ಏರ್ ಶೋ 2023ಗೆ ಕೌಂಟ್ಡೌನ್ – ಯಲಹಂಕ ವಾಯುನೆಲೆಯಲ್ಲಿ ಯುದ್ಧವಿಮಾನಗಳ ರಿಹರ್ಸಲ್!
ದೇಶ, ವಿದೇಶಗಳ ಯುದ್ಧವಿಮಾನಗಳ ಸಾಹಸ ಪ್ರದರ್ಶನ.. ಬಾನ ತುಂಬಾ ಲೋಹದ ಹಕ್ಕಿಗಳ ಚಿತ್ತಾರ. ಮೈನವಿರೇಳಿಸುವ ವೈಮಾನಿಕ ಪ್ರದರ್ಶನ ಕಣ್ತುಂಬಿಕೊಳ್ಳಲು ಜನರ ಕಾತರ. ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಸೋಮವಾರದಿಂದ ಏರ್ ಶೋ ಆರಂಭವಾಗಲಿದ್ದು, ಇವತ್ತು ಅಂತಿಮ ಹಂತದ ಕಸರತ್ತು ನಡೆಸಲಾಯ್ತು.
ಇದನ್ನೂ ಓದಿ : ಬೆಂಗಳೂರಲ್ಲಿ ಶಂಕಿತ ಉಗ್ರನ ಬಂಧನ – ಐಸಿಸ್ ಜತೆ ನಂಟು ಹೊಂದಿದ್ದವನ ಗುಟ್ಟು ಎಂಥಾದ್ದು..!?
ಬೆಂಗಳೂರಿನಲ್ಲಿ 14ನೇ ಆವೃತ್ತಿಯ ಏರ್ಶೋ-2023ಕ್ಕಾಗಿ ಜನ ಕಾತರದಿಂದ ಕಾಯ್ತಿದ್ದಾರೆ. ಯಲಹಂಕ ವಾಯುನೆಲೆಯಲ್ಲಿ ಇಂದು ಅಂತಿಮ ಹಂತದ ಅಭ್ಯಾಸ ನಡೆಯುತ್ತಿದ್ದು, ಫೆ.13ರಿಂದ ಫೆ.17ರ ವರೆಗೆ ಏರ್ ಶೋ ನಡೆಯಲಿದೆ. ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ ಉದ್ಘಾಟನೆ ಮಾಡಲು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ದೇಶದಲ್ಲಿ ಈವರೆಗೆ ನಡೆದ ವೈಮಾನಿಕ ಪ್ರದರ್ಶನಗಳಲ್ಲೇ ಈ ಬಾರಿಯ ಏರ್ ಶೋ ಅತ್ಯಂತ ದೊಡ್ಡ ಪ್ರದರ್ಶನ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಕೋವಿಡ್ ತೀವ್ರವಾಗಿದ್ದ ಕಾಲದಲ್ಲಿ 2021ರಲ್ಲಿ ನಡೆದಿದ್ದ ಪ್ರದರ್ಶನಕ್ಕೆ ವಿದೇಶಿ ಕಂಪನಿಗಳ ಪ್ರತಿಕ್ರಿಯೆ ನೀರಸವಾಗಿತ್ತು. ಆದರೆ, ಈ ಬಾರಿ ದೇಶೀಯ ಸಂಸ್ಥೆಗಳು, ವಿದೇಶಿ ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ಪ್ರದರ್ಶನದಲ್ಲಿ ಭಾಗಿಯಾಗುತ್ತಿವೆ. ಈವರೆಗಿನ ಪ್ರದರ್ಶನಗಳಲ್ಲಿ ಭಾರತವು ವಿದೇಶಿ ವಿಮಾನಗಳು, ವಿದೇಶಿ ತಂತ್ರಜ್ಞಾನಗಳನ್ನು ಎದುರು ನೋಡುತ್ತಿತ್ತು. ಈ ಪ್ರದರ್ಶನದಲ್ಲಿ ಭಾರತವು ತನ್ನದೇ ಸಾಧನೆಗಳನ್ನು ಜಗತ್ತಿನೆದುರು ಇಡಲು ಸಿದ್ಧವಾಗಿದೆ.
35 ಸಾವಿರ ಚದರ ಅಡಿ ಪ್ರದೇಶದಲ್ಲಿ ಈ ಬಾರಿಯ ಪ್ರದರ್ಶನ ನಡೆಯಲಿದೆ. 731 ಕಂಪನಿಗಳು ಮತ್ತು ಸಂಸ್ಥೆಗಳು ಪ್ರದರ್ಶನದಲ್ಲಿ ಭಾಗಿಯಾಗಲು ನೋಂದಣಿ ಮಾಡಿಕೊಂಡಿವೆ. ಈ ಪೈಕಿ ಭಾರತದ 633 ಕಂಪನಿಗಳು ಮತ್ತು ವಿದೇಶದ 98 ಕಂಪನಿಗಳು ಸೇರಿವೆ. ಎಚ್‌ಎಎಲ್, ಬಿಇಎಲ್, ಡಿಆರ್‌ಡಿಒ ಸಂಸ್ಥೆಗಳು ಪ್ರದರ್ಶನದ ಕೇಂದ್ರ ಬಿಂದುಗಳಾಗಿವೆ. ಈ ಮೂರೂ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಉಪಕರಣಗಳು, ವೈಮಾನಿಕ ತಂತ್ರಜ್ಞಾನಗಳು ಪ್ರದರ್ಶನದಲ್ಲಿ ಇರಲಿವೆ. ಭಾರತದ ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದಲ್ಲಿಖಾಸಗಿ ಕ್ಷೇತ್ರದ ಭಾಗವಹಿಸುವಿಕೆಯ ಪ್ರಮಾಣ ಮತ್ತು ಸ್ವರೂಪ ಎಂಥದ್ದು ಎಂಬುದನ್ನು ತೋರಿಸಲು ಪ್ರದರ್ಶನ ವೇದಿಕೆಯಾಗಲಿದೆ.