SENA ಗೆಲ್ಲುವ ರಾಜ ರಾಹುಲ್! – ಶತಕದಲ್ಲೇ ಬಾಯಿ ಮುಚ್ಚಿಸಿದ KL
ಇತಿಹಾಸ ಬರೆದ ಕನ್ನಡಿಗ

ಸ್ಲಾಟ್ ಚೇಂಜ್ ಮಾಡಿದ್ರೂ ಛಲ ಬಿಡಲಿಲ್ಲ. ಬೆಂಚ್ ಕಾಯಿಸಿದಾಗಲೂ ಕುಗ್ಗಲಿಲ್ಲ. ಅವಕಾಶಗಳು ಸಿಕ್ಕಾಗೆಲ್ಲಾ ಅಬ್ಬರಿಸಿ ನಾನು ಟ್ಯಾಲೆಂಟ್ ಇರೋ ಪ್ಲೇಯರ್ ಅನ್ನೋದನ್ನ ಪ್ರತೀ ಸಲ ಪ್ರೂವ್ ಮಾಡುವ ಆಟಗಾರ ನಮ್ಮ ಕನ್ನಡಿಗ ಕೆಎಲ್ ರಾಹುಲ್. ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಿಡಿಸಿರೋ ರಾಹುಲ್ ಸೆನಾ ರಾಷ್ಟ್ರಗಳ ಗೆಲುವಿನ ಮಹಾರಾಜನಾಗಿದ್ದಾರೆ.
ಇದನ್ನೂ ಓದಿ : RCB ಕೈ ಬಿಟ್ಟಿದ್ದಕ್ಕೆ ಬೆಥಲ್ ಬೇಜಾರು – BIG ಡೀಲ್, ಶಾರುಖ್ KKR ಸೇಲ್
ನ್ಯೂಜಿಲೆಂಡ್ ನಾಡಿನಲ್ಲಿ ಟೀಂ ಇಂಡಿಯಾದ ಡಾಮಿನೇಷನ್ ಕಂಟಿನ್ಯೂ ಆಗಿದೆ. ಟಿ-20ಐ, ಏಕದಿನ ಸರಣಿ ಬಳಿಕ ಈಗ ಟೆಸ್ಟ್ನಲ್ಲೂ ಕಿವೀಸ್ ಪ್ಲೇಯರ್ಗಳ ಕಿವಿ ಹಿಂಡೋಕೆ ಸ್ಟಾರ್ಟ್ ಮಾಡಿದ್ದಾರೆ. ವೆಲ್ಲಿಂಗ್ಟನ್ನಲ್ಲಿ ನಡೆಯುತ್ತಿರೋ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತೀಯ ಬ್ಯಾಟರ್‌ಗಳು ಪಾರುಪತ್ಯ ಮೆರೆದಿದ್ದಾರೆ. ಟಾಪ್-5 ಪ್ಲೇಯರ್ಗಳ ಫೈಯರ್ಗೆ ದಾಖಲೆಗಳೂ ಧೂಳೀಪಟವಾಗಿದೆ.
ರಾಹುಲ್ ಸೆಂಚುರಿ.. ಟಾಪ್ 5 ಬ್ಯಾಟರ್ ಗಳ ಕಾಟಕ್ಕೆ ಕಿವೀಸ್ ಸುಸ್ತು!
ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 368 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತದ ಪರ ಜೈಸ್ವಾಲ್ ಮತ್ತು ರಾಹುಲ್ ನಡುವೆ ಒಳ್ಳೆ ಪಾರ್ಟ್ನರ್ಶಿಪ್ ಬಂದಿತ್ತು. ಜೈಸ್ವಾಲ್ 85 ರನ್ಗಳಿಗೆ ಔಟ್ ಆದ್ರೆ ಕೆಎಲ್ ರಾಹುಲ್ 136 ರನ್ಗಳಿಗೆ ವಿಕೆಟ್ ಒಪ್ಪಿಸಿದ್ರು. 290 ಎಸೆತಗಳನ್ನ ಫೇಸ್ ಮಾಡಿದ ರಾಹುಲ್ ಬ್ಯಾಟಿಂಗ್ ನಲ್ಲಿ 9 ಬೌಂಡರಿ ಹಾಗೇ 2 ಸಿಕ್ಸರ್ ಗಳೂ ಸೇರಿದ್ವು. ಇನ್ನು ಮತ್ತೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್ 80ಕ್ಕೆ ಔಟ್ ಆದ್ರೆ ಶುಭ್ಮನ್ ಗಿಲ್ 98 ರನ್ ಗಳಿಸಿ ಕೇವಲ ಎರಡು ರನ್ಗಳಿಂದ ಶತಕ ಮಿಸ್ ಮಾಡಿಕೊಂಡ್ರು. ಇನ್ನು ರಿಷಬ್ ಪಂತ್ 55 ರನ್ಸ್ ಗಳಿಸಿ ಕ್ರೀಸ್ನಲ್ಲಿದ್ರೆ ಅನ್ಶುಲ್ ಕಾಂಬೋಜ್ ಖಾತೆ ತೆರೆಯದೇ ಅಜೇಯರಾಗಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 4 ವಿಕೆಟ್ಗಳ ನಷ್ಟಕ್ಕೆ 486 ರನ್ ಗಳಿಸಿ ಮೊದಲ ಇನ್ನಿಂಗ್ಸ್ನಲ್ಲೇ 118 ರನ್ಗಳ ಲೀಡ್ ಸಾಧಿಸಿದೆ. ಸದ್ಯದ ಸಿಚುಯೇಷನ್ ನೋಡ್ತಿದ್ರೆ 55 ಪರ್ಸೆಂಟ್ ಭಾರತ ಈ ಪಂದ್ಯವನ್ನ ಗೆಲ್ಲುವಂಥ ಚಾನ್ಸಸ್ ಇದೆ. 43 ಪರ್ಸೆಂಟ್ ಮ್ಯಾಚ್ ಡ್ರಾ ಆಗ್ಬಹುದು.. 1 ಪರ್ಸೆಂಟ್ ಮಾತ್ರನೇ ಕಿವೀಸ್ಗೆ ಗೆಲ್ಲೋ ಚಾನ್ಸಸ್ ಇರೋದು. ಹೀಗೆ ಬ್ಯಾಟಿಂಗ್ನಲ್ಲೇ ಸುನಾಮಿ ಎಬ್ಬಿಸಿರೋ ಭಾರತ ಇತಿಹಾಸವನ್ನೇ ಬದಲಿಸಿದ್ದಾರೆ.
ಸೆನಾ ರಾಷ್ಟ್ರಗಳ ಪೈಕಿ ಮೊದಲ ಬಾರಿಗೆ ಟಾಪ್-5 ಬ್ಯಾಟರ್ಸ್ 50+ ರನ್ಸ್!
ಭಾರತದ ಟಾಪ್ ಆರ್ಡರ್ ಬ್ಯಾಟಿಂಗ್ ಮುಂದೆ ಕಿವೀಸ್ ಬೌಲರ್ಗಳು ಥಂಡಾ ಹೊಡೆದಿರೋದು ಕ್ಲಿಯರ್ ಆಗಿ ಗೊತ್ತಾಗಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ 94 ವರ್ಷಗಳ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, SENA ರಾಷ್ಟ್ರವೊಂದರಲ್ಲಿ ನಡೆದ ಟೆಸ್ಟ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಭಾರತದ ಟಾಪ್- 5 ಬ್ಯಾಟರ್‌ಗಳು 50ಕ್ಕೂ ಹೆಚ್ಚು ರನ್ ಗಳಿಸಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. 1932ರಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಇಲ್ಲಿಯವರೆಗೆ, ತಂಡದ ಟಾಪ್-4 ಬ್ಯಾಟರ್‌ಗಳು ಒಂದೇ ಇನ್ನಿಂಗ್ಸ್‌ನಲ್ಲಿ 50+ ರನ್ ಗಳಿಸಿದ್ದು 11 ಬಾರಿ ಮಾತ್ರ. ಆದರೆ, ಕಠಿಣ ಪಿಚ್‌ಗಳಿಗೆ ಹೆಸರಾದ SENA (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ) ರಾಷ್ಟ್ರಗಳಲ್ಲಿ ಈ ಸಾಧನೆ ಮಾಡೋಕೆ ಇದುವರೆಗೆ ಸಾಧ್ಯನೇ ಆಗಿರಲಿಲ್ಲ. ಈಗ ತಂಡದ ಟಾಪ್ ಆರ್ಡರ್ನ ಐವರು ಬ್ಯಾಟರ್ಸ್ ತಲಾ 50+ ರನ್ಸ್ ಗಳಿಸಿ ಇತಿಹಾಸ ಬರೆದಿದ್ದಾರೆ. ಅಷ್ಟೇ ಅಲ್ಲದೆ ನ್ಯೂಝಿಲೆಂಡ್‌ನಲ್ಲಿ ನಡೆದ ಟೆಸ್ಟ್ ಇತಿಹಾಸದಲ್ಲೇ ಯಾವುದೇ ತಂಡದ ಟಾಪ್-4 ಬ್ಯಾಟರ್‌ಗಳು ಒಂದೇ ಇನ್ನಿಂಗ್ಸ್‌ನಲ್ಲಿ 80 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿರುವುದು ಇದೇ ಮೊದಲು. ಈ ಮೂಲಕ ಯಶಸ್ವಿ ಜೈಸ್ವಾಲ್ (85), ಕೆಎಲ್ ರಾಹುಲ್ (136), ದೇವದತ್ ಪಡಿಕ್ಕಲ್ (80) ಹಾಗೂ ಶುಭ್ಮನ್ ಗಿಲ್ (98) ಜೊತೆಗೂಡಿ ಕಿವೀಸ್ ನಾಡಿನಲ್ಲಿ ದಾಖಲೆ ಬರೆದಿದ್ದಾರೆ. ಅದ್ರಲ್ಲೂ ಕನ್ನಡಿಗ ಕೆಎಲ್ ರಾಹುಲ್ ಅಂತೂ ಎಲ್ರಿಗಿಂತ್ಲೂ ಗ್ರೇಟ್. 2014ರಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಕೆಎಲ್ ರಾಹುಲ್, ಬರೋಬ್ಬರಿ 12 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟೆಸ್ಟ್ ಶತಕ ದಾಖಲಿಸಿದ್ದಾರೆ.
ಸೆನಾ ರಾಷ್ಟ್ರಗಳಲ್ಲಿ ಸೆಂಚುರಿ ಬಾರಿಸಿದ ಮೊದಲ ಭಾರತೀಯ ಓಪನರ್!
ವಿದೇಶಿ ನೆಲದಲ್ಲಿ ಬ್ಯಾಟಿಂಗ್ ಮಾಡೋದೇ ಕಷ್ಟ ಎನ್ನುವಾಗ ಕೆಎಲ್ ರಾಹುಲ್ ವಿದೇಶಿ ನೆಲಗಳಲ್ಲೇ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಈಗ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದಿದ್ದಾರೆ. ಎಲ್ಲಾ SENA ದೇಶಗಳಲ್ಲಿ ಓಪನರ್ ಆಗಿ ಕಣಕ್ಕಿಳಿದು ಟೆಸ್ಟ್ ಶತಕ ಬಾರಿಸಿದ ಮೊದಲ ಬ್ಯಾಟರ್ ಆಗಿದ್ದಾರೆ. ಕಿವೀಸ್ ವೇಗಿಗಳ ಸವಾಲನ್ನು ಫೇಸ್ ಮಾಡಿದ ರಾಹುಲ್ 207 ಎಸೆತಗಳಲ್ಲಿ ತಮ್ಮ ಕೆರಿಯರ್ನ 13ನೇ ಶತಕ ಪೂರೈಸಿದ್ರು. ಇದಕ್ಕೂ ಮುನ್ನ ಸೌತ್ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಅವರದ್ದೇ ನೆಲದಲ್ಲಿ ಒಟ್ಟು 7 ಟೆಸ್ಟ್ ಶತಕಗಳನ್ನು ಅಂದ್ರೆ ಇಂಗ್ಲೆಂಡ್ – 4, ಸೌತ್ ಆಫ್ರಿಕಾ – 2, ಆಸ್ಟ್ರೇಲಿಯಾದಲ್ಲಿ 1 ಶತಕ ಸಿಡಿಸಿದ್ರು. ಇದೀಗ ನ್ಯೂಝಿಲೆಂಡ್ ನೆಲದಲ್ಲೂ ಮೊದಲ ಟೆಸ್ಟ್ ಶತಕ ಸಿಡಿಸಿದ್ದಾರೆ. ಹಾಗೆಯೇ ಎಲ್ಲಾ SENA ದೇಶಗಳಲ್ಲಿ ಶತಕ ಗಳಿಸಿದ ಐದನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ರಾಹುಲ್ ಅವರ ಐತಿಹಾಸಿಕ ಸಾಧನೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ವಿಶ್ವ ಕ್ರಿಕೆಟ್‌ನಲ್ಲಿಯೂ ಇದು ಅತ್ಯಂತ ಅಪರೂಪ. ಕೆಎಲ್ ರಾಹುಲ್‌ಗಿಂತ ಮೊದಲು, ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಸಯೀದ್ ಅನ್ವರ್ ಮಾತ್ರ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಈ ನಾಲ್ಕು ದೇಶಗಳಲ್ಲಿ ಟೆಸ್ಟ್ ಶತಕಗಳನ್ನು ಗಳಿಸಿದ್ದರು. ಇದೀಗ ಈ ರಾಹುಲ್ ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
ವಿದೇಶಿ ನೆಲದಲ್ಲೇ ಅತೀ ಹೆಚ್ಚು ಟೆಸ್ಟ್ ಶತಕಗಳು!
ಇನ್ನು ರಾಹುಲ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 13 ಶತಕಗಳನ್ನು ಗಳಿಸಿದ್ದಾರೆ. ಇವುಗಳಲ್ಲಿ 10 ವಿದೇಶಿ ನೆಲದಲ್ಲಿ ಗಳಿಸಿದ್ದಾರೆ ಅನ್ನೋದೇ ಇಂಟ್ರೆಸ್ಟಿಂಗ್. ಉಳಿದಂತೆ ಮೂರು ತವರಿನಲ್ಲಿ ಬಂದಿರುವ ಶತಕಗಳಾಗಿವೆ. ವಿದೇಶಿ ಪಿಚ್‌ಗಳಲ್ಲಿ ಅವರ ಬ್ಯಾಟಿಂಗ್ ಸಾಮರ್ಥ್ಯ ಮತ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಅವರ ಸಾಮರ್ಥ್ಯಕ್ಕೆ ಇದೇ ನಂಬರ್ಸ್ ಸಾಕ್ಷಿಯಾಗಿದೆ. 2021 ರಿಂದ ಟೆಸ್ಟ್ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ರಾಹುಲ್ ಅಗ್ರಸ್ಥಾನದಲ್ಲಿದ್ದಾರೆ. ಈ ವೇಳೆ ಅವ್ರ ಬ್ಯಾಟಿಂಗ್ 7 ಶತಕಗಳು ಬಂದಿವೆ.

ನೋಡಿರಿ

