ಒಂದೇ ಬಾವಿಗೆ ಬಿದ್ದ ಚಿರತೆ, ಬೆಕ್ಕು – ಪ್ರಾಣ ಉಳಿಸಿಕೊಳ್ಳಲು ಬೆಕ್ಕು ಮಾಡಿದ ಸರ್ಕಸ್ ಹೇಗಿತ್ತು?

ಒಂದೇ ಬಾವಿಗೆ ಬಿದ್ದ ಚಿರತೆ, ಬೆಕ್ಕು – ಪ್ರಾಣ ಉಳಿಸಿಕೊಳ್ಳಲು ಬೆಕ್ಕು ಮಾಡಿದ ಸರ್ಕಸ್ ಹೇಗಿತ್ತು?

ಅತಿಯಾದ ಪರಿಸರ ನಾಶ, ಅತಿಕ್ರಮಣ ಇವುಗಳಿಂದಾಗಿ ಕಾಡು ಪ್ರಾಣಿಗಳು ಆಹಾರವನ್ನು ಅರಸುತ್ತಾ ನಾಡಿನತ್ತ ಧಾವಿಸುತ್ತಿವೆ. ಕೆಲವೊಂದು ಬಾರಿ ಯಾವುದೇ ಆಹಾರ ಸಿಗದ ಸಂದರ್ಭ ಮನುಷ್ಯರ ಮೇಲೂ ದಾಳಿ ಮಾಡುವುದನ್ನು ಕೇಳಿದ್ದೇವೆ. ವನ್ಯ ಜೀವಿಗಳು ಹಸಿವನ್ನು ನೀಗಿಸಲು ದುರ್ಬಲ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಹೀಗೆ ಬೇಟೆಯನ್ನರಸಿ ಬರುವ ಪ್ರಾಣಿಗಳು ಒಂದೊಂದು ಸಲ ಕಷ್ಟಕ್ಕೂ ಗುರಿಯಾಗುತ್ತವೆ. ಇದಕ್ಕೆ ಸಾಕ್ಷಿ ಅನ್ನುವಂತಿದೆ ವೈರಲ್ ಆದ ವಿಡಿಯೋ.

ಇದನ್ನೂ ಓದಿ: ಭಾರತಕ್ಕೆ ಬಂತು 12 ಚೀತಾ! – ಫೋಟೋ ಕ್ಲಿಕ್ಕಿಸ್ತಾರಾ ಅನಿಲ್ ಕುಂಬ್ಳೆ?

ಕೆಲ ವನ್ಯಜೀವಿಗಳು ತಮ್ಮ ಹಸಿವನ್ನು ನೀಗಿಸಲು ಸಣ್ಣ ಪ್ರಾಣಿಗಳನ್ನು ಅಟ್ಟಿಸಿಕೊಂಡು ನಾಡಿನತ್ತ ಬರುತ್ತವೆ. ಈ ವೇಳೆ ಪ್ರಾಣಿಗಳು ಅಪಾಯಕ್ಕೆ ಸಿಲುಕುತ್ತವೆ. ವೈರಲ್ ಆದ ವಿಡಿಯೋದಲ್ಲಿ ಬೇಟೆಯ ಆಸೆಯಲ್ಲಿ ಬಂದಿದ್ದ ಚಿರತೆಗೆ ಬೆಕ್ಕು ಕಾಣಿಸಿಕೊಂಡಿತ್ತು. ಬೇಟೆಗಾರ ಚಿರತೆಯನ್ನು ಕಂಡು ಬೆಕ್ಕು ಭಯದಲ್ಲಿ ಓಡಿತ್ತು. ಓಡಿದ ಬೆಕ್ಕನ್ನು ಕಂಡು ಚಿರತೆ ಬೆನ್ನಟ್ಟಿತ್ತು. ಹೀಗೆ ಚಿರತೆಯಿಂದ ಜೀವ ಉಳಿಸಿಕೊಳ್ಳುವ ಬೆಕ್ಕಿನ ಪ್ರಯತ್ನ ಮತ್ತು ಬೆಕ್ಕನ್ನು ಹೊಟ್ಟೆಗಿಳಿಸಬೇಕೆಂಬ ಚಿರತೆಯ ಪ್ರಯತ್ನದ ನಡುವೆ ಎರಡೂ ಜೀವಿಗಳು ಒಟ್ಟಿಗೆ ಬಾವಿಗೆ ಬಿದ್ದಿವೆ. ಬೇಟೆಗಾರ ಚಿರತೆ ಹಾಗೂ ಬೆಕ್ಕು  ಬಾವಿಗೆ ಬಿದ್ದದ್ದನ್ನು ಕಂಡ ಜನರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುರೇಂದರ್ ಮೆಹ್ರಾ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ ಒಂದೇ ಬಾವಿಯಲ್ಲಿ ಚಿರತೆ ಮತ್ತು ಬೆಕ್ಕು ಇರುವುದನ್ನು ನೋಡಬಹುದು. ಬೆಕ್ಕು ಚಿರತೆಯ ಮೇಲಿನಿಂದ ಹೋಗಿ ತಪ್ಪಿಸಿಕೊಳ್ಳುವ ಸಿದ್ಧತೆಯಲ್ಲಿತ್ತು. ಆದರೆ ಕೋಪದಿಂದ ಗರ್ಜಿಸುತ್ತಿದ್ದ ಚಿರತೆಯನ್ನು ಕಂಡು ಭಯಗೊಂಡ ಬೆಕ್ಕು ತನ್ನ ಪ್ರಯತ್ನವನ್ನು ಕೈ ಬಿಟ್ಟಿದೆ.

ಮಹಾರಾಷ್ಟ್ರದ ನಾಸಿಕ್ ನಲ್ಲಿ ಈ ಘಟನೆ ನಡೆದಿದೆ. ಅರಣ್ಯಾಧಿಕಾರಿಗಳು ಆಗಮಿಸಿ ತೆರೆದ ಬಾವಿಗೆ ಬಿದ್ದಿದ್ದ ಚಿರತೆ ಹಾಗೂ ಬೆಕ್ಕನ್ನು ಪ್ರತ್ಯೇಕ ಬೋನ್ ಬಳಸಿ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಸಾಕಷ್ಟು ವೀಕ್ಷಣೆಯನ್ನೂ ಈ ವಿಡಿಯೋ ಗಳಿಸಿದೆ. ಒಂದೇ ಬಾವಿಯಲ್ಲಿ ಇದ್ದರೂ ಬೆಕ್ಕಿಗೆ ತೊಂದರೆ ಕೊಡದ ಚಿರತೆ ಬಗ್ಗೆ ಬಹುತೇಕ ನೆಟ್ಟಿಗರು ಅಚ್ಚರಿ, ಖುಷಿ ವ್ಯಕ್ತಪಡಿಸಿದ್ದಾರೆ.

suddiyaana