ಭ್ರಷ್ಟಾಚಾರದ ಆರೋಪದ ಬೆನ್ನಲ್ಲೇ ಎನ್.ಶಶಿಕುಮಾರ್ ಎತ್ತಂಗಡಿ – 6 ಐಪಿಎಸ್ ಅಧಿಕಾರಿಗಳ ವರ್ಗಾವಣೆ!
ಭ್ರಷ್ಟಾಚಾರದ ಆರೋಪ ಕೇಳಿ ಬಂದ ಬೆನ್ನಲ್ಲೇ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ರನ್ನ ಎತ್ತಂಗಡಿ ಮಾಡಲಾಗಿದೆ. ಶಶಿಕುಮಾರ್ ಸೇರಿದಂತೆ ಆರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ KSRP 1ನೇ ಬೆಟಾಲಿಯನ್ ಕಮಾಂಡೆಂಟ್ ಆಗಿರುವ ವಂಶಿಕೃಷ್ಣ ಅವರಿಗೆ ವೈರ್ಲೆಸ್ ಎಸ್ಪಿ ಹುದ್ದೆಯ ಹೆಚ್ಚುವರಿ ಹೊಣೆ ನೀಡಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರನ್ನು ರೈಲ್ವೆ ಡಿಐಜಿಯಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿಯಾಗಿರುವ ಕುಲದೀಪ್ ಕುಮಾರ್ ಆರ್.ಜೈನ್ ಅವರನ್ನು ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರ ಹುದ್ದೆಗೆ ನೇಮಕ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2020ರ ಡಿಸೆಂಬರ್ನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಎನ್.ಶಶಿಕುಮಾರ್ ಅವರನ್ನು ನೂತನ ಆಯುಕ್ತರನ್ನಾಗಿ ನೇಮಿಸಿತ್ತು. ಕರ್ತವ್ಯ ವಹಿಸಿಕೊಂಡ ಬಳಿಕ ಎನ್.ಶಶಿಕುಮಾರ್ ಮಂಗಳೂರಿನಲ್ಲಿ ಸಕ್ರಿಯ ಅಧಿಕಾರಿಯಾಗಿದ್ದರು. ಆದರೆ ಇತ್ತೀಚಿಗೆ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ : ಹೆಣ್ಣು ಸಿಕ್ತಿಲ್ಲ ಅಂತಾ ಮಹದೇಶ್ವರ ಬೆಟ್ಟಕ್ಕೆ ನಡಿಗೆ – ಬ್ರಹ್ಮಚಾರಿಗಳ ಪಾದಯಾತ್ರೆಗೆ ‘ಡಾಲಿ’ ಚಾಲನೆ
ಇತ್ತೀಚಿಗೆ ಮಂಗಳೂರು ನಗರದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಬಹಿರಂಗವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಮಂಗಳೂರು ಪೊಲೀಸ್ ಇಲಾಖೆಯ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಈ ಘಟನೆ ಬೆನ್ನಲ್ಲೇ ಎನ್.ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇನ್ನು ಗುಪ್ತಚರ ಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಡೆಕ್ಕ ಕಿಶೋರ್ ಬಾಬು ಅವರನ್ನು ವರ್ಗಾವಣೆ ಮಾಡಲಾಗಿದ್ದು, ಬೆಂಗಳೂರು ದಕ್ಷಿಣ ವಿಭಾಗದ ಟ್ರಾಫಿಕ್ ಡಿಸಿಪಿಯಾಗಿ ಮೊಹಮ್ಮದ್ ಸುಜೀತ, ಬೆಂಗಳೂರು ನಗರ ಸಿಎಆರ್ನ ಡಿಸಿಪಿಯಾಗಿ ಅರುಣಾಂಗ್ಷು ಗಿರಿ ಅವರನ್ನು ನೇಮಕ ಮಾಡಲಾಗಿದೆ. ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ)ಯಾಗಿ ಯಶೋಧಾ ವಂಟಗೋಡಿ ಅವರನ್ನು ನೇಮಕ ಮಾಡಲಾಗಿದೆ. ಇನ್ನು, KSRP 1ನೇ ಬೆಟಾಲಿಯನ್ ಕಮಾಂಡೆಂಟ್ ಆಗಿರುವ ಡಾ.ಕೋನ ವಂಶಿಕೃಷ್ಣ ಅವರಿಗೆ ವೈರ್ಲೆಸ್ ಎಸ್ಪಿ ಹುದ್ದೆ ಹೆಚ್ಚುವರಿ ಹೊಣೆಯಾಗಿ ನೀಡಲಾಗಿದೆ.