರತ ಆಲ್ ಔಟ್
ಫುಟ್‌ಬಾಲ್ ಜಗತ್ತಿನ ಸ್ಟಾರ್ ಆಟಗಾರ ಮೆಸ್ಸಿ ತನ್ನ ತಂಡದ ಪ್ರತಿಯೊಬ್ಬ ಸದಸ್ಯ ಮತ್ತು ಸಹಾಯಕ ಸಿಬ್ಬಂದಿಗೆ ಚಿನ್ನದ ಐಫೋನ್‌ಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಪ್ರತಿಯೊಂದು ಚಿನ್ನದ ಐಫೋನ್‌ಗಳ ಬೆಲೆ ಅಂದಾಜು ರೂ. 1.73 ಕೋಟಿ ಎಂದು ಹೇಳಲಾಗುತ್ತಿದೆ. ಈ ಐಫೋನ್‌ಗಳನ್ನು 24-ಕ್ಯಾರೆಟ್ ಚಿನ್ನದಲ್ಲಿ ಮಾಡಲಾಗಿದೆ. ಹಾಗೆಯೇ ಪ್ರತಿಯೊಂದು ಐಫೋನ್‌ಗಳ ಮೇಲೆಯೂ ತಂಡದ ಆಟಗಾರನ ಹೆಸರು, ಆತನ ಜೆರ್ಸಿ ನಂಬರ್, ಮತ್ತು ಅರ್ಜೆಂಟೀನಾದ ಲೋಗೋವನ್ನು ಮುದ್ರಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಐಡಿಸೈನ್ ಗೋಲ್ಡ್ ಸಿಇಓ ಬೆನ್, ‘ಮೆಸ್ಸಿ, ವಿಶ್ವಕಪ್ ಫೈನಲ್ ಮುಗಿಸಿದ ಮೇಲೆ ಎರಡು ತಿಂಗಳ ನಂತರ ನಮ್ಮ ಬಳಿಗೆ ಬಂದಿದ್ದರು. ಈ ಅದ್ಭುತ ಗೆಲುವನ್ನು ಆಚರಿಸಲು ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗೆ ವಿಶೇಷ ಉಡುಗೊರೆಯನ್ನು ನೀಡುವುದಾಗಿ ಹೇಳಿಕೊಂಡರು. ವಾಚ್‌ಗಳನ್ನು ಉಡುಗೊರೆಯಾಗಿ ನೀಡುವುದಕ್ಕೆ ಮೆಸ್ಸಿ ಒಲ್ಲೆ ಎಂದರು. ಆದ್ದರಿಂದ, ನಾನು ಪ್ರತಿಯೊಬ್ಬ ಆಟಗಾರನ ಹೆಸರನ್ನು ಕೆತ್ತಲಾದ ಚಿನ್ನದ ಐಫೋನ್‌ಗಳನ್ನು ನೀಡಬಹುದು ಎಂಬ ಉಪಾಯ ನೀಡಿದೆ. ಕೂಡಲೇ ಮೆಸ್ಸಿ ಇದನ್ನು ಒಪ್ಪಿಕೊಂಡರು’ ಎಂದಿದ್ದಾರೆ. ಮೆಸ್ಸಿ ಈ ಗೋಲ್ಡನ್ ಗಿಫ್ಟ್ ಗಳನ್ನು ಸದ್ಯದಲ್ಲಿಯೇ ತನ್ನ ತಂಡದ ಸದಸ್ಯರಿಗೆ ನೀಡಲಿದ್ದಾರೆ.