ಟ್ರಾಫಿಕ್ ಫೈನ್ 50% ಡಿಸ್ಕೌಂಟ್ ಗೆ ಇಂದು ಕಡೇ ದಿನ – ಪೊಲೀಸರಿಗೆ ಶುರುವಾಯ್ತು ಹೊಸ ತಲೆಬಿಸಿ?
ಬೆಂಗಳೂರು: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡವರಿಗೆ ರಾಜ್ಯ ಸಾರಿಗೆ ಇಲಾಖೆ ಘೋಷಿಸಿದ ಶೇ.50 ರಷ್ಟು ರಿಯಾಯಿತಿಗೆ ಇಂದು ಕಡೇ ದಿನ. ಸಾವಿರಾರು ರೂಪಾಯಿ ದಂಡ ಅರ್ಧದಷ್ಟು ಕಡಿಮೆ ಆಗುತ್ತೆ ಅನ್ನೋದು ಗೊತ್ತಾಗುತ್ತಿದ್ದಂತೆಯೇ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದ ವಾಹನ ಸವಾರರು ದಂಡ ಪಾವತಿಸಲು ಇಂದು ಸಹ ಮುಗಿಬಿದ್ದಿದ್ದಾರೆ. ಶುಕ್ರವಾರ ಒಂದೇ ದಿನ 17.61 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ
ಕಳೆದ ಎಂಟು ದಿನಗಳಲ್ಲಿ ಬರೋಬ್ಬರಿ 85.83 ಕೋಟಿ ರೂಪಾಯಿ ದಂಡ ವಸೂಲಿಯಾಗಿದೆ. ಒಟ್ಟಾರೆ 31,11,546 ಪ್ರಕರಣಗಳು ಇತ್ಯರ್ಥಗೊಂಡು 85.83,07,541 ರೂಗಳ ದಂಡ ಸಂಗ್ರಹವಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 240 ಕೋಟಿ ರೂ.ಗೆ ಪೆಂಟ್ ಹೌಸ್ ಸೇಲ್ – ದೇಶದಲ್ಲೇ ಮೊದಲ ದುಬಾರಿ ಡೀಲ್!
ರಿಯಾಯಿತಿ ದರದಲ್ಲಿ ವಾಹನಗಳ ದಂಡ ವಸೂಲಿ ಮಾಡುತ್ತಿದ್ದಂತೆ ಪೊಲೀಸರಿಗೆ ಮತ್ತೊಂದು ತಲೆನೋವು ಶುರುವಾದಂತಿದೆ. ಕಳೆದ ಒಂದು ವಾರದಿಂದ ಜನ ಫೈನ್ ಕಟ್ಟಿ ವಾಹನಗಳ ಮೇಲಿನ ಕೇಸ್ ಗಳನ್ನು ಕ್ಲಿಯರ್ ಮಾಡಿಕೊಳ್ಳುತ್ತಿದ್ದಾರೆ. ಈ ದಂಡ ಕಟ್ಟೋಕೆ ಬಂದ ವಾಹನ ಸಮಸ್ಯೆಗಳನ್ನು ಕೇಳಿ ಪೊಲೀಸರೇ ಫುಲ್ ಶಾಕ್ ಆಗಿದ್ದಾರೆ.
ಬೆಂಗಳೂರಿನಲ್ಲಿ ನಕಲಿ ನಂಬರ್ ಪ್ಲೇಟ್‍ಗಳನ್ನು ಬಳಸಿಕೊಂಡು ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಎಷ್ಟೋ ಜನರು, ತಮ್ಮ ವಾಹನಗಳನ್ನು ಬಳಸದೇ ಇರೋ ದಿನಗಳಲ್ಲೂ ಫೈನ್ ಬಿದ್ದಿದೆ. ತಮ್ಮದಲ್ಲದ ಏರಿಯಾಗಳಲ್ಲೂ ಅದೇ ಗಾಡಿಯ ನಂಬರ್ ಪ್ಲೇಟ್ ಇರುವ ವಾಹನಗಳು ನಿಯಮ ಉಲ್ಲಂಘನೆ ಮಾಡಿ ಕೇಸ್ ಬಿದ್ದಿವೆ. ವಾಹನಗಳ ದಂಡ ಕಟ್ಟೋಕೆ ಬಂದ ಸವಾರರು ಈ ಫೇಕ್ ನಂಬರ್ ಪ್ಲೇಟ್ ಬಳಸಿರೋದು ನೋಡಿ ಶಾಕ್ ಆಗಿದ್ದಾರೆ.
ಕಳೆದ ಒಂದು ವಾರದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ನಕಲಿ ನಂಬರ್ ಪ್ಲೇಟ್‍ಗಳ ಕೇಸ್‍ಗಳು ಪತ್ತೆಯಾಗಿವೆ. ಕೆಲವರು ಒಂದು ಸಂಖ್ಯೆಯನ್ನು ಚೇಂಜ್ ಮಾಡಿ ವಾಹನಗಳನ್ನು ಬಳಸಿದ್ದರೆ ಇನ್ನೂ ಕೆಲವರು ಸಂಪೂರ್ಣ ನಂಬರನ್ನೇ ಚೇಂಜ್ ಮಾಡಿ ಬಳಸುತ್ತಿದ್ದಾರೆ. ಹಾಗಾಗಿ ಇಂಥವರನ್ನು ಪತ್ತೆ ಮಾಡಲೇಬೇಕಾದ ಪರಿಸ್ಥಿತಿಗೆ ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ನಕಲಿ ನಂಬರ್ ಪ್ಲೇಟ್ ಗಳನ್ನು ಬಳಸುವ ವಾಹನ ಸವಾರರನ್ನು ಪತ್ತೆ ಮಾಡೋಕೆ ವಿವಿಧ ತಂಡವಾಗಿ ಕೆಲಸ ಮಾಡೋಕೆ ಪೊಲೀಸರು ನಿರ್ಧಾರ ಮಾಡಿದ್ದಾರೆ.
ಕಳೆದ ಫೆಬ್ರವರಿ 3ರಂದು ಶೇ. 50 ರಷ್ಟು ರಿಯಾಯಿತಿ ಜಾರಿಗೆ ಬಂದಿದ್ದು, ಮೊದಲ ದಿನವೇ 5,61,45,000 ರೂಪಾಯಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿತ್ತು. ಎರಡನೇ ದಿನ ಬರೋಬ್ಬರಿ 6,80,72,500 ರೂ. ದಂಡ ಸಂಗ್ರಹವಾಗಿತ್ತು. ಶೇ 50% ರಿಯಾಯಿತಿ ದಂಡ ಪಾವತಿಸಲು ಇಂದು ಕೊನೇ ದಿನವಾಗಿದೆ. ಈ ಮಧ್ಯೆ ರಿಯಾಯಿತಿ ದರದಲ್ಲಿ ದಂಡ ಪಾವತಿಸುವ ಸಮಯವನ್ನು ವಿಸ್ತರಿಸುವಂತೆ ಒತ್ತಾಯವೂ ಕೇಳಿ ಬರುತ್ತಿದೆ.