ನಾನು ಎಲೆಕ್ಷನ್ಗೆ ನಿಲ್ಲಲ್ಲ ಎಂದು ಬಿಎಸ್ವೈ ಭಾವನಾತ್ಮಕ ಭಾಷಣ – ಸದನದಲ್ಲೇ ‘ಆಪರೇಷನ್ ಕಮಲ’ದ ಸುಳಿವು ಕೊಟ್ರಾ?
ವಿಧಾನಸಭಾ ಕಲಾಪದಲ್ಲಿ ಇವತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭಾವನಾತ್ಮಕವಾಗಿ ಭಾಷಣ ಮಾಡಿದ್ರು. 2023-24ನೇ ಆಯವ್ಯಯದಲ್ಲಿ ನನ್ನ ಅಭಿಪ್ರಾಯಗಳನ್ನ ಹಂಚಿಕೊಳ್ಳೋಕೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮಾತು ಶುರು ಮಾಡಿದ ಬಿಎಸ್ವೈ ‘ಬೊಮ್ಮಾಯಿಯವರ ಬಜೆಟ್ ಸ್ವಾಗತಿಸುತ್ತೇನೆ. ರಾಜ್ಯದ ಹಣಕಾಸಿನ ಸಚಿವನಾಗಿ 7 ಮುಂಗಡಪತ್ರಗಳನ್ನ ಈ ಸದನದಲ್ಲಿ ಮಂಡಿಸಿದ್ದೇನೆ ಅಂದ್ರು.
ಇದನ್ನೂ ಓದಿ : ‘ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೂ ಓಡಿ ಬಂದವರು ಅಂತಾರೆ’ – ಸದನದಲ್ಲಿ ಸಿದ್ದರಾಮಯ್ಯಗೆ ಬಿಎಸ್ವೈ ಪಂಚ್!
ಕೆಲವರು ಬಿಜೆಪಿ ಯಡಿಯೂರಪ್ಪರಿಗೆ ಅನ್ಯಾಯ ಮಾಡಿದೆ, ಕಡೆಗಣಿಸಿದ್ದಾರೆ ಅಂತಾ ಟೀಕೆ ಮಾಡುತ್ತಾರೆ. ಆದ್ರೆ ಭಾರತೀಯ ಜನತಾ ಪಕ್ಷ, ಪ್ರಧಾನಿ ನರೇಂದ್ರ ಮೋದಿಯವರು ಯಾವತ್ತೂ ಕಡೆಗಣಿಸಿಲ್ಲ. ನನಗೆ ಕೊಟ್ಟಿರುವ ಸ್ಥಾನಮಾನಗಳು, ಗೌರವಕ್ಕೆ ಮೋದಿಯವರಿಗೆ ನಾನು ಋಣಿಯಾಗಿದ್ದೇನೆ. ಪಕ್ಷ ಅವಕಾಶ ಮಾಡಿಕೊಟ್ಟಿದ್ದರಿಂದ 4 ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ನನಗೆ ಸಿಕ್ಕಿರುವಷ್ಟು ಅವಕಾಶ ಬೇರೆ ಯಾರಿಗೂ ಸಿಕ್ಕಿಲ್ಲ. ಯಡಿಯೂರಪ್ಪರನ್ನ ಸುಮ್ಮನೆ ಕೂರಿಸಬಹುದು ಎಂಬ ಭ್ರಮೆಯಲ್ಲಿ ಯಾರಾದರೂ ಇರಬಹುದು. ಆದ್ರೆ ಯಡಿಯೂರಪ್ಪ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಭಾರತೀಯ ಜನತಾ ಪಾರ್ಟಿ ಬಹುಮತದೊಂದಿಗೆ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ. ಕಾಂಗ್ರೆಸ್ನವರು ವಿರೋಧಪಕ್ಷದಲ್ಲಿ ಕೂರೋದು ನಿಶ್ಚಿತ ಎಂದು ಅಬ್ಬರಿಸಿದ್ರು.
ಅಧಿವೇಶನದ ಬಳಿಕ ಬಿಜೆಪಿಯನ್ನ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಎಲ್ಲರಿಗೂ ಗೊತ್ತಿರುವಂತೆ ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಬದುಕಿನ ಕೊನೇ ಉಸಿರಿರುವವರೆಗೂ ಬಿಜೆಪಿಯನ್ನ ಕಟ್ಟೋದಕ್ಕೆ, ಅಧಿಕಾರಕ್ಕೆ ತರಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ನಾಳೆ ಅಧಿವೇಶನ ಮುಗಿದ ಮೇಲೆ ನಾನು ಮತ್ತೊಮ್ಮೆ ಇಲ್ಲಿಗೆ ಬರುವ ಅವಶ್ಯಕತೆ ಇಲ್ಲ. ಯಾಕಂದ್ರೆ ನಾನು ಚುನಾವಣೆಗೆ ನಿಲ್ಲಲ್ಲ ಅಂತಾ ಈಗಾಗ್ಲೇ ತೀರ್ಮಾನ ಮಾಡಿದ್ದೇನೆ. ಹೀಗಾಗಿ ನಮ್ಮ ಶಾಸಕರು ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಹಾಗೇ ಕಾಂಗ್ರೆಸ್ ಕಡೆಯ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಅವ್ರನ್ನೆಲ್ಲಾ ಜೊತೆಗೆ ಕರೆದುಕೊಂಡು ಮತ್ತೊಮ್ಮೆ ಸ್ಪಷ್ಟಬಹುಮತದೊಂದಿಗೆ ಬಿಜೆಪಿಯನ್ನ ಅಧಿಕಾರಕ್ಕೆ ತರೋಣ ಎಂದ್ರು.
ಈ ವಿಶೇಷ ಸಂದರ್ಭದಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಇದು ಒಂದು ರೀತಿಯ ವಿದಾಯ. ನಾನು ಮತ್ತೆ ಈ ಸದನದೊಳಗೆ ಬರುವ ಪ್ರಶ್ನೆಯೇ ಇಲ್ಲ ಅಂದ್ರು. ಈ ವೇಳೆ ಕೆಲ ಶಾಸಕರು ನಿಮ್ಮ ಹಿರಿತನ, ಅನುಭವ ಸದನಕ್ಕೆ ಬೇಕಾಗಿದೆ, ಮತ್ತೆ ಎಲೆಕ್ಷನ್ನಲ್ಲಿ ಸ್ಪರ್ಧಿಸಬೇಕು ಎಂದರು. ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಫೆಬ್ರವರಿ 24ರಂದು ಅವಕಾಶ ಕೊಡುತ್ತೇವೆ, ಈ ಬಗ್ಗೆ ಮಾತನಾಡಬೇಕು ಎಂದ್ರು.
ಇದೇ ವೇಳೆ ಶಾಸಕ ಪ್ರಿಯಾಂಕ್ ಖರ್ಗೆ, ಶಾಸಕ ಶಿವಲಿಂಗೇಗೌಡ ಮಾತನಾಡಿ ನೀವು ಎಲೆಕ್ಷನ್ಗೆ ನಿಂತು ಗೆದ್ದು ಬನ್ನಿ. ನಿಮ್ಮ ಸಹಕಾರ ಬೇಕು, ನಿಮ್ಮ ಅನುಭವ ಬೇಕು. ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಕೇಳಿದ್ರು.