ಕನ್ನಡದ ಬಾಂಡ್ ಸಿನಿಮಾಗಳ ಸರದಾರ ಇನ್ನಿಲ್ಲ – ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ವಿಧಿವಶ..!

ಕನ್ನಡದ ಬಾಂಡ್ ಸಿನಿಮಾಗಳ ಸರದಾರ ಇನ್ನಿಲ್ಲ – ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ವಿಧಿವಶ..!

ಕನ್ನಡ ಚಿತ್ರರಂಗದ ಖ್ಯಾತ ಹಾಗೂ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ವಿಧಿವಶರಾಗಿದ್ದಾರೆ.   ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭಗವಾನ್ (90) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಬಿ. ದೊರೈರಾಜ್​ ಹಾಗೂ ಎಸ್​.ಕೆ ಭಗವಾನ್ ಒಟ್ಟಾಗಿ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಈ ಜೋಡಿ ದೊರೈ ಭಗವಾನ್ ಎಂದೇ ಫೇಮಸ್ ಆಗಿತ್ತು. ದೊರೈ ರಾಜ್ ಅವರು 2000ನೇ ಇಸವಿಯಲ್ಲಿ ನಿಧನ ಹೊಂದಿದ್ದರು. ಇವರು ಒಟ್ಟಾಗಿ 27 ಸಿನಿಮಾ ನಿರ್ದೇಶನ ಮಾಡಿದ್ದರು. ಅದ್ರಲ್ಲೂ 30ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಜ್​ಕುಮಾರ್ ಜೊತೆ ಭಗವಾನ್ ಸಿನಿಮಾ ಮಾಡಿದ್ದರು. ಬರೋಬ್ಬರಿ 49 ಸಿನಿಮಾಗಳನ್ನು ಈ ಜೋಡಿ ನಿರ್ದೇಶನ ಮಾಡಿದ್ದು ವಿಶೇಷ. ಈ ಜೋಡಿಯ ಮತ್ತೊಂದು ದಾಖಲೆಯೆಂದರೆ 24 ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಈ ಜೋಡಿ  ನಿರ್ದೇಶನ ಮಾಡಿದೆ.

ಇದನ್ನೂ ಓದಿ :  ಯಕ್ಷಲೋಕದಿಂದ ಮರೆಯಾದ ಬಲಿಪ ನಾರಾಯಣ ಭಾಗವತ – ಕಂಚಿನ ಕಂಠದ ಯಕ್ಷ ದಿಗ್ಗಜ ಇನ್ನು ನೆನಪು ಮಾತ್ರ

ಕನ್ನಡದ ಅಷ್ಟೂ ಸೂಪರ್ ಸ್ಟಾರ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಈ ಜೋಡಿಯದ್ದು. ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿಕನ್ಯೆ, ಚಂದನದ ಗೊಂಬೆ, ಜೀವನ ಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನ ಮಾದರಿ ಹೀಗೆ ಅಷ್ಟೂ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಜುಲೈ 5, 1993ರಲ್ಲಿ ಹುಟ್ಟಿದ್ದ ಭಗವಾನ್ ಅವರು ಪ್ರೌಢಶಿಕ್ಷಣವನ್ನು ಬೆಂಗಳೂರನಲ್ಲಿ ಮುಗಿಸಿದ್ದರು. ನಾಟಕದಲ್ಲಿ ಬಣ್ಣ ಹಚ್ಚುತ್ತಿದ್ದ ಅವರು ಕಣಗಲ್ ಪ್ರಭಾಕರ್ ಶಾಸ್ತ್ರಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. 1956 ರಲ್ಲಿ ಸಹಾಯಕರಾಗಿ ‘ಭಾಗ್ಯೋದಯ’ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ನಂತರ 1966ರಲ್ಲಿ ತೆರೆಗೆ ಬಂದ ‘ಸಂಧ್ಯಾರಾಗ’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. ಆದರೆ, ಇದರ ಕ್ರೆಡಿಟ್​ನ ಎ.ಸಿ. ನರಸಿಂಹಮೂರ್ತಿಗೆ ನೀಡಲಾಯಿತು.

ಶ್ರೀನಿವಾಸ್ ಕೃಷ್ಣ ಅಯ್ಯಂಗಾರ್ ಭಗವಾನ್ (SK Bhagavan) ಇವರು ಪೂರ್ಣ ಹೆಸರು. 1933ರಲ್ಲಿ ಮೈಸೂರಿನ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದ್ದ ಇವರು, ರಂಗಭೂಮಿ ಹಿನ್ನೆಲೆಯುಳ್ಳವರು. ಕಾಲೇಜು ದಿನಗಳಲ್ಲಿ ರಂಗಭೂಮಿಯ ಸಾಕಷ್ಟು ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಕನ್ನಡಕ್ಕೆ ಬಾಂಡ್ ಶೈಲಿಯ ಸಿನಿಮಾಗಳನ್ನು ಪರಿಚಯಿಸಿದ್ದು ದೊರೈ ಭಗವಾನ್. 1968ರಲ್ಲಿ ರಿಲೀಸ್ ಆದ ರಾಜ್​ಕುಮಾರ್ ನಟನೆಯ ‘ಜೇಡರ ಬಲೆ’ ಚಿತ್ರಕ್ಕೆ ದೊರೈ-ಭಗವಾನ್ ನಿರ್ದೇಶನ ಮಾಡಿದರು. ಈ ಸಿನಿಮಾ ಯಶಸ್ಸು ಕಂಡಿತು. ಇದು ಕನ್ನಡದ ಮೊದಲ ಬಾಂಡ್ ಶೈಲಿಯ ಸಿನಿಮಾ.

ಭಗವಾನ್ ನಿಧನಕ್ಕೆ ಸಿನಿಪ್ರಿಯರು, ಕನ್ನಡ ಚಿತ್ರರಂಗದ ಹಿರಿಯರು ಸಂತಾಪ ಸೂಚಿಸಿದ್ದಾರೆ. ಭಗವಾನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ಧರಾಮಯ್ಯ, ನಟಿ, ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ರಾಜಕೀಯ ಕ್ಷೇತ್ರದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ.

 

suddiyaana