ಡ್ರಾ ಡ್ರಾಮಾ, ಗಂಭೀರ್-ಗಿಲ್ಗೆ ಕ್ಲಾಸ್ ಬ್ಯಾಟ್ ಟೆಸ್ಟ್, ICC ಟಫ್ ರೂಲ್ಸ್
ದೋಸ್ತಿ ಸಿರಾಜ್ಗೆ ಕೈ ಕೊಟ್ಟ ಕ್ಯಾಪ್ಟನ್

 ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು 

ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ವೇಗಿ ಬ್ಲೇರ್ ಟಿಕ್ನರ್ ಹ್ಯಾಮ್‌ಸ್ಟ್ರಿಂಗ್ ಗಾಯದಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಅಭ್ಯಾಸದ ವೇಳೆ ಬಲ ಕಾಲಿನ ಹ್ಯಾಮ್‌ಸ್ಟ್ರಿಂಗ್‌ಗೆ ಗಾಯವಾಗಿದ್ದು, ಅವರ ಬದಲಿಗೆ ಮ್ಯಾಟ್ ಫಿಶರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ನವೆಂಬರ್ 27ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿರುವ ಪಂದ್ಯಕ್ಕೂ ಮುನ್ನ ಕಿವೀಸ್ ತಂಡಕ್ಕೆ ಇದು ಹಿನ್ನಡೆಯಾಗಿದೆ.

 

ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಗೆಲ್ಲುವ ಅವಕಾಶವಿದ್ದರೂ 15 ಓವರ್‌ಗಳು ಬಾಕಿ ಇರುವಾಗಲೇ ನಾಯಕ ಗಿಲ್ ಪಂದ್ಯವನ್ನು ಡ್ರಾ ಮಾಡಿಕೊಂಡರು. ಗಿಲ್-ಗಂಭೀರ್ ಅವರ ಈ ನಿರ್ಧಾರದ ಬಗ್ಗೆ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಡಬ್ಲ್ಯುಟಿಸಿ ಫೈನಲ್ ಕನಸಿಗೆ ಹಿನ್ನಡೆಯಾಗಿದೆ. ಗೆಲ್ಲುವ ಮನಸ್ಸೇ ಇಲ್ಲದಂತೆ ಕೋಚ್ ಗಂಭೀರ್ ಮತ್ತು ನಾಯಕ ಗಿಲ್ ಬೇಕೆಂತಲೇ ಪಂದ್ಯವನ್ನು ಕೈಚೆಲ್ಲಿದರಾ ಎಂಬ ಪ್ರಶ್ನೆ ಎದ್ದಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ.

ವಿದೇಶಿ ಪಿಚ್‌ಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾದರೆ ತಂಡದಲ್ಲಿ ಒಬ್ಬ ಸ್ಪೆಷಲಿಸ್ಟ್​ ಸ್ಪಿನ್ನರ್ ಇರಲೇಬೇಕು ಎಂದು ಗಂಗೂಲಿ ಕಿವಿಮಾತು ಹೇಳಿದ್ದಾರೆ. “ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ವೈಟ್-ಬಾಲ್ ಹಾಗೂ ರೆಡ್-ಬಾಲ್ ಎರಡರಲ್ಲೂ ಅದ್ಭುತವಾಗಿ ಆಡಿದೆ. ಬ್ಯಾಟಿಂಗ್ ಕೂಡ ಸೂಪರ್ ಆಗಿದೆ. ಆದರೆ ಪಂದ್ಯ ಸಾಗಿದಂತೆ ಫ್ಲಾಟ್ ಆಗುವ ವಿದೇಶಿ ಪಿಚ್‌ಗಳಲ್ಲಿ ಗೆಲ್ಲಲು ತಂಡದಲ್ಲಿ ಒಬ್ಬ ತಜ್ಞ ಸ್ಪಿನ್ನರ್ ಇರುವುದು ಅತ್ಯಗತ್ಯ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್ ತಂಡದಿಂದ ಮೊಹಮ್ಮದ್ ಸಿರಾಜ್ ಅವರನ್ನು ಹೊರಗಿಟ್ಟಿದ್ದೇಕೆ? ಎಂಬ ಚರ್ಚೆಗೆ ನಾಯಕ ಶುಭಮನ್ ಗಿಲ್ ಕೊನೆಗೂ ಉತ್ತರ ನೀಡಿದ್ದಾರೆ. ಸಿರಾಜ್ ನನ್ನ ಗೆಳೆಯ, ಟೆಸ್ಟ್ ಪಂದ್ಯಕ್ಕೂ ಮೊದಲು ನಾನು ಅವರೊಂದಿಗೆ ಚರ್ಚಿಸಿದ್ದೇನೆ. ಅಲ್ಲದೇ ಈ ನಿರ್ಧಾರವನ್ನು ಏಕೆ ತೆಗೆದುಕೊಂಡೆ ಎಂದು ಅವರಿಗೆ ವಿವರಿಸಿದ್ದೇನೆ. ನಾವು ಆಟಗಾರರನ್ನು ಅವರ ಪ್ರಸ್ತುತ ಫಾರ್ಮ್ ಆಧರಿಸಿ ಆಯ್ಕೆ ಮಾಡಿದ್ದೇವೆ.  ಹಾಗೇ  ಮೊಹಮ್ಮದ್ ಸಿರಾಜ್ ಅವರನ್ನು ಅವರ ಪ್ರಸ್ತುತ ಫಾರ್ಮ್ ಕಾರಣದಿಂದಾಗಿ ತಂಡದಿಂದ ಕೈಬಿಡಲಾಗಿದೆ ಎನ್ನುವ ಸಂದೇಶವನ್ನ ಗಿಲ್ ರವಾನಿಸಿದ್ದಾರೆ.

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯಗಳ ಸರಣಿ – 14 ತಿಂಗಳಲ್ಲಿ 14 ರೋಚಕ ಮ್ಯಾಚ್

ಆರು ವರ್ಷಗಳ ಹಿಂದೆ ಐಸಿಸಿ ಜಾರಿಗೆ ತಂದಿದ್ದ ಒಂದು ನಿಯಮದ ಬಗ್ಗೆ ಗಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಐಸಿಸಿ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೆಂಡಿಗೆ ಲಾಲಾರಸ ಹಚ್ಚುವುದನ್ನು ನಿಷೇಧಿಸಿತ್ತು. ಆರಂಭದಲ್ಲಿ ತಾತ್ಕಾಲಿಕವಾಗಿ ಜಾರಿಗೆ ತಂದಿದ್ದ ಈ ನಿಯಮವನ್ನು 2022ರ ಸೆಪ್ಟೆಂಬರ್‌ನಲ್ಲಿ ಐಸಿಸಿ ಶಾಶ್ವತಗೊಳಿಸಿತು. ಆದ್ರೆ ಈಗ ಆ ನಿಯಮ ನಿಷೇಧ ಮಾಡಬೇಕು ಎಂದು ಗಿಲ್ ಹೇಳಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳ ಬ್ಯಾಟ್‌ಗಳಿಗೆ ಇನ್ಮುಂದೆ ಕಡ್ಡಾಯ ಪರೀಕ್ಷೆ ಜಾರಿಯಾಗಲಿದೆ. ಐಸಿಸಿ ಹೊಸ ನಿಯಮದ ಪ್ರಕಾರ, ಬ್ಯಾಟ್‌ಗಳ ಗಾತ್ರವು ನಿಗದಿತ ಅಳತೆ ಮೀರಬಾರದು. ಸೌರವ್ ಗಂಗೂಲಿ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಐಪಿಎಲ್ ಮಾದರಿಯಲ್ಲಿ, ಪಂದ್ಯಕ್ಕೂ ಮುನ್ನ ಅಂಪೈರ್‌ಗಳು ಬ್ಯಾಟ್‌ಗಳನ್ನು ಪರಿಶೀಲಿಸಲಿದ್ದಾರೆ. ಇದು ಕ್ರಿಕೆಟ್‌ನಲ್ಲಿ ಬ್ಯಾಟ್-ಬಾಲ್ ಸಮತೋಲನ ಕಾಯ್ದುಕೊಳ್ಳಲು ನೆರವಾಗಲಿದೆ.

ಈ ಸೀಸನ್‌ಗೂ RCB ನನ್ನನ್ನು ಉಳಿಸಿಕೊಳ್ಳುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಯಶ್‌ ದಯಾಳ್ ಹೇಳಿದ್ದಾರೆ. ಅವರು ನನ್ನನ್ನು ಉಳಿಸಿಕೊಂಡು, ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಹಾಗಾಗಿ, ಅವರಿಗಾಗಿ ಉತ್ತಮ ಪ್ರದರ್ಶನ ನೀಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ನನ್ನಲ್ಲಿರುವ ಅನುಭವವನ್ನು ಬಳಸಿಕೊಂಡು, ಈ ಸೀಸನ್‌ನಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಶೇಕಡಾ 100ರಷ್ಟು ಪ್ರಯತ್ನಿಸುತ್ತೇನೆ ಎಂದು ಯಶ್ ದಯಾಳ್ ಹೇಳಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ‘ಗ್ರೂಪ್-ಬಿ’ ಪಂದ್ಯದಲ್ಲಿ, ದೆಹಲಿ ತಂಡದ ನಾಯಕ ಪ್ರಿಯಾಂಶ್ ಆರ್ಯ ತಮಿಳುನಾಡು ವಿರುದ್ಧ ಕೇವಲ 68 ಎಸೆತಗಳಲ್ಲಿ 181 ರನ್ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಟೂರ್ನಿಯ ಇತಿಹಾಸದಲ್ಲೇ ಇನ್ನಿಂಗ್ಸ್ ಒಂದರಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವನ್ನು ದಾಖಲಿಸುವುದರ ಜೊತೆಗೆ, ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆರ್ಯ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಕ್ರಿಕೆಟ್ ಅಂಗಳದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈಗ ಉದ್ಯಮ ಕ್ಷೇತ್ರದಲ್ಲಿಯೂ ಹೊಸ ಇನ್ನಿಂಗ್ಸ್ ಆಡುತ್ತಿದ್ದಾರೆ. ಕ್ರಿಕೆಟ್ ಮೇಲಿನ ತಮ್ಮ ಅನುಭವ ಮತ್ತು ಕ್ರೀಡೆಯ ಬಗ್ಗೆ ಇರುವ ಆಸಕ್ತಿಯನ್ನು ಉದ್ಯಮವಾಗಿ ರೂಪಿಸಿರುವ ಸಚಿನ್, ‘Ten x You’ ಎಂಬ ಕ್ರೀಡಾ ಉಡುಪು ಮತ್ತು ಪಾದರಕ್ಷೆಗಳ ಬ್ರ್ಯಾಂಡ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ತಲುಪಿದ್ದು, ಸುಮಾರು 75 ಕೋಟಿ ರೂಪಾಯಿಗಳ ಒಟ್ಟು ಸರಕು ವಹಿವಾಟು ಮೌಲ್ಯಸಾಧಿಸಿದೆ.

ಪಾಕಿಸ್ತಾನ ಮತ್ತ ಭಾರತದ ಪಂದ್ಯದ ನಂತ್ರ ಕೈ ಕುಲುಕದ ವಿವಾದಕ್ಕೆ ಸಂಬಂಧ ಪಟ್ಟಂತೆ MCC ತನ್ನ ನಿಲುವನ್ನ ತಿಳಿಸಿದೆ. MCCಯು ಕ್ರೀಡಾಸ್ಫೂರ್ತಿ ಮತ್ತು ನ್ಯಾಯಯುತ ಆಟವನ್ನು ಉತ್ತೇಜಿಸಬಲ್ಲದಾದರೂ, ಆಟಗಾರರು ಪರಸ್ಪರ ಕೈಕುಲುಕುವಂತೆ ಒತ್ತಾಯಿಸಲು ಅಥವಾ ತಂಡಗಳು ಹಾಗೂ ಅವುಗಳ ಆಡಳಿತ ಮಂಡಳಿಗಳು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಮಧ್ಯಪ್ರವೇಶಿಸಲು ಅದಕ್ಕೆ ಸಾಧ್ಯವಿಲ್ಲ ಎಂದು ಎಂಸಿಸಿಯ ಕಾನೂನು ವ್ಯವಸ್ಥಾಪಕ  ಮತ್ತು ಕ್ರಿಕೆಟ್ ಮುಖ್ಯಸ್ಥ  ಫ್ರೇಸರ್ ಸ್ಟೀವರ್ಟ್ ಹೇಳಿದ್ದಾರೆ.

 

 

 

Kishor KV

Leave a Reply

Your email address will not be published. Required fields are marked *