RO-KOಗಿಂತ ಗಿಲ್ ಬೆಸ್ಟ್! ಧರ್ಮದ ಕಾರಣಕ್ಕೆ ಸಿರಾಜ್ ಡ್ರಾಪ್?

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಭಾರತ A ತಂಡ ನೇಪಾಳ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ A, ತಿಲಕ್ ವರ್ಮಾ ಮತ್ತು ಕುಮಾರ್ ಕುಶಾಗ್ರ ಅವರ ಶತಕಗಳ ನೆರವಿನಿಂದ 332 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನೇಪಾಳ ಕೇವಲ 26 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತ A ತಂಡ ಬರೋಬ್ಬರಿ 306 ರನ್‌ಗಳ ಜಯ ಸಾಧಿಸಿದೆ.
ಅಂಧರ ಏಷ್ಯಾ ಕಪ್ ಟಿ20 ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ನಡೆಯಲಿಲ್ಲ. ಆದರೆ ಉತ್ತಮ ನೆಟ್ ರನ್‌ರೇಟ್ ಆಧಾರದ ಮೇಲೆ ಪಾಕಿಸ್ತಾನ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು. ಈ ನಿರ್ಧಾರಕ್ಕೆ ಭಾರತ ಅಂಧ ಕ್ರಿಕೆಟ್ ತಂಡ ವಿರೋಧ ವ್ಯಕ್ತಪಡಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನೂ ಬಹಿಷ್ಕರಿಸಿದೆ. ಈ ವಿಚಾರ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಅಹಮದಾಬಾದ್‌ನಲ್ಲಿ ನಡೆದ ಸೀನಿಯರ್ ಮಹಿಳಾ ಟಿ20 ಟ್ರೋಫಿ ಫೈನಲ್‌ನಲ್ಲಿ ರೈಲ್ವೇಸ್ ತಂಡವನ್ನು 3 ರನ್‌ಗಳಿಂದ ಮಣಿಸಿ ಕರ್ನಾಟಕ ಮಹಿಳಾ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿದೆ. ಶುಭಾ ಸತೀಶ್ ಅವರ 48 ರನ್ ಹಾಗೂ ತೇಜಸ್ವಿನಿ ಅವರ 3 ವಿಕೆಟ್ ನೆರವಿನಿಂದ ಕರ್ನಾಟಕ ರೋಚಕ ಗೆಲುವು ಸಾಧಿಸಿತು. ಈ ಪ್ರಶಸ್ತಿ ಕರ್ನಾಟಕ ಮಹಿಳಾ ಕ್ರಿಕೆಟ್‌ಗೆ ಹೊಸ ಮೈಲುಗಲ್ಲು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಎಲೈಟ್ ಗ್ರೂಪ್ ‘ಎ’ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಕರ್ನಾಟಕ ತಂಡ 7 ವಿಕೆಟ್‌ಗಳ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿತು. 175 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಜಾರ್ಖಂಡ್ ತಂಡ 19.1 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಬೆಂಗಾಲ್ ಹಾಗೂ ರಾಜಸ್ಥಾನ್ ತಂಡಗಳು ಮುಂದಿನ ಸುತ್ತುಗಳಲ್ಲಿ ಸೋತರೆ ಮಾತ್ರ ಕರ್ನಾಟಕ ಹಾಗೂ ಜಾರ್ಖಂಡ್ ತಂಡಗಳಿಗೆ ನಾಕೌಟ್ ಪ್ರವೇಶಿಸುವ ಅವಕಾಶ ಸಿಗಲಿವೆ.
ಇದನ್ನೂ ಓದಿ: SENA ಗೆಲ್ಲುವ ರಾಜ ರಾಹುಲ್! – ಶತಕದಲ್ಲೇ ಬಾಯಿ ಮುಚ್ಚಿಸಿದ KL
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಪ್ಲೇಯಿಂಗ್ 11 ಹೊರಗಿಟ್ಟಿರುವುದನ್ನು ಪ್ರಶ್ನಿಸಿ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ, ಅವರ ಹೆಸರು ಸಿರಾಜ್ ಎಂದಿದೆ, ಅದೊಂದೇ ಸಾಕೇ? ಎಂದು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಕಾಂಗ್ರೆಸ್ ಸಂಸದರ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಇದ್ದಕ್ಕೆ ತೀವ್ರ ವಿರೋಧ ಕೇಳಿ ಬರ್ತಿದೆ.
ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಕಿರಿಯ ಪುತ್ರ ರಾಜ್‌ವೀರ್ ಡಿಯೋಲ್ ಜೊತೆ ಸಾರಾ ತೆಂಡೂಲ್ಕರ್ ಮದುವೆಯಾಗಲಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಸಾರಾ ತೆಂಡೂಲ್ಕರ್ ಹಾಗೂ ರಾಜ್‌ವೀರ್ ಡಿಯೋಲ್ ನಡುವೆ ಪ್ರೀತಿ ಶುರುವಾಗಿದ್ದು, ಇಬ್ಬರೂ 2027ರ ಆರಂಭದಲ್ಲಿ ಮದುವೆಯಾಗಬಹುದು ಎಂದು ಕೆಲವು ಪೋಸ್ಟ್‌ಗಳಲ್ಲಿ ಹೇಳಲಾಗುತ್ತಿದೆ. ಸದ್ಯಕ್ಕೆ ಸಚಿನ್ ತೆಂಡೂಲ್ಕರ್ ಕುಟುಂಬವಾಗಲಿ, ಸನ್ನಿ ಡಿಯೋಲ್ ಕುಟುಂಬವಾಗಲಿ ಈ ಮದುವೆ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ
ಭುವನೇಶ್ವರ್ ಕುಮಾರ್ ಆರ್‌ಸಿಬಿ ತಂಡದ ಯಶಸ್ಸು ಮತ್ತು ಡ್ರೆಸ್ಸಿಂಗ್ ರೂಂ ವಾತಾವರಣದ ಬಗ್ಗೆ ಮಾತನಾಡಿದ್ದಾರೆ. ಇದುವರೆಗೆ ಟ್ರೋಫಿ ಗೆದ್ದಿಲ್ಲ ಎಂಬುದನ್ನು ಸವಾಲಾಗಿ ಸ್ವೀಕರಿಸಿದ್ದೇ ತಂಡದ ಗೆಲುವಿಗೆ ಕಾರಣ ಎಂದು ಅವರು ಹೇಳಿದ್ದಾರೆ. ಹಾಗೇ ನಾನು ತಂಡದಲ್ಲಿ ಇಲ್ಲದಿದ್ದಾಗಲೂ ಆರ್‌ಸಿಬಿ ಬಗ್ಗೆ ಒಳ್ಳೆಯ ಮಾತುಗಳನ್ನೇ ಕೇಳಿದ್ದೆ. ಹೀಗಾಗಿ ನನಗೆ ತುಂಬಾ ಖುಷಿಯಾಗಿತ್ತು ಎಂಬ ಸಂತಸವನ್ನು ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿಯಂತಹ ದಿಗ್ಗಜನಿಗೂ ಸಾಧ್ಯವಾಗದ ಆ ಅಪರೂಪದ ಸಾಧನೆಯನ್ನು ಈಗ ಯುವ ನಾಯಕ ಶುಭ್ಮನ್ ಗಿಲ್ ಮಾಡಿ ತೋರಿಸಿದ್ದಾರೆ. ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಗಿಲ್ ಅಮೋಘ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ 2014ರ ನಂತರ ನ್ಯೂಝಿಲೆಂಡ್ ನೆಲದಲ್ಲಿ ಟೆಸ್ಟ್ ಅರ್ಧಶತಕ ಬಾರಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2018ರ ಬಾಲ್ ಟ್ಯಾಂಪರಿಂಗ್ ವಿವಾದದ ಕುರಿತು ಮತ್ತೆ ಚರ್ಚೆ ಶುರುವಾಗಿರುವ ಬೆನ್ನಲ್ಲೇ, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನಾಯಕ ಪ್ಯಾಟ್ ಕಮಿನ್ಸ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ತಂಡದ ನಾಯಕನ ಸಮಗ್ರತೆ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಮಂಡಳಿ ಹೇಳಿದೆ. ಈ ವಿವಾದದ ನಡುವೆ ಕಮಿನ್ಸ್ ನಾಯಕತ್ವದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮಂಡಳಿಯ ಈ ಹೇಳಿಕೆ ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಮಹತ್ವ ಪಡೆದುಕೊಂಡಿದೆ
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 328 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 231 ರನ್‌ಗಳಿಗೆ ಆಲೌಟ್ ಆಗಿದ್ದು, ಇಂಗ್ಲೆಂಡ್ 97 ರನ್‌ಗಳ ಜಯ ದಾಖಲಿಸಿದೆ. ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ವೈಫಲ್ಯ ಈ ಪಂದ್ಯದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದೆ.

ನೋಡಿರಿ

