14 ವರ್ಷದ ರಹಸ್ಯ ಬಯಲಾಗುತ್ತಾ? ಸೌಜನ್ಯಾ ಕೊಲೆಯಾದ ಜಾಗ ಇದೇನಾ?
ಮಣ್ಣಸಂಕದಲ್ಲಿ FSLಗೆ ಸಿಕ್ಕಿದ್ದೇನು?

14 ವರ್ಷಗಳ ಹಿಂದೆ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಈಗ ಒಂದೊಂದೇ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಷ್ಟು ವರ್ಷಗಳ ಕಾಲ ಕಾಡುತ್ತಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ಎಸ್ಐಟಿ ಈಗ ವೈಜ್ಞಾನಿಕ ತನಿಖೆಯ ಮೊರೆ ಹೋಗಿದೆ.
ಸ್ನೇಹಿತರೇ ಮೊದಲಿಗೆ ಎಸ್ಐಟಿ ರಚನೆ ಮಾಡಿರೋ ವೈದ್ಯರ ತಂಡದ ಕೆಲಸ ಏನು ಅನ್ನೋದನ್ನು ತಿಳಿದುಕೊಳ್ಳೋಣ.
ಎಸ್ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಒಬ್ಬರು, ಹಾವೇರಿಯ ಒಬ್ಬರು ಮತ್ತು ಬೆಳಗಾವಿಯ ಒಬ್ಬರು ಸೇರಿದಂತೆ ಮೂವರು ಎಫ್ಎಸ್ಎಲ್ ತಜ್ಞ ವೈದ್ಯರನ್ನು ಒಳಗೊಂಡ ಮೆಡಿಕಲ್ ಬೋರ್ಡ್ ರಚಿಸಲಾಗಿದೆ. ನವೆಂಬರ್ 17ರಂದು ಸಂಜೆ ಈ ತಂಡ ಎಸ್ಐಟಿ ಅಧಿಕಾರಿಗಳೊಂದಿಗೆ ಧರ್ಮಸ್ಥಳದ ಮಣ್ಣಸಂಕ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ 2012ರಲ್ಲಿ ಸೌಜನ್ಯಾಳ ಮೃತದೇಹ ಪತ್ತೆಯಾದ ಸಂದರ್ಭದ ಫೋಟೋಗಳು ಮತ್ತು ವಿಡಿಯೋಗಳನ್ನು ಮುಂದಿಟ್ಟುಕೊಂಡು ಸ್ಥಳದ ಭೌಗೋಳಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಲಾಗಿದೆ. ಅಂದು ಮೃತದೇಹ ಯಾವ ಸ್ಥಿತಿಯಲ್ಲಿತ್ತು? ಯಾವ ಜಾಗದಲ್ಲಿ ಪತ್ತೆಯಾಗಿತ್ತು? ಸುತ್ತಮುತ್ತಲಿನ ಪರಿಸರ ಹೇಗಿತ್ತು? ಮೃತದೇಹ ಪತ್ತೆಯಾದ ಸ್ಥಳ ಮತ್ತು ಕೊಲೆ ನಡೆದಿರಬಹುದಾದ ಸ್ಥಳದ ನಡುವೆ ವ್ಯತ್ಯಾಸವಿದೆಯೇ? ಇಂತಹ ಪ್ರಶ್ನೆಗಳಿಗೆ ವೈದ್ಯಕೀಯ ಮತ್ತು ಫಾರೆನ್ಸಿಕ್ ದೃಷ್ಟಿಯಿಂದ ಉತ್ತರ ಹುಡುಕುವುದು ಈ ಪರಿಶೀಲನೆಯ ಉದ್ದೇಶವಾಗಿದೆ.
ಹಾಗಂತ ಮೃತದೇಹ ಸಿಕ್ಕ ಜಾಗವನ್ನೇ ಕೊಲೆ ನಡೆದ ಸ್ಥಳ ಎಂದು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ವೈದ್ಯಕೀಯ ವರದಿ, ಹಳೆಯ ಸಾಕ್ಷ್ಯಗಳು ಮತ್ತು ಸ್ಥಳದ ಪರಿಶೀಲನೆ ಎಲ್ಲವನ್ನೂ ಒಟ್ಟಿಗೆ ವಿಶ್ಲೇಷಿಸಿದ ನಂತರವೇ ಈ ಬಗ್ಗೆ ಸ್ಪಷ್ಟತೆ ಸಿಗುತ್ತೆ.
ಹಳೆಯ ಸಾಕ್ಷ್ಯಗಳಲ್ಲಿ ಯಾವೆಲ್ಲಾ ಸುಳಿವುಗಳಿವೆ?
ಇನ್ನು ಈ ಪ್ರಕರಣದಲ್ಲಿ ಎಸ್ಐಟಿ ಗಮನಹರಿಸಿರುವ ಪ್ರಮುಖ ಅಂಶಗಳೆಂದರೆ ಹಳೆಯ ಫಾರೆನ್ಸಿಕ್ ಸಾಕ್ಷ್ಯಗಳು. ಯಾಕೆಂದರೆ 14 ವರ್ಷಗಳ ಹಿಂದೆ ತನಿಖೆ ನಡೆದಾಗ ಕೆಲವು ಸಾಕ್ಷ್ಯಗಳನ್ನು ಸರಿಯಾಗಿ ಸಂಗ್ರಹಿಸಿಲ್ಲ, ಸಂಗ್ರಹಿಸಿದ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಿಲ್ಲ ಎಂಬ ಗಂಭೀರ ಆರೋಪವಿದೆ.
ಅಷ್ಟೇ ಅಲ್ಲ, ಈ ಹಿಂದೆ ಸಂಗ್ರಹಿಸಲಾಗಿದ್ದ ಯೋನಿ ಸ್ವ್ಯಾಬ್ ಮಾದರಿಯನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸದ ಕಾರಣ ಪರೀಕ್ಷೆಗೆ ತೊಂದರೆಯಾಗಿತ್ತು ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯ ವಿಡಿಯೋ ಮಾಡದಿರುವುದು, ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳದಿರುವುದು ಸೇರಿದಂತೆ ಹಲವು ಲೋಪಗಳ ಬಗ್ಗೆಯೂ ನ್ಯಾಯಾಲಯ ಪ್ರಶ್ನೆ ಎತ್ತಿದೆ. ಹೀಗಾಗಿ ಈಗಿನ ಎಸ್ಐಟಿ ಕೇವಲ ಮಣ್ಣಸಂಕದ ಸ್ಥಳವನ್ನಷ್ಟೇ ಪರಿಶೀಲಿಸುತ್ತಿಲ್ಲ. ಹಳೆಯ ವೈದ್ಯಕೀಯ ವರದಿಗಳು, ಮರಣೋತ್ತರ ಪರೀಕ್ಷೆಯ ದಾಖಲೆಗಳು, ಬಟ್ಟೆಗಳು, ಕೂದಲಿನ ಮಾದರಿಗಳು, ಡಿಎನ್ಎ ಸಾಕ್ಷ್ಯಗಳು ಮತ್ತು ಈ ಹಿಂದಿನ ತನಿಖೆಯಲ್ಲಿ ಸಂಗ್ರಹಿಸಿದ ಪ್ರತಿಯೊಂದು ದಾಖಲೆಯನ್ನು ಮರುಪರಿಶೀಲಿಸುವ ಕೆಲಸ ಮಾಡುತ್ತಿದೆ.
14 ವರ್ಷಗಳ ಬಳಿಕ ಈಗ ಸಾಕ್ಷ್ಯ ಸಿಗಲು ಸಾಧ್ಯವೇ?
ಸ್ನೇಹಿತರೇ ಇಲ್ಲಿ ಒಂದು ದೊಡ್ಡ ಪ್ರಶ್ನೆ ಎದುರಾಗುತ್ತದೆ. 2012ರಲ್ಲಿ ನಡೆದ ಕೊಲೆಯ ಬಗ್ಗೆ 2026ರಲ್ಲಿ ತನಿಖೆ ನಡೆಸುವಾಗ ಹೊಸ ಸಾಕ್ಷ್ಯ ಸಿಗಲು ಸಾಧ್ಯವೇ? ಅನ್ನೋದು.. ನಿಜ ಹೇಳಬೇಕೆಂದರೆ, 14 ವರ್ಷಗಳ ಬಳಿಕ ಘಟನಾ ಸ್ಥಳದಲ್ಲಿ ಹೊಸ ಜೈವಿಕ ಸಾಕ್ಷ್ಯ ಸಿಗುವುದು ಕಷ್ಟ. ಮಳೆ, ಗಾಳಿ, ಪರಿಸರ ಬದಲಾವಣೆ ಮತ್ತು ಮಾನವ ಚಟುವಟಿಕೆಗಳಿಂದ ಹಳೆಯ ಸಾಕ್ಷ್ಯಗಳು ನಾಶವಾಗಿರಬಹುದು ಅಥವಾ ಕಲುಷಿತವಾಗಿರಬಹುದು. ಆದರೆ ಈಗಿನ ತನಿಖೆಗೆ ಒಂದು ಅನುಕೂಲವಿದೆ. ಹಿಂದಿನ ತನಿಖೆಗಳಲ್ಲಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಕೆಲವು ಸಾಕ್ಷ್ಯಗಳು ಇನ್ನೂ ದಾಖಲೆಗಳ ರೂಪದಲ್ಲಿ ಲಭ್ಯವಿವೆ. ಅವುಗಳಲ್ಲಿ ಉಳಿದಿರುವ ಮಾದರಿಗಳನ್ನು ಮತ್ತೆ ವೈಜ್ಞಾನಿಕವಾಗಿ ಪರೀಕ್ಷಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬಹುದು.
ಇದಲ್ಲದೆ, 2012ರ ಸುತ್ತಮುತ್ತಲಿನ ಹಳೆಯ ಫೋಟೋಗಳು, ವಿಡಿಯೋಗಳು, ವೈದ್ಯಕೀಯ ದಾಖಲೆಗಳು, ಸಾಕ್ಷಿಗಳ ಹೇಳಿಕೆಗಳು, ಲಭ್ಯವಿರುವ ದೂರವಾಣಿ ಕರೆಗಳ ದಾಖಲೆಗಳು ಮತ್ತು ಇತರ ಡಿಜಿಟಲ್ ಮಾಹಿತಿಗಳನ್ನು ಪರಿಶೀಲಿಸುವ ಮೂಲಕ ಹೊಸ ಸುಳಿವು ಸಿಗುವ ಸಾಧ್ಯತೆಯಿದೆ. ಅಂದರೆ ಹೊಸ ಸಾಕ್ಷ್ಯ ಎಂದರೆ ಘಟನಾ ಸ್ಥಳದಲ್ಲೇ ಸಿಗಬೇಕು ಎಂದೇನಿಲ್ಲ. ಹಳೆಯ ಸಾಕ್ಷ್ಯಗಳಲ್ಲಿರುವ ಹೊಸ ಮಾಹಿತಿ ಕೂಡ ತನಿಖೆಗೆ ದೊಡ್ಡ ತಿರುವು ನೀಡಬಹುದು.
ವರದಿಗಳ ಪ್ರಕಾರ ಅಕ್ಟೋಬರ್ 23ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ಸೌಜನ್ಯಾಳ ತಾಯಿಯ ರಕ್ತದ ಮಾದರಿಯನ್ನು ಡಿಎನ್ಎ ವಿಶ್ಲೇಷಣೆಗಾಗಿ ಸಂಗ್ರಹಿಸಲಾಗಿದೆ. ಹಳೆಯ ಮಾದರಿಗಳ ಡಿಎನ್ಎ ಹೊಂದಾಣಿಕೆಗೆ ಇದು ಸಹಾಯ ಮಾಡಬಹುದು. ಇದು ಎಸ್ಐಟಿ ವೈಜ್ಞಾನಿಕ ಮಾರ್ಗದಲ್ಲಿ ಸಾಗುತ್ತಿದೆ
Full Gfx: ಯಾರಿಗೆಲ್ಲ ನೋಟಿಸ್ ನೀಡಲಾಗಿದೆ? ಮುಂದೆ ಯಾರ ವಿಚಾರಣೆ?
ಈಗಾಗಲೇ ಎಸ್ಐಟಿ ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ವಿಚಾರಣೆಯನ್ನು ಆರಂಭಿಸಿದೆ. ಸ್ಥಳೀಯ ಪೊಲೀಸರು, ಸಿಐಡಿ ಮತ್ತು ಹಿಂದಿನ ತನಿಖಾ ತಂಡಗಳಲ್ಲಿ ಕೆಲಸ ಮಾಡಿದ್ದ 15ಕ್ಕೂ ಹೆಚ್ಚು ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅಕ್ಟೋಬರ್ 29ರಂದು ಎಂಟು ಮಂದಿ ಪೊಲೀಸ್ ಸಿಬ್ಬಂದಿ ಎಸ್ಐಟಿ ಮುಂದೆ ಹಾಜರಾಗಿದ್ದರು. ಹಿಂದಿನ ತನಿಖೆಯಲ್ಲಿ ಯಾವ ಕ್ರಮ ಕೈಗೊಳ್ಳಲಾಗಿತ್ತು? ಯಾವ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು? ಯಾವ ಸಾಕ್ಷ್ಯಗಳನ್ನು ಕೈಬಿಡಲಾಗಿತ್ತು? ತನಿಖೆಯ ದಿಕ್ಕು ಬದಲಾದ ಸಂದರ್ಭಗಳೇನಾದರೂ ಇದ್ದವೇ? ಇಂತಹ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
ಇನ್ನು ಸೌಜನ್ಯಾಳ ಕುಟುಂಬದವರ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗಿದೆ. ನವೆಂಬರ್ 12ರಂದು ತಾಯಿ ಕುಸುಮಾವತಿ ಅವರ ಹೇಳಿಕೆ ದಾಖಲಿಸಲಾಗಿದ್ದು, ನವೆಂಬರ್ 14ರಂದು ಸೌಜನ್ಯಾಳ ಸಂಬಂಧಿ ವಿಠಲ್ ಗೌಡ ಸೇರಿದಂತೆ ಐವರು ಸಾಕ್ಷಿಗಳ ಹೇಳಿಕೆಗಳನ್ನು ಎಸ್ಐಟಿ ದಾಖಲಿಸಿಕೊಂಡಿದೆ ಎಂಬ ವರದಿಗಳಿವೆ.ಮುಂದಿನ ಹಂತದಲ್ಲಿ ಹಿಂದಿನ ತನಿಖೆಯ ವೈದ್ಯರು, ಫಾರೆನ್ಸಿಕ್ ತಜ್ಞರು, ತನಿಖಾಧಿಕಾರಿಗಳು ಮತ್ತು ಪ್ರಮುಖ ಸಾಕ್ಷಿಗಳನ್ನು ಮತ್ತೆ ವಿಚಾರಣೆ ಮಾಡುವ ಸಾಧ್ಯತೆಯಿದೆ.
ಈ ಪ್ರಕರಣದಲ್ಲಿ ಇನ್ನೂ ಕೆಲವು ಪ್ರಶ್ನೆಗಳು ಉತ್ತರಕ್ಕಾಗಿ ಕಾಯುತ್ತಿವೆ. ಯಾವೆಲ್ಲಾ ಪ್ರಶ್ನೆ ಅನ್ನೋದ್ದನ್ನ ನೋಡೋಣ.
ಸೌಜನ್ಯ ಕೇಸ್ನಲ್ಲಿ ಉತ್ತರ ಸಿಗಬೇಕಾದ ಪ್ರಶ್ನೆಗಳು?
- ಸೌಜನ್ಯಳ ಮೇಲೆ ಅ*ತ್ಯಾಚಾರ ಮತ್ತು ಕೊಲೆ ನಡೆದದ್ದು ಮಣ್ಣಸಂಕದಲ್ಲೇನಾ?
- ಬೇರೆ ಯಾವುದಾದರೂ ಸ್ಥಳದಲ್ಲಿ ಕೃತ್ಯ ಎಸಗಿ ಮೃತದೇಹವನ್ನು ಇಲ್ಲಿ ತಂದು ಹಾಕಲಾಗಿತ್ತಾ?
- ಮೃತದೇಹ ಪತ್ತೆಯಾದಾಗಿನ ಸ್ಥಿತಿ ಮತ್ತು ವೈದ್ಯಕೀಯ ವರದಿಗಳ ನಡುವೆ ಏನಾದರೂ ವ್ಯತ್ಯಾಸಗಳಿವೆಯೇ?
- ಹಿಂದಿನ ತನಿಖೆಯಲ್ಲಿ ಸಂಗ್ರಹಿಸಬೇಕಿದ್ದ ಪ್ರಮುಖ ಫಾರೆನ್ಸಿಕ್ ಸಾಕ್ಷ್ಯಗಳನ್ನು ಸಂಗ್ರಹಿಸದೇ ಇರಲು ಕಾರಣವೇನು?
- ಕೆಲವು ಸಾಕ್ಷ್ಯಗಳನ್ನು ಸರಿಯಾಗಿ ಸಂರಕ್ಷಿಸದೇ ಇರುವುದಕ್ಕೆ ನಿರ್ಲಕ್ಷ್ಯ ಕಾರಣವೇ ಅಥವಾ ಉದ್ದೇಶಪೂರ್ವಕ ಪ್ರಮಾದವೇ?
- ಪ್ರಕರಣದ ಆರಂಭಿಕ ತನಿಖೆಯಲ್ಲಿ ಯಾವುದಾದರೂ ಪ್ರಮುಖ ಸುಳಿವುಗಳನ್ನು ಕಡೆಗಣಿಸಲಾಗಿತ್ತಾ?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಿದೆ. ಅದರಲ್ಲೂ ವೈದ್ಯರ ಮೆಡಿಕಲ್ ಬೋರ್ಡ್ ನೀಡುವ ವರದಿ ಇಲ್ಲಿ ನಿರ್ಣಾಯಕವಾಗಬಹುದು.
ಒಂದು ವೇಳೆ ಮೃತದೇಹ ಸಿಕ್ಕ ಜಾಗದಲ್ಲೇ ಕೊಲೆ ನಡೆದಿಲ್ಲ ಎಂಬುದಕ್ಕೆ ವೈದ್ಯಕೀಯ ಮತ್ತು ಫಾರೆನ್ಸಿಕ್ ಆಧಾರಗಳು ಸಿಕ್ಕರೆ, ಎಸ್ಐಟಿ ತನಿಖೆಯ ದಿಕ್ಕೇ ಬದಲಾಗಬಹುದು. ಹಾಗೆಯೇ ಅದೇ ಸ್ಥಳದಲ್ಲಿ ಕೊಲೆ ನಡೆದಿರುವ ಸಾಧ್ಯತೆಗೆ ಪೂರಕವಾದ ಸಾಕ್ಷ್ಯಗಳು ಸಿಕ್ಕರೂ ತನಿಖೆಗೆ ಮಹತ್ವದ ಸುಳಿವು ಸಿಗಲಿದೆ. ಆದರೆ ಈ ತಂಡದ ವರದಿಯೊಂದೇ ಕೊಲೆ ನಡೆದ ಜಾಗವನ್ನು ಅಂತಿಮವಾಗಿ ಸಾಬೀತುಪಡಿಸುವುದಿಲ್ಲ. ಇತರ ಸಾಕ್ಷ್ಯಗಳೊಂದಿಗೆ ಅದನ್ನು ತಾಳೆ ಹಾಕಬೇಕಾಗುತ್ತದೆ.
ಸುಪ್ರೀಂ ಕೋರ್ಟ್ ನೀಡಿರುವ ಗಡುವಿನೊಳಗೆ ತನಿಖೆ ಮುಗಿಯುತ್ತಾ?
ಇನ್ನು ಈ ಪ್ರಕರಣದಲ್ಲಿ ಅತ್ಯಂತ ಪ್ರಮುಖವಾದದ್ದು ಸುಪ್ರೀಂ ಕೋರ್ಟ್ ನೀಡಿರುವ ಮೂರು ತಿಂಗಳ ಗಡುವು. 2026ರ ಸೆಪ್ಟೆಂಬರ್ 21ರಂದು ಸುಪ್ರೀಂ ಕೋರ್ಟ್ ಸೌಜನ್ಯಾ ಪ್ರಕರಣದ ಮರುತನಿಖೆಗೆ ಆದೇಶ ನೀಡಿತ್ತು. ಹೊಸದಾಗಿ ರಚನೆಯಾದ ಎಸ್ಐಟಿ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಅಂದರೆ ಡಿಸೆಂಬರ್ 21ರ ವೇಳೆಗೆ ಈ ಗಡುವು ಮುಕ್ತಾಯವಾಗಲಿದೆ.
ಇಲ್ಲಿ ಮತ್ತೊಂದು ಪ್ರಮುಖ ವಿಚಾರವಿದೆ. ಈ ಹಿಂದಿನ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದೆ. ಸುಪ್ರೀಂ ಕೋರ್ಟ್ ಕೂಡ ಅವರ ವಿರುದ್ಧ ಮತ್ತೆ ತನಿಖೆ ಅಥವಾ ವಿಚಾರಣೆ ನಡೆಸಬಾರದು ಎಂದು ಸ್ಪಷ್ಟಪಡಿಸಿದೆ. ಹಾಗಾಗಿ ಈಗಿನ ತನಿಖೆಯ ಗಮನ ಬೇರೆ ಸಾಕ್ಷ್ಯಗಳು, ಹಿಂದಿನ ತನಿಖೆಯ ಲೋಪಗಳು ಮತ್ತು ನಿಜವಾದ ಅಪರಾಧಿಯನ್ನು ಪತ್ತೆಹಚ್ಚುವುದರ ಮೇಲಿದೆ.
ಇನ್ನು ಮೂರು ತಿಂಗಳ ಗಡುವಿನೊಳಗೆ ತನಿಖೆ ಮುಗಿಯುತ್ತಾ ಎಂಬ ಪ್ರಶ್ನೆಗೆ ಈಗಲೇ ಖಚಿತ ಉತ್ತರ ನೀಡಲು ಸಾಧ್ಯವಿಲ್ಲ. ಯಾಕೆಂದರೆ ವೈದ್ಯಕೀಯ ವರದಿ ಬರಬೇಕು, ಹಳೆಯ ಸಾಕ್ಷ್ಯಗಳನ್ನು ಪರಿಶೀಲಿಸಬೇಕು, ಸಾಕ್ಷಿಗಳ ಹೇಳಿಕೆಗಳನ್ನು ತಾಳೆ ಹಾಕಬೇಕು. ಹೊಸ ಸುಳಿವು ಸಿಕ್ಕರೆ ಅದರ ಹಿಂದೆಯೂ ತನಿಖೆ ನಡೆಸಬೇಕಾಗುತ್ತದೆ.ಆದರೆ ಸುಪ್ರೀಂ ಕೋರ್ಟ್ ವಿಧಿಸಿರುವ ಗಡುವಿನೊಳಗೆ ತನಿಖೆಯ ಪ್ರಗತಿ ವರದಿ ಸಲ್ಲಿಸುವ ಜವಾಬ್ದಾರಿ ಎಸ್ಐಟಿಯ ಮೇಲಿದೆ.
ಒಟ್ಟಿನಲ್ಲಿ 14 ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿರುವ ಸೌಜನ್ಯಾ ಪ್ರಕರಣದಲ್ಲಿ ಈಗಿನ ತನಿಖೆ ಅತ್ಯಂತ ನಿರ್ಣಾಯಕ ಹಂತ ತಲುಪುತ್ತಿದೆ. ವಿಶೇಷವಾಗಿ ಮಣ್ಣಸಂಕದಲ್ಲಿ ನಡೆದಿರುವ ವೈದ್ಯಕೀಯ ತಜ್ಞರ ಪರಿಶೀಲನೆ, ಹಳೆಯ ಫಾರೆನ್ಸಿಕ್ ಸಾಕ್ಷ್ಯಗಳ ಮರುಪರಿಶೀಲನೆ ಮತ್ತು ಹಿಂದಿನ ತನಿಖಾಧಿಕಾರಿಗಳ ವಿಚಾರಣೆ ಈ ಪ್ರಕರಣಕ್ಕೆ ಹೊಸ ಆಯಾಮ ನೀಡುವ ಸಾಧ್ಯತೆಯಿದೆ. ಸೌಜನ್ಯಾಳಿಗೆ ನ್ಯಾಯ ಸಿಗಬೇಕು. ನಿಜವಾದ ಅಪರಾಧಿ ಯಾರು ಎಂಬುದು ಸಾಕ್ಷ್ಯಾಧಾರಗಳ ಮೂಲಕ ಬಹಿರಂಗವಾಗಬೇಕು. ಹಿಂದಿನ ತನಿಖೆಯಲ್ಲಿ ಲೋಪಗಳಾಗಿದ್ದರೆ ಅದಕ್ಕೂ ಉತ್ತರ ಸಿಗಬೇಕು.

ನೋಡಿರಿ

