ಹೆಲ್ಮೆಟ್ ಧರಿಸೋ ಮುನ್ನ ಎಚ್ಚರ – ವೈರಲ್ ಆದ ವಿಡಿಯೋ ನೋಡಿದ್ರೆ ಬೆಚ್ಚಿಬೀಳೋದು ಪಕ್ಕಾ!
ನಮ್ಮ ದೈನಂದಿನ ಕಾರ್ಯಚಟುವಟಿಕೆಯಲ್ಲಿ ನಾವು ಸಾಕಷ್ಟು ವಿಷಯಗಳ ಬಗ್ಗೆ ಅಷ್ಟಾಗಿ ಗಮನ ಹರಿಸೋದಿಲ್ಲ. ಎಲ್ಲಿಗಾದರೂ ಹೋಗಿ ಬಂದಾಗ ಶೂ, ಹೆಲ್ಮೆಟ್ ಅನ್ನು ಮನೆ ಹೊರಗೆ ಬಿಟ್ಟು ಹೋಗುತ್ತೇವೆ. ಆಚೆ ಹೋಗುವಾಗ ಕೂಡ ಶೂ ಅಥವಾ ಹೆಲ್ಮೆಟ್ ನ ಒಳಭಾಗವನ್ನು ಒಂದು ಕ್ಷಣವೂ ಕಣ್ಣಾಯಿಸುವುದಿಲ್ಲ. ಹೀಗೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದು ವೈರಲ್ ಆದ ವಿಡಿಯೋದಿಂದ ಗೊತ್ತಾಗುತ್ತದೆ. ಇದರಲ್ಲಿರುವ ದೃಶ್ಯವನ್ನು ನೋಡುವಾಗ ಎದೆ ಧಗ್ ಅನ್ನೋದು ಗ್ಯಾರಂಟಿ.
ಮನೆ ಸಂದಿ ಒಳಗೆ, ಕಾರಿನೊಳಗೆ, ಸ್ಕೂಟರ್ನೊಳಗೆ ಹಾವು ಅಡಗಿ ಕುಳಿತುಕೊಳ್ಳುವುದು ಹೊಸದೇನೂ ಅಲ್ಲ. ಸಾಕಷ್ಟು ಸಲ ಇಂತಹ ಘಟನೆಗಳು ನಡೆದಿವೆ. ಹಾವನ್ನು ರಕ್ಷಿಸುವ ಅನೇಕ ವಿಡಿಯೋಗಳೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಇನ್ನೊಂದು ವಿಡಿಯೋ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಇದು ಹೆಲ್ಮೆಟ್ನೊಳಗೆ ಹಾವೊಂದು ಅಡಗಿ ಕುಳಿತಿರುವ ಭಯಾನಕ ದೃಶ್ಯ…!
ಇದನ್ನೂ ಓದಿ: ಆನೆ ಮುಂದೆ ಜಾಣತನ ಮೆರೆಯಲು ಹೋದ ಚಾಲಕ – ಪಾಪ ಆತನ ಸ್ಥಿತಿ ಏನಾಯ್ತು ನೋಡಿ?
aahanslittleworld ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೆಲ್ಮೆಟ್ ನ ಒಳಗೆ ಸೇರಿಕೊಂಡಿರುವ ಹಾವನ್ನು ರಕ್ಷಿಸುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬರು ಹೆಲ್ಮೆಟ್ನೊಳಗೆ ಇಕ್ಕಳವನ್ನು ಹಾಕಿ ಅದರ ಸ್ಪಾಂಜ್ ಸರಿಸುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಬಹಳ ಪ್ರಯತ್ನದ ನಂತರ ಹೆಲ್ಮೆಟ್ ಒಳಗಿನಿಂದ ಸಣ್ಣ ಹಾವೊಂದನ್ನು ಹೊರತೆಗೆಯುತ್ತಾರೆ. ಈ ದೃಶ್ಯವನ್ನು ನೋಡುವಾಗಲೇ ಮೈಜುಂ ಎನ್ನುತ್ತದೆ.
ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ಕಂಡ ನೆಟ್ಟಿಗರು ಭಯಭೀತರಾಗಿದ್ದಾರೆ. ಕೆಲವರು ಇದು ವಿಷಕಾರಿ ಹಾವು ಎಂದೂ ಹೇಳಿದ್ದಾರೆ. ಜತೆಗೆ, ಇನ್ನೊಂದಷ್ಟು ಮಂದಿ ಅದೃಷ್ಟವಶಾತ್ ಹೆಲ್ಮೆಟ್ ಧರಿಸುವ ಮೊದಲೇ ಹಾವನ್ನು ನೋಡಿದ್ದು ಒಳ್ಳೆದಾಯ್ತು. ಇಲ್ಲದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಯಾವಾಗಲೂ ಹೆಲ್ಮೆಟ್ ಧರಿಸುವ ಮುನ್ನ ಒಂದು ಕ್ಷಣ ಪರೀಕ್ಷಿಸಿ ಎಂದು ಕಿವಿಮಾತು ಹೇಳಿದ್ದಾರೆ. ಖಂಡಿತಾ ಇದು ನಿಜ. ಶೂ ಅಥವಾ ಮುಚ್ಚಿರುವ ಯಾವುದೇ ಪಾದರಕ್ಷೆ ಹಾಗೂ ಹೆಲ್ಮೆಟ್ ಧರಿಸುವ ಮುನ್ನ ಒಂದು ಕ್ಷಣ ಪರೀಕ್ಷಿಸುವುದು ಬಹಳ ಒಳ್ಳೆಯದು. ಇಲ್ಲವಾದರೆ ಅಪಾಯ ಸಂಭವಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂದು ಅನೇಕ ಜನ ಪ್ರತಿಕ್ರಿಯಿಸಿದ್ದಾರೆ.