ವಿದೇಶಿ ಸಿನಿಮಾ ನೋಡಿದ್ರೆ ಹುಷಾರ್ – ಮಕ್ಕಳಿಗೆ 5 ವರ್ಷ ಜೈಲು.. ಹೆತ್ತವರಿಗೆ 6 ತಿಂಗಳು ಶಿಕ್ಷೆ..!
ಉತ್ತರ ಕೊರಿಯಾದ ಸರ್ವೋಚ್ಛನಾಯಕ ಕಿಮ್ ಜಾಂಗ್ ಉನ್ ತನ್ನ ರಾಷ್ಟ್ರದಲ್ಲಿ ತರುವ ನಿಯಮಗಳು ಬೆಚ್ಚಿ ಬೀಳಿಸುವಂತಿರುತ್ತೆ. ಕೆಲ ದಿನಗಳ ಹಿಂದಷ್ಟೇ ತನ್ನ ರಾಷ್ಟ್ರದಲ್ಲಿ ಯಾರೂ ಕೂಡ ನನ್ನಂತೆ (ಕಿಮ್ ಜಾಂಗ್ ಉನ್) ಹೇರ್ ಕಟ್ ಮಾಡಿಸಿಕೊಳ್ಳಬಾರದು ಎಂದು ಆದೇಶ ಹೊರಡಿಸಿದ್ದ. ಹಾಗೇ ವಾರದ ಹಿಂದೆ ನನ್ನ ಮಗಳ ಹೆಸರನ್ನ ಇನ್ಮುಂದೆ ಯಾರಿಗೂ ಇಡುವಂತಿಲ್ಲ. ಈ ಹಿಂದೆಯೇ ಇಟ್ಟುಕೊಂಡಿದ್ದರೆ ಬದಲಿಸಿಕೊಳ್ಳಿ ಎಂದು ಆದೇಶ ನೀಡಿದ್ದ. ಇದಾದ ಕೆಲವೇ ದಿನಗಳಲ್ಲಿ ಈಗ ಮತ್ತೊಂದು ಕಾನೂನು ತಂದಿದ್ದಾನೆ.
ಇದನ್ನೂ ಓದಿ : 2 ವರ್ಷಗಳಲ್ಲಿ 240 ಸಿಂಹಗಳು ಸಾವು – ಗಿರ್ ಅರಣ್ಯದಲ್ಲಿ ಮೃಗರಾಜನ ಜೀವಕ್ಕೆ ಕಂಟಕ ಬಂದಿದ್ದು ಹೇಗೆ?
ಈಗಾಗ್ಲೇ ಉತ್ತರ ಕೊರಿಯಾದ ಜನ ಹತ್ತಾರು ನಿಬಂಧನೆಗಳ ನಡುವೆ ಬದುಕುತ್ತಿದ್ದಾರೆ. ಈಗ ಕಿಮ್ ಜಾಂಗ್ ಉನ್ ತನ್ನ ದೇಶದಲ್ಲಿ ವಿದೇಶಿ ಚಲನಚಿತ್ರಗಳನ್ನ ನಿಷೇಧಿಸಲು ಮುಂದಾನಿದ್ದಾನೆ. ನಿತ್ಯ ಕ್ಷಿಪಣಿಗಳ ಪರೀಕ್ಷೆ ಮಾಡುವ ಮೂಲಕ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿರೋ ಕಿಮ್ ಈಗ ಹಾಲಿವುಡ್ ಸಿನಿಮಾಗಳನ್ನ ಟಾರ್ಗೆಟ್ ಮಾಡಿದ್ದಾನೆ. ವಿದೇಶಿ ಸಿನಿಮಾಗಳನ್ನ ನೋಡಿ ಯಾರಾದ್ರೂ ತನ್ನ ವಿರುದ್ಧ ಬಂಡಾಯ ಏಳಬಹುದು ಅನ್ನೋ ಕಾರಣಕ್ಕೆ ವಿದೇಶಿ ಸಿನಿಮಾಗಳನ್ನೇ ಬ್ಯಾನ್ ಮಾಡಲು ನಿರ್ಧರಿಸಿದ್ದಾನೆ. ಉತ್ತರ ಕೊರಿಯಾದ ಮಕ್ಕಳು ಹಾಲಿವುಡ್ ಮತ್ತು ವಿದೇಶಿ ಸಿನಿಮಾಗಳನ್ನ ನೋಡುತ್ತಿರುವುದು ಗೊತ್ತಾದ್ರೆ ಆ ಮಕ್ಕಳ ಪೋಷಕರನ್ನ 6 ತಿಂಗಳ ಕಾಲ ಕಾರ್ಮಿಕ ಶಿಬಿರಕ್ಕೆ ಕಳಿಸೋದಾಗಿ ಘೋಷಿಸಿದ್ದಾನೆ. ಹಾಗೇ ಹಾಲಿವುಡ್ ಸಿನಿಮಾ ನೋಡುವ ಮಕ್ಕಳಿಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದ್ದಾನೆ.
ಈ ಹಿಂದೆ ಪೋಷಕರು ಮತ್ತು ಮಕ್ಕಳು ವಿದೇಶಿ ಮಾಧ್ಯಮಗಳನ್ನ ನೋಡಿ ಸಿಕ್ಕಿ ಬಿದ್ದರೆ ವಾರ್ನಿಂಗ್ ಕೊಟ್ಟು ಬಿಡಲಾಗುತ್ತಿತ್ತು. ಆದ್ರೆ ಈಗ ಪಾಶ್ಚಿಮಾತ್ಯ ಸಂಸ್ಕೃತಿಗೆ ತೆರೆದುಕೊಳ್ಳುವ ಮಕ್ಕಳು ಮತ್ತು ಪೋಷಕರಿಗೆ ಯಾವುದೇ ರೀತಿಯ ಮೃದುತ್ವವನ್ನು ತೋರಿಸುವುದಿಲ್ಲ ಎಂಬ ಸಂದೇಶ ನೀಡಿದ್ದಾನೆ. ಉತ್ತರ ಕೊರಿಯಾ ಸಣ್ಣ ರಾಷ್ಟ್ರವಾಗಿರೋದ್ರಿಂದ ಇತರ ದೇಶಗಳು ತಮ್ಮ ರಾಷ್ಟ್ರದ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ಅಧ್ಯಕ್ಷ ಕಿಮ್ ಕಠಿಣಾತಿ ಕಠಿಣ ರೂಲ್ಸ್ ಜಾರಿಗೆ ತರುತ್ತಿದ್ದಾನೆ. ಈ ಮೂಲಕ ಉತ್ತರ ಕೊರಿಯಾದ ಜನ ತಮ್ಮ ಅಧ್ಯಕ್ಷನ ದುರಾಡಳಿತಕ್ಕೆ ಬೇಸತ್ತು ಹೋಗಿದ್ದಾರೆ.