ವಿಶ್ವದ ದುಬಾರಿ ಮಾವಿನ ತಳಿ ಭಾರತದಲ್ಲೂ ಬೆಳೆಸಲು ಸಿದ್ಧತೆ – 1 ಕೆಜಿ ಹಣ್ಣಿನ ಬೆಲೆ ಎಷ್ಟು ಗೊತ್ತಾ?
ಭಾರತದಲ್ಲಿ ಮಾವಿನ ತಳಿಗಳಿಗೇನು ಕೊರತೆ ಇಲ್ಲ. ಕೆಲವೊಂದು ಮಾವುಗಳು ವರ್ಷ ಪೂರ್ತಿ ಫಸಲು ಕೊಟ್ಟರೆ, ಇನ್ನೂ ಕೆಲ ಮಾವಿನ ಹಣ್ಣುಗಳು ಸೀಸನ್ ನಲ್ಲಿ ಮಾತ್ರ ಸಿಗುತ್ತವೆ. ಕೃಷಿಕರಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹಿಸಲು ಕೃಷಿ ಇಲಾಖೆ ಕೂಡ ಹೊಸ ಹೊಸ ಮಾವಿನ ತಳಿಗಳನ್ನು ಪರಿಚಯಿಸಿ ರೈತರಿಗೆ ಬೆಳೆಸುವಂತೆ ಪ್ರೋತ್ಸಾಹಿಸುತ್ತಿದೆ. ಇದೀಗ ವಿಶ್ವದಲ್ಲೇ ಅತ್ಯಂತ ದುಬಾರಿ ಎಂದು ಖ್ಯಾತಿ ಪಡೆದಿರುವ ಮಿಯಾಝಾಕಿ ಮಾವಿನ ತಳಿಯನ್ನು ಭಾರತದಲ್ಲೂ ಬೆಳೆಸಲು ಸಿದ್ಧತೆ ನಡೆಸಲಾಗಿದೆ.
ಇದನ್ನೂ ಓದಿ: ಐಸಿಸಿ ಟೆಸ್ಟ್ ರ್ಯಾಂಕಿಂಗ್ ನ 6 ವಿಭಾಗಗಳಲ್ಲಿ ಭಾರತ ನಂ.1 – ಏಷ್ಯಾದ ಮೊದಲ ಕ್ರಿಕೆಟ್ ಟೀಂ ಸಾಧನೆ..!
ಜಪಾನೀಸ್ ಮಿಯಾಝಾಕಿ ಎಂದು ಕರೆಯಲ್ಪಡುವ ಈ ಮಾವಿನ ಹಣ್ಣಿನ ಬೆಲೆ ಕೆಜಿಗೆ ಲಕ್ಷಾಂತರ ರೂಪಾಯಿ ಇದೆ. ಈ ಅಪರೂಪದ ಮಾವಿನ ಹಣ್ಣನ್ನು ಸೂರ್ಯನ ಮೊಟ್ಟೆ ಎಂದೂ ಕರೆಯಲಾಗುತ್ತದೆ. ಇದು ಆಗ್ನೇಯ ಏಷ್ಯಾದಲ್ಲಿ ಬೆಳೆಯುವ ಹಳದಿ ಪೆಲಿಕಾನ್ ಮಾವಿನಂತಿರುವ ಇರ್ವಿನ್ ಮಾವಿನ ಒಂದು ವಿಧವಾಗಿದೆ. ಮೂಲತಃ ಜಪಾನ್ ನ ಮಿಜಾಝಾಕಿ ನಗರದಲ್ಲಿ ಈ ಮಾವು ಬೆಳೆಯುತ್ತಿದೆ. ಇದೀಗ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ “ಕಿಂಗ್ ಆಫ್ ಮ್ಯಾಂಗೋ” ಮಿಯಾಝಾಕಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಸಲು ಕೃಷಿ ಇಲಾಖೆ ನಿರ್ಧರಿಸಿದ್ದು, ಇನ್ಮುಂದೆ ಭಾರತದಲ್ಲಿಯೇ ಮಿಯಾಝಾಕಿ ಲಭ್ಯವಾಗುವ ಕಾಲ ಸನ್ನಿಹಿತವಾಗಿದೆ ಎಂದು ವರದಿ ತಿಳಿಸಿದೆ.
ಜಪಾನ್ ನ ಮಿಯಾಝಾಕಿ ನಗರದಿಂದ ಮಾವಿನ ಸಸಿಗಳನ್ನು ತಂದ ನಂತರ ಬಂಗಾಳದ ಇಂಗ್ಲಿಷ್ ಬಜಾರ್ ಬ್ಲಾಕ್ ನಲ್ಲಿ ಮಿಯಾಝಾಕಿ ಮಾವು ಬೆಳೆಸಲು ಸರ್ಕಾರ ಯೋಜನೆ ರೂಪಿಸಿದೆ.
ಬೆಲೆ ಬಾಳುವ ಮಿಯಾಝಾಕಿ ಸಸಿಗಳು ಈ ವಾರದೊಳಗೆ ಮಾಲ್ಡಾ ತಲುಪುವ ಸಾಧ್ಯತೆ ಇದೆ. ಸಾಟಿಯಿಲ್ಲದ ರುಚಿ ಮತ್ತು ವಿಶಿಷ್ಟ ಪರಿಮಳದ ಮೂಲಕ ವಿಶ್ವಾದ್ಯಂತ ಹೆಸರುವಾಸಿಯಾಗಿರುವ ಮಿಯಾಝಾಕಿ ಮಾವಿಗೆ ಭಾರತದಲ್ಲಿ ನೆಲೆಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಜಪಾನಿನ ಮಿಯಾಝಾಕಿ ಮಾವು ಈಗ ಮಾಲ್ಡಾದಲ್ಲಿ ಬೆಳೆಯುವ ಇತರ ನೂರು ಮಾವಿನ ತಳಿಗಳ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ ಜಬಲಪುರದ ದಂಪತಿ ಈ ಮಾವಿನ ಗಿಡ ಬೆಳೆಸಿ ಸುದ್ದಿಯಾಗಿದ್ದರು. ಮಾವಿನ ಹಣ್ಣು ಫಸಲು ಬಿಡುವ ವೇಳೆ ಮಾವಿನ ಹಣ್ಣನ್ನು ಕಾಪಾಡಲು 6 ನಾಯಿಗಳು ಹಾಗೂ 6 ಜನ ಕಾವಲುಗಾರರನ್ನು ನೇಮಿಸಲಾಗಿತ್ತು. ಬಳಿಕ ಆ ದಂಪತಿ ಬೆಳೆದ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 2.70 ಲಕ್ಷ ರೂಪಾಯಿಯಂತೆ ಮಾರಾಟ ಮಾಡಿದ್ದರು.