ಕಾಡ್ಗಿಚ್ಚು ನಂದಿಸುವಾಗ ಅರಣ್ಯ ಸಿಬ್ಬಂದಿ ಸಾವು ಪ್ರಕರಣ – ಕಲಾಪದಲ್ಲಿ ರಸ್ತೆಗಾಗಿ ಒತ್ತಾಯಿಸಿದ ಸಕಲೇಶಪುರ ಶಾಸಕ!
ಕಾಡ್ಗಿಚ್ಚು ನಂದಿಸುವಾಗ ಬೆಂಕಿ ತಗುಲಿ ಅರಣ್ಯ ಸಿಬ್ಬಂದಿ ಮೃತಪಟ್ಟಿದ್ದ ಪ್ರಕರಣದ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಪ್ರಸ್ತಾಪ ಮಾಡಲಾಯ್ತು. ವಿಷಯ ಪ್ರಸ್ತಾಪಿಸಿದ ಸಕಲೇಶಪುರ ಶಾಸಕ ಹೆಚ್.ಕೆ ಕುಮಾರಸ್ವಾಮಿ ಸಮರ್ಪಕ ರಸ್ತೆ ಇಲ್ಲದಿದ್ದಕ್ಕೆ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿದ್ರು.
ಹಾಸನ ಜಿಲ್ಲೆಯ ಸಕಲೇಶಪುರ ವಲಯದ ಹಾಸನ ವಿಭಾಗದ ಕಾಡುಮನೆ ಅರಣ್ಯದಲ್ಲಿ ಕಾಡ್ಗಿಚ್ಚು ನಂದಿಸುವಾಗ ಅರಣ್ಯ ಸಿಬ್ಬಂದಿಗೆ ಬೆಂಕಿ ತಾಕಿತ್ತು. ಫಾರೆಸ್ಟ್ ಗಾರ್ಡ್ ಸುಂದರೇಶ್ ಕಾಡಿನ ಬೆಂಕಿ ನಂದಿಸುವಾಗಿ ಮೃತಪಟ್ಟಿದ್ದಾರೆ. ಮೂರು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಇಲ್ಲಿ ಗಮನಿಸಬೇಕಾದ ವಿಷಯ ಅಂದ್ರೆ ಅಲ್ಲಿಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಅರಣ್ಯ ಸಿಬ್ಬಂದಿ ಗಾಯಗೊಂಡ ಮೇಲೂ ಅವರನ್ನ ಆಸ್ಪತ್ರೆಗೆ ಕರೆತರಲು ಸುಮಾರು ನಾಲ್ಕೈದು ಗಂಟೆಗಳ ಕಾಲ ಎತ್ತಿಕೊಂಡು ಬಂದಿದ್ದಾರೆ. ಮೃತರು, ಗಾಯಾಳುಗಳ ಕುಟುಂಬಕ್ಕೆ ಸಾಂತ್ವನ ಹೇಳೋದು, ಪರಿಹಾರ ಕೊಡೋದು ಇದ್ದದ್ದೇ. ರಾಜ್ಯಾದ್ಯಂತ ಇಂಥದ್ದೇ ಪರಿಸ್ಥಿತಿ ಇದೆ.
ಇದನ್ನೂ ಓದಿ : ‘ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ’ – ಸದನದಲ್ಲಿ ಗುಡುಗಿದ ಸಿದ್ದರಾಮಯ್ಯ
ಮುಖ್ಯಮಂತ್ರಿ ಬೊಮ್ಮಾಯಿಯವರು ಅರಣ್ಯಾಧಿಕಾರಿಗಳು ಕಾಡಿಗೆ ಹೋಗಬೇಕು ಎಂದು ಹೇಳುತ್ತಾರೆ. ಆದ್ರೆ ಸ್ಥಳೀಯ ಅಧಿಕಾರಿಗಳು ಮಾತ್ರ ಹೋಗ್ತಿದ್ದಾರೆ. ಹಿರಿಯ ಅಧಿಕಾರಿಗಳು ಹೋಗುವುದೇ ಇಲ್ಲ. ಬೆಂಕಿ ನಂದಿಸುವ ವಿಚಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೆಚ್.ಕೆ ಕುಮಾರಸ್ವಾಮಿ ಆಗ್ರಹಿಸಿದ್ರು.
ಹೆಚ್.ಕೆ ಕುಮಾರಸ್ವಾಮಿ ಪ್ರಸ್ತಾಪಕ್ಕೆ ಸರ್ಕಾರದ ವತಿಯಿಂದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಉತ್ತರ ನೀಡಿದ್ರು. ಕಾಡುಮನೆ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿರೋದ್ರಿಂದ ಅರಣ್ಯಾಧಿಕಾರಿಗಳು ಗಸ್ತು ತೆರಳಿದ್ದರು. ಆದ್ರೆ ಕಾಡಿನ ಒಳಗೆ ಹೋದಾಗ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕೆಲವರು ಬಚಾವ್ ಆಗಿದ್ರೆ ಇನ್ನೂ ಕೆಲವ್ರು ಬೆಂಕಿಯಲ್ಲಿ ಸಿಲುಕಿದ್ದಾರೆ. ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಅತೀ ವೇಗವಾಗಿ ಹರಡಿರೋದ್ರಿಂದ ಹೀಗಾಗಿದೆ. ಇಂಥಾ ಸಮಯದಲ್ಲಿ ಕಾಡಿನಲ್ಲಿ ಶಿಫ್ಟ್ ಮಾಡೋದು ಕಷ್ಟ. ಎಲ್ಲಾ ಕಡೆಯೂ ರಸ್ತೆ ಮಾಡೋಕೆ ಆಗಲ್ಲ. ಇಂಥಾ ಘಟನೆಗಳೂ ಆದಾಗ ಏನು ಮಾಡೋಕೆ ಆಗಲ್ಲ ಎಂದ್ರು. ಜೊತೆಗೆ ಮೃತರ ಕುಟುಂಬಕ್ಕೆ 30 ಲಕ್ಷ ಇದ್ದ ಪರಿಹಾರವನ್ನ 50 ಲಕ್ಷ ಕೊಟ್ಟಿದ್ದೇವೆ. ಅವ್ರ ಕುಟುಂಬದ ಜೊತೆ ಸರ್ಕಾರ ಇದೆ ಎಂದು ಭರವಸೆ ನೀಡಿದ್ರು.