ODI ರಕ್ಷಕ ಸೂರ್ಯವಂಶಿ – ಬಾಸ್ ಬೇಬಿ ಮೆಚ್ಚಿದ NZ ಕೋಚ್
ಭಾರತ ಏಕದಿನ ತಂಡಕ್ಕೂ ಎಂಟ್ರಿ?

ವೈಭವ್ ಸೂರ್ಯವಂಶಿ.. ಎಲ್ಲೆಲ್ಲೂ ಈಗ ಸೂರ್ಯವಂಶಿಯದ್ದೇ ಸದ್ದು, ಸುದ್ದಿ.. ಮಾಜಿ ಕ್ರಿಕೆಟರ್ಸ್ ಬಾಯಲ್ಲೂ ಗುಣಗಾನ.. ಸೋಶಿಯಲ್ ಮೀಡಿಯಾದಲ್ಲೂ ಟ್ರೆಂಡ್.. ಅಭಿಮಾನಿಗಳಿಗೂ ಮಸ್ಟ್ ಖುಷಿ.. 15 ವರ್ಷದ ಬಾಸ್ ಬೇಬಿ ಅವತಾರಕ್ಕೆ ದಿಗ್ಗಜರೆಲ್ಲಾ ಫಿದಾ ಆಗಿದ್ದಾರೆ. ಅದ್ರಲ್ಲೂ ಸೂರ್ಯವಂಶಿಯನ್ನ ರಕ್ಷಕ ಅಂತಾ ಕರೆದಿದ್ದಾರೆ.
ಇದನ್ನೂ ಓದಿ : 53 ಬಾಲ್.. 28 ಸಿಕ್ಸರ್ಸ್.. 204 ರನ್ಸ್ – ಯುಎಇ ಬೌಲರ್ ಗಳನ್ನ ಚೆಂಡಾಡಿದ ಸೂರ್ಯವಂಶಿ!
ಯುಎಇ ವಿರುದ್ಧ 250 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಕೇವಲ 14.2 ಓವರ್ಗಳಲ್ಲೇ ಟಾರ್ಗೆಟ್ ಚೇಸ್ ಮಾಡಿ ಭರ್ಜರಿಯಾಗಿ ಗೆದ್ದು ಬೀಗಿತು. ಇದಕ್ಕೆ ಕಾರಣ ವೈಬವ್ ಸೂರ್ಯವಂಶಿ ವಿಸ್ಫೋಟಕ ಬ್ಯಾಟಿಂಗ್. ಕೇವಲ 16 ಬಾಲಲ್ಲಿ ಅರ್ಧಶತಕ, 28 ಬಾಲಲ್ಲಿ ಶತಕ, 40 ಬಾಲಲ್ಲಿ 150 ರನ್ಸ್ ಹಾಗೇ 52 ಎಸೆತಗಳಲ್ಲಿ 200+ ರನ್ಸ್ ಕಲೆ ಹಾಕೋ ಮೂಲಕ ವಿಶ್ವದಾಖಲೆಗಳನ್ನೆಲ್ಲಾ ಪುಡಿಗಟ್ಟಿದ್ರು. ಸೂರ್ಯವಂಶಿಯ ಈ ಸುನಾಮಿಗೆ ಕ್ರಿಕೆಟ್ ಜಗತ್ತೇ ಸಲಾಂ ಅಂದಿದೆ.
ಸೂರ್ಯವಂಶಿಯೇ ಈಗ ಎಲ್ಲರ ಫೇವರೆಟ್!
ಸೂರ್ಯವಂಶಿ ಆರ್ಭಟಕ್ಕೆ ಫಿದಾ ಆಗಿರುವ ಭಾರತ ಟಿ-20ಐ ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್, ವೈಭವ್ ಸೂರ್ಯವಂಶಿ, ನೀನು ಈಗ ನನ್ನ ಸ್ಫೂರ್ತಿಯಾಗಿದ್ದೀಯ. ಎಂಥಾ ಆಟಗಾರ! ನಿಜಕ್ಕೂ ವಿಶೇಷ ಪ್ರತಿಭೆ ಎಂದಿದ್ದಾರೆ. ರವಿಚಂದ್ರನ್ ಅಶ್ವಿನ್, ಇದು ನಂಬಲಸಾಧ್ಯ! ಒಂದೇ ದಿನ ಪ್ರಿಯಾಂಶ್ ಆರ್ಯ ಮತ್ತು ಈ ಅದ್ಭುತ ಹುಡುಗನ ಬ್ಯಾಟಿಂಗ್ ನೋಡಿದ್ದೇನೆ. ಕ್ರಿಕೆಟ್ನಲ್ಲಿ ಎಂತಹ ಪ್ರತಿಭೆ ಮತ್ತು ಸಾಮರ್ಥ್ಯ ಇದೆ ಎಂಬುದನ್ನು ನೆನಪಿಸುತ್ತದೆ ಎಂದಿದ್ದಾರೆ. 53 ಎಸೆತಗಳಲ್ಲಿ 204 ರನ್, 28 ಸಿಕ್ಸರ್! Sports Cricket ವಿಡಿಯೋ ಗೇಮ್ನಲ್ಲೂ ಇಂತಹ ಆಟ ನಂಬಲು ಸಾಧ್ಯವಾಗುತ್ತಿರಲಿಲ್ಲ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ರೆ ಕಷ್ಟಪಟ್ಟು ಕೆಲಸ ಮಾಡುತ್ತಾ ಈ ಪ್ರಯಾಣವನ್ನು ಆನಂದಿಸು. ನಿನ್ನ ಅತ್ಯುತ್ತಮ ಸಾಧನೆಗಳು ಇನ್ನೂ ಬರಬೇಕಿವೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಶಿಖರ್ ಧವವ್, ಇರ್ಫಾನ್ ಪಠಾಣ್, ಮೊಹಮ್ಮದ್ ಕೈಫ್, ದಿನೇಶ್ ಕಾರ್ತಿಕ್, ಏಂಜೆಲೋ ಮ್ಯಾಥ್ಯೂಸ್ ಹೀಗೆ ದೇಶ ವಿದೇಶಗಳ ಆಟಗಾರರೆಲ್ಲಾ ಬಾಯ್ತುಂಬಾ ಹೊಗಳಿದ್ದಾರೆ. ಅದ್ರಲ್ಲೂ ನ್ಯೂಜಿಲೆಂಡ್ ಬೌಲಿಂಗ್ ಕೋಚ್ ಜೇಕಬ್ ಓರಮ್ ಅವ್ರ ಹೇಳಿಕೆ ಹಲ್ ಚಲ್ ಎಬ್ಬಿಸಿದೆ.
ಏಕದಿನ ಮಾದರಿ ಕ್ರಿಕೆಟ್ ನ ರಕ್ಷಕ ಸೂರ್ಯವಂಶಿ!
ಟಿ20 ಕ್ರಿಕೆಟ್ ಅಬ್ಬರದ ನಡುವೆ ಏಕದಿನ ಕ್ರಿಕೆಟ್ ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆಯಾ ಎನ್ನುವಂಥ ಚರ್ಚೆ ನಡೀತಾನೇ ಇರುತ್ತೆ. 50 ಓವರ್ಗಳ ಪಂದ್ಯಗಳಿಗೆ ಭವಿಷ್ಯವಿಲ್ಲವೇ ಎನ್ನುವಂಥ ಪ್ರಶ್ನೆಗಳ ನಡುವೆ 15 ವರ್ಷದ ವೈಭವ್ ಸೂರ್ಯವಂಶಿ ಏಕದಿನ ಕ್ರಿಕೆಟ್ನ ಹೊಸ ಭರವಸೆಯಾಗಿ ಹೊರಹೊಮ್ಮಿದ್ದಾನೆ ಎಂದು ನ್ಯೂಜಿಲೆಂಡ್ ಬೌಲಿಂಗ್ ಕೋಚ್ ಜೇಕಬ್ ಓರಮ್ ಹೇಳಿದ್ದಾರೆ. ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿದ ವೈಭವ್ ಆಟಕ್ಕೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ವೈಭವ್ ವಿರುದ್ಧ ಬೌಲಿಂಗ್ ಮಾಡುವ ಪರಿಸ್ಥಿತಿ ಬರಬಾರದು ಎಂದು ನ್ಯೂಜಿಲೆಂಡ್ ಬೌಲಿಂಗ್ ಕೋಚ್ ಜೇಕಬ್ ಓರಮ್ ತಮಾಷೆಯಾಗಿ ಹೇಳಿದ್ದಾರೆ. ಹಾಗೇ ಜೇಕಬ್ ಸ್ಟೇಟ್ಮೆಂಟ್ ಹಿಂದೆ ಪ್ರಮುಖ ಪ್ರಶ್ನೆ ಇದೆ. 50 ಓವರ್ಗಳ ಪಂದ್ಯದಲ್ಲಿ ಬ್ಯಾಟರ್ಗಳು ನಿಧಾನವಾಗಿ ಇನ್ನಿಂಗ್ಸ್ ಕಟ್ಟುವ ಕಾಲ ಬದಲಾಗುತ್ತಿದೆಯಾ? ಪವರ್ಪ್ಲೇನಿಂದಲೇ ಆಕ್ರಮಣಕಾರಿ ಆಟಕ್ಕೆ ಆದ್ಯತೆ ಸಿಗುತ್ತಿದೆಯಾ? ವೈಭವ್ ಅವರ 204 ರನ್ಗಳ ಇನ್ನಿಂಗ್ಸ್ ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.
ಒಟ್ಟಿನಲ್ಲಿ 15ರ ಹರೆಯದಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ವೈಭವ್ ಸೂರ್ಯವಂಶಿ ಈಗ ಎದುರಾಳಿಗಳ ನಿದ್ದೆಗೆಡಿಸುವ ಬ್ಯಾಟರ್ ಆಗಿದ್ದಾರೆ. ಏಕದಿನ ಕ್ರಿಕೆಟ್ಗೆ ಹೊಸ ಆಕರ್ಷಣೆ ಬೇಕಿರುವ ಸಂದರ್ಭದಲ್ಲಿ ವೈಭವ್ ಎಲ್ಲರ ಗಮನ ಸೆಳೀತಿದ್ದಾರೆ. ಹಾಗಂತ ಒಂದು ಇನ್ನಿಂಗ್ಸ್ನಿಂದಲೇ ಏಕದಿನ ಕ್ರಿಕೆಟ್ನ ಭವಿಷ್ಯ ನಿರ್ಧಾರವಾಗುವುದಿಲ್ಲ. ವೈಭವ್ ಇದೇ ರೀತಿಯ ಪ್ರದರ್ಶನವನ್ನು ಬೇರೆ ಪಿಚ್ಗಳಲ್ಲಿ, ಬಲಿಷ್ಠ ಎದುರಾಳಿಗಳ ವಿರುದ್ಧ ಹಾಗೂ ವಿಭಿನ್ನ ಪರಿಸ್ಥಿತಿಗಳಲ್ಲಿ ತೋರಿಸಬೇಕಿದೆ ಅನ್ನೋ ಕಿವಿಮಾತೂ ಹೇಳಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತ ಏಕದಿನ ತಂಡಕ್ಕೂ ವೈಭವ್ ಕಾಲಿಡೋದು ಪಕ್ಕಾ ಆಗಿದೆ.

ನೋಡಿರಿ
