ಸಾವನ್ನಪ್ಪಿದವರಿಗೆ ಮರುಜೀವ ನೀಡಲು ದೇಹಗಳ ಸಂರಕ್ಷಣೆ – ವಿಜ್ಞಾನಲೋಕದಲ್ಲಿ ನಡೆಯುತ್ತಾ ವಿಸ್ಮಯ..!?
ಬಡವನೇ ಇರಲಿ ಬಲ್ಲಿದನೇ ಆಗಲಿ ಸಾವಿನ ಮುಂದೆ ಎಲ್ಲರೂ ಒಂದೇ. ಒಮ್ಮೆ ಜೀವ ಹೋಯ್ತು ಅಂದ್ರೆ ಕೋಟಿ ಕೊಟ್ಟರೂ ಬದುಕಿಸೋಕೇ ಆಗಲ್ಲ. ಇದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಆದರೆ ಮೃತದೇಹವನ್ನ ಸಂರಕ್ಷಿಸಿಟ್ಟು ಅದಕ್ಕೆ ಮರುಜೀವ ಕೊಡೋಕೆ ಆಗುತ್ತಾ. ಇಂಥಾದ್ದೊಂದು ಪ್ರಶ್ನೆ ಮೂಡಲು ಕಾರಣವೂ ಇದೆ. ಯಾಕಂದ್ರೆ ಈಗಾಗ್ಲೇ ದೇಹಗಳನ್ನ ಸಂರಕ್ಷಿಸಿ ಇಡಲಾಗುತ್ತಿದೆ.
ಹೌದು. ಒಂದು ದೇಹದ ಕನಿಷ್ಠ ಬೆಲೆ 200,000 ಡಾಲರ್ ಮತ್ತು ಮೆದುಳಿಗೆ 80,000 ಡಾಲರ್. ಈಗಾಗಲೇ 500 ಜನರು ತಮ್ಮ ದೇಹವನ್ನ ಕ್ರಯೋ-ಸಂರಕ್ಷಣೆಗೆ ನೋಂದಣಿ ಮಾಡಿದ್ದಾರೆ. ಅಂದ ಹಾಗೇ ಹೀಗೊಂದು ಆಫರ್ ಕೊಡ್ತಿರೋದು ವಿಶ್ವದ ದೊಡ್ಡಣ್ಣ ಅಮೆರಿಕದ ಆಲ್ಕೋರ್ ಲೈಫ್ ಎಕ್ಸ್ ಟೆನ್ಷನ್ ಫೌಂಡೇಶನ್(Alcor Life Extension Foundation facility).
ಇದನ್ನೂ ಓದಿ : ಜೀವಿತಾವಧಿಯಲ್ಲಿ 1 ಲಕ್ಷ ಲೀ. ಹಾಲು ಕೊಡುತ್ತವೆ ಈ ಹಸುಗಳು – ‘Super Cow’ಗಳ ಸ್ಪೆಷಾಲಿಟಿ ಏನು..!?
ವೈಜ್ಞಾನಿಕ ಕಾದಂಬರಿಗಳಲ್ಲಿ ಭವಿಷ್ಯದಲ್ಲಿ ದೇಹವನ್ನ ಪುನರುಜ್ಜೀವನಗೊಳಿಸುವುದಕ್ಕೆ ಕ್ರಯೋ-ಸಂರಕ್ಷಣೆಗೆ (Cryo preservation ) ಇಡುವ ವಿಚಾರವನ್ನ ಓದಿರುತ್ತೇವೆ. ಅಂದರೆ ಸತ್ತ ವ್ಯಕ್ತಿಗೆ ಮತ್ತೆ ಮರುಜೀವ ಕೊಡುವ ವಿಧಾನವಾಗಿದೆ. ಆದರೆ ನಿಜ ಜೀವನದಲ್ಲೂ ಇಂತಹದೊಂದು ಸರ್ವಿಸ್ ನ ಆಫರ್ ಕೊಡ್ತಿರೋದು ಅಮೆರಿಕದ ಆಲ್ಕೋರ್ ಲೈಫ್ ಎಕ್ಸ್ ಟೆನ್ಶನ್ ಫೌಂಡೇಶನ್(Alcor Life Extension Foundation facility)ಕಂಪನಿ. ಈಗಾಗಲೇ 199 ಮನುಷ್ಯರು ಮತ್ತೂ 100 ಸಾಕು ಪ್ರಾಣಿಗಳನ್ನ ಕ್ರಯೋ-ಸಂರಕ್ಷಣೆಗೆ ಇಟ್ಟಿದ್ದಾರೆ. ಅಂದಹಾಗೆ ಆಲ್ಕೋರ್ ಫೌಂಡೇಶನ್ ಇವರನ್ನ ರೋಗಿಗಳೆಂದು ಪರಿಗಣಿಸಿದ್ದು ಇವರು ಕ್ಯಾನ್ಸರ್ ಅಥವಾ ಇನ್ನಿತರ ತೀವ್ರವಾದ ಕಾಯಿಲೆಗಳಿಂದ ಗುಣಮುಖರಾಗಲು ಸಾಧ್ಯವಾಗದೆ ಮರಣವನ್ನಪ್ಪಿದವರು. ವಿಜ್ಞಾನವೂ ಮುಂದೆ ತುಂಬಾ ಮುಂದುವರಿದು ಭವಿಷ್ಯದಲ್ಲಿ ಪುನರುಜ್ಜೀವನವಾಗಬೇಕೆನಿಸಿದವರನ್ನ ಕ್ರಯೋ-ಸಂರಕ್ಷಣೆಗೆ ಒಳಪಡಿಸಿದ್ದಾರೆ.
ಅಷ್ಟಕ್ಕೂ ಕ್ರಯೋ-ಸಂರಕ್ಷಣಾ ಪ್ರಕ್ರಿಯೆಯು ಯಾವುದೇ ಜೀವಿಗಳು ಅಥವಾ ಹಾನಿಗೊಳಗಾದ ಜೀವಿಗಳ ಅಂಗಾಂಗಗಳನ್ನ ಅತ್ಯಂತ ಕಡಿಮೆ ತಾಪಮಾನಕ್ಕೆ ತಂಪಾಗಿಸುವ ಮೂಲಕ ಸಂರಕ್ಷಿಸುವುದು. ದ್ರವ ಸಾರಜನಕವನ್ನು ಬಳಸಿಕೊಂಡು ಮೈನಸ್ 196 C (-321 F) ಕಡಿಮೆ ತಾಪಮಾನದಲ್ಲಿ ಸಂರಕ್ಷಿಸುವುದು. ಅಂಗಾಂಗಗಳಿಗೆ ಹಾನಿ ಉಂಟು ಮಾಡುವ ಯಾವುದೇ ರಾಸಾಯನಿಕ ಚಟುವಟಿಕೆಯನ್ನ ಕಡಿಮೆ ತಾಪಮಾನದಲ್ಲಿ ಪರಿಣಾಮಕಾರಿಯಾಗಿ ನಿಲ್ಲಿಸಲಾಗುತ್ತದೆ.
ಈ ಅಲ್ಕೋರ್ ಫೆಸಿಲಿಟಿಯಲ್ಲಿ ಭವಿಷ್ಯದಲ್ಲಿ ಮತ್ತೆ ಮರು ಹುಟ್ಟು ಬೇಕಾದವರನ್ನ ಒಂದು ದ್ರವ ಸಾರಜನಕವನ್ನ ಹೊಂದಿರುವಂತಹ ಸ್ಟೈನ್ಲೆಸ್ ಸ್ಟೀಲ್ (stainless steel )ನ ಟ್ಯಾಂಕ್ ನಲ್ಲಿ ಮೈನಸ್ 196 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಡುತ್ತಾರೆ. Matheryn Naovaratpong ಅನ್ನೋ ಥಾಯ್ ಹುಡುಗಿ 2015 ರಲ್ಲಿ ಕ್ರಯೋ ಸಂರಕ್ಷಣೆಗೆ ಇಟ್ಟ 2 ವರ್ಷದ ಅತೀ ಕಿರಿಯಳಾಗಿದ್ದಾಳೆ. ಈಕೆಯ ಪೋಷಕರು ವೈದ್ಯರಾಗಿದ್ದು ಆಕೆಗೆ ಹಲವು ಬಾರಿ ಮೆದುಳಿನ ಸರ್ಜರಿಯಾಗಿದ್ದು ಮುಂದೆ ಏನೂ ಮಾಡಲು ಸಾಧ್ಯವಿಲ್ಲವೆಂದು ಗೊತ್ತಾದಾಗ ಮಗುವಿನ ಪೋಷಕರು ಆಲ್ಕೋರ್ ಫೌಂಡೇಶನ್ ಸಂಪರ್ಕಿಸುತ್ತಾರೆ. ಆದರೆ ಭವಿಷ್ಯದ ಪುನರುಜ್ಜೀವನದ ಭರವಸೆಯೊಂದಿಗೆ ಹೆಪ್ಪುಗಟ್ಟಿದ ಮೊದಲ ಮಾನವ ದೇಹವೆಂದರೆ ಜೇಮ್ಸ್ ಬೆಡ್‌ಫೋರ್ಡ್. ಈತ ಕ್ಯಾನ್ಸರ್ನಿಂದ ಮೃತಪಟ್ಟಿರುತ್ತಾನೆ. ಬೆಡ್‌ಫೋರ್ಡ್ (James Hiram Bedford) 1974 ರಲ್ಲಿ ಹೆಪ್ಪುಗಟ್ಟಿದ ಅಂದರೇ ಕ್ರಯೋ ಸಂರಕ್ಷಣೆಗೆ ಒಳಪಟ್ಟ ಆಲ್ಕೋರ್ ಫೌಂಡೇಶನ್ ಮೊದಲ ಕ್ರಯೋನಿಕ್ಸ್ ರೋಗಿಯಾಗಿದ್ದಾನೆ.
ಆಲ್ಕೋರ್ ಫೌಂಡೇಶನ್ 1972 ರಲ್ಲಿ ಲಿಂಡಾ (Linda )ಮತ್ತು ಫ್ರೆಡ್ ಚಾಂಬೆಲೆನ್ (Fred Chamberlain) ಅನ್ನುವವರಿಂದ ಜೀವನದಲ್ಲಿ ಮತ್ತೊಮ್ಮೆ ಬದುಕುವ ಅವಕಾಶವನ್ನ ನೀಡುವ ಸಲುವಾಗಿ ಸ್ಥಾಪಿತವಾಗಿರುತ್ತದೆ. ಈ ಕ್ರಯೋ ಸಂರಕ್ಷಣೆ ಪ್ರಕ್ರಿಯೆಯು ವ್ಯಕ್ತಿಯು ಸಾವನ್ನಪ್ಪಿದ್ದನ್ನ ಕಾನೂನು ಬದ್ಧವಾಗಿ ಘೋಷಿಸಿದ ನಂತರ ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ದೇಹವನ್ನ ವಿಟ್ರಿಫಿಕೇಷನ್ ಗೆ ಒಳಪಡಿಸುತ್ತಾರೆ. ಸಾಮಾನ್ಯವಾಗಿ ಕ್ರಯೋಪ್ರೆಸರ್ವೇಶನ್ ಸಮಯದಲ್ಲಿ ಘನೀಕರಿಸುವ ಹಂತದಲ್ಲಿ ಜೀವಕೋಶಗಳಿಗೆ ಹಾನಿಯುಂಟಾಗೋದು ಸಂಭವಿಸುತ್ತವೆ. ಅತ್ಯಂತ ಕಡಿಮೆ ತಾಪಮಾನದಲ್ಲಿ ಜೀವಿಗಳನ್ನ ತಂಪಾಗಿಸುವಾಗ ಅಂಗಾಂಗಗಳಿಂದ ನೀರು ಹೊರ ಬರುತ್ತದೆ. ಇದು ಹೊರಗಡೆ ಐಸ್ ರೂಪದಲ್ಲಿ ರಚನೆಯಾಗುತ್ತದೆ. ವಿಟ್ರಿಫಿಕೇಷನ್ನಲ್ಲಿ ರೋಗಿಯ ದೇಹವನ್ನ ಘನೀಕರಣದ ಸಮಯದಲ್ಲಿ ಐಸ್ ಸ್ಫಟಿಕಗಳ ರಚನೆಯಿಂದ ಉಂಟಾಗುವ ಹೆಚ್ಚುವರಿ ಹಾನಿಯಿಂದ ಕಾಪಾಡಿಕೊಳ್ಳಲು ಮನುಷ್ಯನ ದೇಹದಿಂದ ರಕ್ತ ಮತ್ತು ಇನ್ನಿತರ ದ್ರವಗಳನ್ನ ತೆಗೆದು ಸೂಕ್ತ ರಾಸಾಯನಿಕದಿಂದ ಬದಲಾಯಿಸುವುದಾಗಿದೆ.
ಆದರೆ ಈ ತಂತ್ರಜ್ಞಾನಕ್ಕೆ ನೈತಿಕ ಮೌಲ್ಯಗಳ ಚರ್ಚೆ ಎದುರಾಗಿದೆಯಂತೆ. ಸತ್ತ ಮನುಷ್ಯನನ್ನ ಮತ್ತೊಮ್ಮೆ ಬದುಕಿಸೋದು ಕೇವಲ ಕಾದಂಬರಿಗಳಿಗೆ ಮಾತ್ರ ಸೂಕ್ತ. ನಿಜ ಜೀವನದಲ್ಲಿ ಇದು ಅಪಾಯ ತಂದೊಡ್ಡಬಹುದು ಅನ್ನೋದು ಕೆಲವರ ಅಭಿಪ್ರಾಯವಾದರೆ ಕ್ರಯೋ ಸಂರಕ್ಷಣೆಗೆ ಒಳಪಟ್ಟ ವ್ಯಕ್ತಿ ಎಷ್ಟೋ ದಶಕಗಳ ನಂತರ ಎಚ್ಚರವಾದಾಗ ಆತ ಅಥವಾ ಆಕೆಯ ವಯಸ್ಸು ಬದಲಾಗುವುದಿಲ್ಲ. ಆದರೆ ಆತನ ಸುತ್ತ ಮುತ್ತಲಿನವರಲ್ಲಿ ಬಹಳಷ್ಟು ಬದಲಾವಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವ್ಯಕ್ತಿ ಇತರರಿಗೆ ಅನ್ಯಗ್ರಹ ಜೀವಿಯಂತೆ ಕಾಣಬಹುದು ಅಂತಾ ಇನ್ನೂ ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.