₹2000 ಕೋಟಿ ಗಡಿಯತ್ತ ರಾಮಾಯಣ – ದ. ಭಾರತದಿಂದ ಯಶ್ಗೆ ಲಾಟ್ರಿ

ನಮಸ್ಕಾರ.. ಸ್ನೇಹಿತರೇ, ಭಾರತೀಯ ಚಿತ್ರರಂಗದಲ್ಲಿ ಈಗ ರಾಮಾಯಣ ಸಿನಿಮಾ ಹೊಸ ಇತಿಹಾಸವನ್ನೇ ಬರೆಯುತ್ತಿದೆ. ಬಿಡುಗಡೆಯಾದ ಕೇವಲ 15 ದಿನಗಳಲ್ಲಿ ಒಂದೂವರೇ ಸಾವಿರ ಕೋಟಿ ರೂಪಾಯಿಗಳತ್ತ ದಾಪುಗಾಲು ಹಾಕುತ್ತಿರುವ ಈ ಸಿನಿಮಾ, ಈಗ 2,000 ಕೋಟಿ ರೂಪಾಯಿ ಕಲೆಕ್ಷನ್ ಗಡಿ ದಾಟುತ್ತಾ ಎಂಬ ಪ್ರಶ್ನೆ ಸಿನಿಪ್ರೇಮಿಗಳಲ್ಲಿ ದೊಡ್ಡ ಕುತೂಹಲ ಮೂಡಿಸಿದೆ.
ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ರಾಮಾಯಣ ಬಾಕ್ಸ್ ಆಫೀಸ್ನಲ್ಲಿ ಹಬ್ಬ ಮಾಡುತ್ತಿದೆ. ಪಾರ್ಟ್ 1 ನವೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನದಿಂದಲೇ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ.
ನವೆಂಬರ್ 22ರ ವರದಿಗಳ ಪ್ರಕಾರ, ಸಿನಿಮಾ 17 ದಿನಗಳಲ್ಲಿ ಭಾರತದಲ್ಲಿ ಸುಮಾರು 1,100 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು 550 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ಚಿತ್ರದ ವಿಶ್ವಾದ್ಯಂತ ಒಟ್ಟು ಕಲೆಕ್ಷನ್ ಸುಮಾರು 1,650 ಕೋಟಿ ರೂಪಾಯಿ ತಲುಪಿದೆ ಎಂದು ವರದಿಯಾಗಿದೆ. ಕಲೆಕ್ಷನ್ ಅಂಕಿಅಂಶಗಳು ವಿವಿಧ ಟ್ರೇಡ್ ಮೂಲಗಳ ಪ್ರಕಾರ ಸ್ವಲ್ಪ ವ್ಯತ್ಯಾಸವಾಗಬಹುದು.
ಇದನ್ನೂ ಓದಿ: ಯಶ್ಗೆ ಸನ್ನಿ ಡಿಯೋಲ್ ಸವಾಲ್! – ರಾಮಾಯಣ PART-2 BIG ಸೀಕ್ರೆಟ್
ಇನ್ನು ಈ ಸಿನಿಮಾದ ದಾಖಲೆಗಳ ಬಗ್ಗೆ ಹೇಳುವುದಾದರೆ, ಕೇವಲ 14 ದಿನಗಳಲ್ಲಿ ವಿಶ್ವಾದ್ಯಂತ 1,500 ಕೋಟಿ ರೂಪಾಯಿ ಕಲೆಕ್ಷನ್ ಗಡಿ ದಾಟಿದ ಅತ್ಯಂತ ವೇಗದ ಭಾರತೀಯ ಸಿನಿಮಾ ಎಂಬ ದಾಖಲೆ ನಿರ್ಮಿಸಿದೆ. ಈ ಮೂಲಕ ಈ ಹಿಂದೆ ಧುರಂಧರ್ 2, ಪುಷ್ಪ 2 ಮತ್ತು ಬಾಹುಬಲಿ 2 ಸಿನಿಮಾಗಳು ನಿರ್ಮಿಸಿದ್ದ ವೇಗದ 1,500 ಕೋಟಿ ಗಡಿ ಸಾಧನೆಯ ದಾಖಲೆಗಳನ್ನು ಹಿಂದಿಕ್ಕಿದೆ.
ಭಾರತದಲ್ಲಿ 1,000 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಗಡಿ ದಾಟಿದ ಆರನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೂ ರಾಮಾಯಣ ಪಾತ್ರವಾಗಿದೆ. ಅಷ್ಟೇ ಅಲ್ಲ, ಎರಡನೇ ವಾರಾಂತ್ಯದಲ್ಲಿ ಭಾರತದಲ್ಲಿ 196 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿ, ಭಾರತೀಯ ಚಿತ್ರಗಳ ಅತಿ ದೊಡ್ಡ ಎರಡನೇ ವಾರಾಂತ್ಯದ ಕಲೆಕ್ಷನ್ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ.
ಇನ್ನು ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷಾ ಮಾರುಕಟ್ಟೆಗಳಲ್ಲಿ 50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಗಡಿ ದಾಟಿದ ಮೊದಲ ಬಾಲಿವುಡ್ ಸಿನಿಮಾ ಎಂಬ ದಾಖಲೆ ಕೂಡ ರಾಮಾಯಣ ಹೆಸರಿನಲ್ಲಿದೆ. ದಕ್ಷಿಣ ಭಾರತದಲ್ಲಿ ವಿತರಣ ಹಕ್ಕು ಪಡೆದಿರೋ ಯಶ್ಗೆ ಇದರಿಂದ ಭರ್ಜರಿ ಲಾಭ ಆಗಲಿದೆ. ಅಲ್ಲದೇ ಯಾವುದೇ ಸಂಭಾವನೆ ಪಡೆಯದೇ ಈ ಸಿನಿಮಾ ಯಶ್ ಕೋ ಪ್ರೋಡ್ಯೂಸರ್ ಆಗಿರುವುದ್ದರಿಂದ ಯಶ್ಗೆ ರಾಮಯಣ ಹಣದ ಮಳೆಯನ್ನೇ ಹರಿಸಲಿದೆ.
ಈಗ ಚಿತ್ರದ ಮುಂದಿನ ಗುರಿ 2,000 ಕೋಟಿ ರೂಪಾಯಿ. ಈಗಾಗಲೇ 1,500 ಕೋಟಿ ಗಡಿ ದಾಟಿರುವ ಸಿನಿಮಾ, ಮುಂದಿನ ದಿನಗಳಲ್ಲಿ ವಿದೇಶಿ ಮಾರುಕಟ್ಟೆಗಳಲ್ಲಿ ಮತ್ತಷ್ಟು ಬಲ ಪಡೆದು, 2,000 ಕೋಟಿ ಗಡಿ ತಲುಪುತ್ತಾ? ಇದು ಭಾರತೀಯ ಚಿತ್ರರಂಗದ ಸಾರ್ವಕಾಲಿಕ ದಾಖಲೆಗಳನ್ನು ಮತ್ತಷ್ಟು ಬದಲಾಯಿಸುತ್ತಾ? ಅನ್ನೋದನ್ನು ಕಾದು ನೋಡಬೇಕಿದೆ.

ನೋಡಿರಿ

