ಡಿಸೆಂಬರ್ 5 ರಿಂದ 8ರವರೆಗೆ ಬಸವನಗುಡಿಕಡಲೆಕಾಯಿ ಪರಿಷೆ – ‘ಪರಿಷೆಗೆ ಬನ್ನಿ, ಕೈಚೀಲ ತನ್ನಿ’ ಅಭಿಯಾನ

ಬಸವನಗುಡಿ ಕಡಲೆಕಾಯಿ ಪರಿಷೆಗೆ ಮುಹೂರ್ತ ಫಿಕ್ಸ್ ಆಗಿದೆ. ಡಿಸೆಂಬರ್ 5ರಿಂದ 8ರವರೆಗೆ ನಾಲ್ಕು ದಿನ ಕಡಲೆಕಾಯಿ ಪರಿಷೆ ನಡೆಯಲಿದೆ.
ಇದನ್ನೂ ಓದಿ:14 ವರ್ಷದ ರಹಸ್ಯ ಬಯಲಾಗುತ್ತಾ? ಸೌಜನ್ಯಾ ಕೊಲೆಯಾದ ಜಾಗ ಇದೇನಾ?
ಬೆಂಗಳೂರಿನ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಗಣನೆ ಆರಂಭವಾಗಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುವ ಈ ಪ್ರಸಿದ್ಧ ಜಾತ್ರೆ ಈ ಬಾರಿ ಡಿಸೆಂಬರ್ 5ರಿಂದ ಆರಂಭವಾಗಲಿದೆ. ಒಟ್ಟು ನಾಲ್ಕು ದಿನಗಳ ಕಾಲ ಪರಿಷೆ ನಡೆಯಲಿದ್ದು ಡಿಸೆಂಬರ್ 8ಕ್ಕೆ ಮುಕ್ತಾಯವಾಗಲಿದೆ. ಡಿಸೆಂಬರ್ 7ರಂದು ಮುಖ್ಯ ಪರಿಷೆ ನಡೆಯಲಿದೆ.
ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ ಹಾಗೂ ದೊಡ್ಡ ಗಣಪತಿ ದೇವಸ್ಥಾನದ ಸುತ್ತಮುತ್ತ ಕಡಲೆಕಾಯಿ ರಾಶಿಗಳು, ನೂರಾರು ಅಂಗಡಿಗಳು ಜಾತ್ರೆಯ ಸಂಭ್ರಮ ಹೊತ್ತು ತರಲಿದೆ. ಈ ಬಾರಿ ಕೂಡಾ ಪ್ಲಾಸ್ಟಿಕ್ ಮುಕ್ತ ಉತ್ಸವ ನಡೆಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳ ಬಳಕೆಯನ್ನು ಕಡಿಮೆ ಮಾಡಲು ನಾಗರಿಕ ಸಂಘಟನೆಗಳು ಮತ್ತು ಸ್ವಯಂಸೇವಕರು ಕೈಜೋಡಿಸಿದ್ದಾರೆ. ಹಳೆಯ ಕಂದು ಬಣ್ಣದ ಕಾಗದದ ಚೀಲಗಳನ್ನು ಸಂಗ್ರಹಿಸುವುದು, ಹಳೆಯ ದಿನಪತ್ರಿಕೆಗಳಿಂದ ಪೇಪರ್ ಬ್ಯಾಗ್ಗಳನ್ನು ಸಿದ್ಧಪಡಿಸುವುದು ಸೇರಿದಂತೆ ಹಲವು ಚಟುವಟಿಕೆಗಳು ನಡೆಯುತ್ತಿವೆ. ಈ ಬಾರಿ ಬೆಂಗಳೂರಿನ ಮೂರು ಭಾಗಗಳ ಕಡಲೆಕಾಯಿ ಪರಿಷೆಗಳಿಗಾಗಿ ಒಟ್ಟು 3 ಲಕ್ಷ ಪೇಪರ್ ಬ್ಯಾಗ್ಗಳನ್ನು ಸಿದ್ಧಪಡಿಸುವ ಗುರಿ ಹೊಂದಲಾಗಿದೆ. ನವೆಂಬರ್ 17ರ ವರದಿಯ ಪ್ರಕಾರ, ಆಗಲೇ ಸುಮಾರು 95 ಸಾವಿರ ಚೀಲಗಳನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿ ಬಸವನಗುಡಿಯ ಪರಿಷೆಗೆ ಸುಮಾರು 2 ಲಕ್ಷ ಚೀಲಗಳನ್ನು ಒದಗಿಸುವ ಉದ್ದೇಶವಿದೆ. ಪ್ಲಾಗರ್ಸ್ ಆರ್ಮಿ ಸೇರಿದಂತೆ ವಿವಿಧ ನಾಗರಿಕ ಸಂಘಟನೆಗಳು ಈ ಅಭಿಯಾನದಲ್ಲಿ ತೊಡಗಿಸಿಕೊಂಡಿವೆ. ‘ಪರಿಷೆಗೆ ಬನ್ನಿ, ಕೈಚೀಲ ತನ್ನಿ’ ಎಂಬ ಸಂದೇಶದೊಂದಿಗೆ ಸಾರ್ವಜನಿಕರು ತಮ್ಮದೇ ಬಟ್ಟೆಯ ಚೀಲಗಳನ್ನು ತರುವಂತೆ ಮನವಿ ಮಾಡಲಾಗುತ್ತದೆ. ಬಳಕೆಯಾದ ಕಾಗದದ ಚೀಲಗಳನ್ನು ಮರುಬಳಕೆ ಮಾಡುವುದಕ್ಕೂ ಉತ್ತೇಜನ ನೀಡಲಾಗುತ್ತಿದೆ.

ನೋಡಿರಿ

