ಮದ್ಯಪಾನ ಮಾಡಿ ಸಿಕ್ಕಿ ಬಿದ್ದ ಚಾಲಕರು – ಪೊಲೀಸ್ ಠಾಣೆಯಲ್ಲಿ 1,000 ಬಾರಿ ಬರೆಯುವ ಶಿಕ್ಷೆ!
ತಿರುವನಂತಪುರಂ: ಶಾಲೆಯಲ್ಲಿ ಟೀಚರ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೇ ಇದ್ದರೆ, ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದರೆ ಶಿಕ್ಷೆ ಕೊಡುತ್ತಾರೆ. ಈ ವೇಳೆ ತಪ್ಪು ಹೇಳಿದ ಪ್ರಶ್ನೆಗೆ ಸರಿ ಉತ್ತರವನ್ನು 100 ಬಾರಿ, 50 ಬಾರಿ ಬರೆಯಬೇಕು ಅಂತಾ ಶಿಕ್ಷೆ ನೀಡುವುದು ಸಾಮಾನ್ಯ. ಇದೀಗ ಕೇರಳ ಪೊಲೀಸರು ಇದೇ ಮಾದರಿಯನ್ನು ಅನುಸರಿಸಿದ್ದಾರೆ. ತಪ್ಪು ಮಾಡಿ ಸಿಕ್ಕಿ ಬಿದ್ದ ಆರೋಪಿಗಳಿಗೆ ಸಾವಿರ ಬಾರಿ ಬರೆಯುವ ಶಿಕ್ಷೆ ವಿಧಿಸಿದ್ದಾರಂತೆ.
ಹೌದು, ಕೇರಳದ ತೃಪ್ಪುಣಿತ್ರ ಬೆಟ್ಟದ ಅರಮನೆ ಠಾಣಾ ಇನ್‌ಸ್ಪೆಕ್ಟರ್ ವಿ.ಗೋಪಕುಮಾರ್ ಬೆಳಗಿನ ಜಾವ 5 ಗಂಟೆಯಿಂದ 9 ಗಂಟೆಯವರೆಗೆ ಬಸ್ ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಕೆಎಸ್‌ಆರ್‌ಟಿಸಿ ಬಸ್ ಚಾಲಕರು, 10 ಖಾಸಗಿ ಬಸ್ ಚಾಲಕರು ಮತ್ತು 4 ಶಾಲಾ ಬಸ್ ಚಾಲಕರು ಬೆಳ್ಳಂಬೆಳಗ್ಗೆಯೇ ಪಾನಮತ್ತರಾಗಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಕೂಡಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಅವರು ಮಾಡಿದ ತಪ್ಪಿಗೆ ವಿಚಿತ್ರ ಶಿಕ್ಷೆಯನ್ನು ನೀಡಿದ್ದಾರಂತೆ.
ಇದನ್ನೂ ಓದಿ: ಬ್ಯಾಂಕ್ ಲಾಕರ್ ನಲ್ಲಿದ್ದ ಹಣ ಗೆದ್ದಲುಪಾಲು – ಛಿದ್ರವಾದ ನೋಟು ನೋಡಿ ಮಹಿಳೆ ಕಂಗಾಲು..!
ಸಿಕ್ಕಿಬಿದ್ದ ಚಾಲಕರನ್ನು ಠಾಣೆಗೆ ಕರೆತಂದು “ನಾವು ಮತ್ತೆ ಮದ್ಯಪಾನ ಮಾಡಿ ವಾಹನ ಚಲಾಯಿಸುವುದಿಲ್ಲ” ಎಂದು 1,000 ಬಾರಿ ಬರೆಸಿದ್ದಾರಂತೆ. ಸಾವಿರ ಬಾರಿ ಬರೆದು ಮುಗಿಸಿದ ಚಾಲಕರಿಗೆ ಜಾಮೀನು ನೀಡಲಾಗಿದೆಯಂತೆ. ಚಾಲಕರು ಪೊಲೀಸ್ ಠಾಣೆಯಲ್ಲಿ ಕುಳಿತು ಸಾವಿರ ಬಾರಿ ಬರೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಾರ್ಯಾಚರಣೆ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸರು ಮತ್ತೊಂದು ಬಸ್ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ. ಶಾಲಾ ಬಸ್‌ನಲ್ಲಿದ್ದ ಮಕ್ಕಳನ್ನು ಪೊಲೀಸ್ ಇಲಾಖೆ ಮತ್ತೊಂದು ಬಸ್ ನಲ್ಲಿ ಶಾಲೆಗೆ ಕಳುಹಿಸಿದ್ದಾರಂತೆ.
ಘಟನೆಯ ಬಗ್ಗೆ ತಹಶೀಲ್ದಾರ್ ವಿ.ಗೋಪಕುಮಾರ್ ಮಾತನಾಡಿ, ಚಾಲನೆ ವೇಳೆ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಚಾಲಕರ ಪರವಾನಗಿ ರದ್ದುಪಡಿಸಲು ಇಲಾಖೆ ಮುಂದಾಗಿದೆ ಎಂದು ಹೇಳಿದ್ದಾರೆ.