ಬರೋಬ್ಬರಿ 240 ಕೋಟಿ ರೂ.ಗೆ ಪೆಂಟ್ ಹೌಸ್ ಸೇಲ್ – ದೇಶದಲ್ಲೇ ಮೊದಲ ದುಬಾರಿ ಡೀಲ್!
ಮುಂಬೈ: ಮುಂಬೈನ ವರ್ಲಿಯಲ್ಲಿರೋ ಅನ್ನಿ ಬೆಸೆಂಟ್ ರಸ್ತೆಯಲ್ಲಿರುವ ‘ತ್ರೀ ಸಿಕ್ಸ್ಟಿ ವೆಸ್ಟ್’ ಐಷಾರಾಮಿ ಪೆಂಟ್ಹೌಸ್ ಅನ್ನು ‘ವೆಲ್ಸ್ಪನ್ ಗ್ರೂಪ್’ನ ಅಧ್ಯಕ್ಷ ಬಿ.ಕೆ. ಗೋಯೆಂಕಾ ಬರೋಬ್ಬರಿ 240 ಕೋಟಿ ರೂ.ಗೆ ಖರೀದಿಸಿದ್ದಾರೆ.
ಗಗನಚುಂಬಿ ಕಟ್ಟದ ಅತಿ ಎತ್ತರದ ಮಹಡಿಯಲ್ಲಿರುವ ಫ್ಲ್ಯಾಟ್ ಅನ್ನು ಸಾಮಾನ್ಯವಾಗಿ ಪೆಂಟ್ಹೌಸ್ ಎಂದು ಕರೆಯಲಾಗುತ್ತದೆ. ಪೆಂಟ್ಹೌಸ್ ಎಂದು ಕರೆಯಲ್ಪಡುವ ಈ ಫ್ಲ್ಯಾಟ್ಗಳು ಅತ್ಯಂತ ಐಷಾರಾಮಿಯಾಗಿರುತ್ತವೆ. ಇದೀಗ ಬಿ.ಕೆ. ಗೋಯೆಂಕಾ ಅವರು ಖರೀದಿಸಿರುವ ಪೆಂಟ್ಹೌಸ್ ಗಗನಚುಂಬಿ ಕಟ್ಟಡದ ಟವರ್ ಬಿ ವಿಭಾಗದ 63, 64 ಮತ್ತು 65ನೇ ಮಹಡಿಯಲ್ಲಿದೆ. ದುಬಾರಿ ಪೆಂಟ್ಹೌಸ್ 30,000 ಚದರ ಅಡಿ ವ್ಯಾಪ್ತಿಯಲ್ಲಿದೆ. ಸರ್ಕಾರದ ಕೊಳೆಗೇರಿ ಪುನರ್ವಸತಿ ಯೋಜನೆಯಡಿ ರೂಪಿಸಲಾದ 300 ಚದರ ಅಡಿ ವಠಾರಕ್ಕಿಂತ ಸುಮಾರು 100 ಪಟ್ಟು ದೊಡ್ಡದಾಗಿದೆ. ಅಲ್ಲದೇ ಈ ಪೆಂಟ್ಹೌಸ್ನಲ್ಲಿ ಬಿ.ಕೆ ಗೋಯೆಂಕಾ ವಾಸ್ತವ್ಯ ಹೂಡುವ ಉದ್ದೇಶ ಹೊಂದಿದ್ದಾರೆ ಅಂತಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭಾರತದೊಳಗೆ ನುಗ್ಗಲು ಯತ್ನಿಸಿದ ಡ್ರೋನ್ ಉರುಳಿಸಿದ ಬಿಎಸ್ಎಫ್ – ಎಲ್ಲಿಗೆ ಸಪ್ಲೈ ಆಗ್ತಿತ್ತು ಡ್ರಗ್ಸ್..!?
ರಿಯಲ್ ಎಸ್ಟೇಟ್ ಸಂಸ್ಥೆ ಲೈಸೆಸ್ ಫೋರಸ್ನ ಎಂಡಿ ಪಂಕಜ್ ಕಪೂರ್ ಈ ಬಗ್ಗೆ ಮಾತನಾಡಿದ್ದು, ‘ದೇಶದಲ್ಲಿ ಈವರೆಗೆ ಮಾರಾಟವಾದ ಅಪಾರ್ಟ್ಮೆಂಟ್ಗಳ ಪೈಕಿ ಇದುವೇ ಅತಿ ದುಬಾರಿಯದ್ದಾಗಿದೆ. ಅಲ್ಟ್ರಾ-ಲಕ್ಷುರಿ ಸೆಗ್ಮೆಂಟ್ನಲ್ಲಿ ಮುಂದಿನ ಎರಡು ತಿಂಗಳ ಒಳಗಾಗಿ ಇನ್ನಷ್ಟು ವಹಿವಾಟಿನ ಗುರಿ ಹೊಂದಿದ್ದೇವೆ. ಯಾಕೆಂದರೆ 2023ರ ಏಪ್ರಿಲ್ ಬಳಿಕ ತೆರಿಗೆ ಕಾಯ್ದೆಯ ಸೆಕ್ಷನ್ 54ರ ಅಡಿ ಬಂಡವಾಳ ಗಳಿಕೆಯ ಮಿತಿಯನ್ನು 10 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಗಳಿಕೆಗೆ ತೆರಿಗೆ ಪಾವತಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.