ದಾಖಲೆ ಮುರಿದರೆ ಫೆರಾರಿ ಕಾರು ಕೊಡಿಸೋದಾಗಿ ಅಪ್ಪನ ಸವಾಲು –ಆರ್ಯವೀರ್ ಸೆಹ್ವಾಗ್ ಕೈ ತಪ್ಪಿದ ಕಾರು..!

ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಮತ್ತು ಅವರ ಮಗ ಆರ್ಯವೀರ್ ಸೆಹ್ವಾಗ್ ಬಾಂಧವ್ಯ ಅಭಿಮಾನಿಗಳ ಮನಗೆದ್ದಿದೆ. ಇದೀಗ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಹೊರಬಿದ್ದಿದೆ. ತನ್ನ ದಾಖಲೆ ಮುರಿದರೆ ಬ್ರ್ಯಾಂಡ್ ನ್ಯೂ ಫೆರಾರಿ ಕಾರು ಉಡುಗೊರೆಯಾಗಿ ಸಿಗಲಿದೆ ಎಂದು ವೀರೇಂದ್ರ ಸೆಹ್ವಾಗ್ ಸವಾಲ್ ಹಾಕಿದ್ದರು. ಇದಕ್ಕಾಗಿ ಆರ್ಯವೀರ್ ಪರಿಶ್ರಮ ಹಾಕಿದ್ದರು.
ಇದನ್ನೂ ಓದಿ:ನಿನ್ನ ಪಾದಗಳು ಯಾವಾಗಲೂ ನೆಲದ ಮೇಲೆಯೇ ಭದ್ರವಾಗಿರಲಿ – ಪ್ರತಿಭೆಯಿಂದ ನೀನು ಆಕಾಶವನ್ನು ಮುಟ್ಟುವಂತಾಗಲಿ
ಅಂಡರ್-19 ಏಷ್ಯಾಕಪ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ಯವೀರ್ ಸೆಹ್ವಾಗ್ ಅಪ್ಪನ ಮುಂದೆ ಸೋತಿದ್ದಾರೆ. ವೀರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ 319 ರನ್‌ಗಳ ವೈಯಕ್ತಿಕ ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ. ಇದೇ ದಾಖಲೆಯನ್ನು ತಮ್ಮ ಮಕ್ಕಳು ಮುರಿದರೆ ಫೆರಾರಿ ಕಾರು ಉಡುಗೊರೆಯಾಗಿ ನೀಡುವುದಾಗಿ ಈ ಹಿಂದೆ ತಮಾಷೆಯಾಗಿ ಸವಾಲು ಹಾಕಿದ್ದರು. ಶಾಲಾ ಕ್ರಿಕೆಟ್‌ನಲ್ಲಾದರೂ 319 ರನ್‌ಗಳ ಗಡಿ ದಾಟಿದರೆ ಉಡುಗೊರೆ ಸಿಗಲಿದೆ ಎಂಬುದು ಅವರ ಮಾತಾಗಿತ್ತು. 2024ರಲ್ಲಿ ನಡೆದ ಕೂಚ್ ಬೆಹಾರ್ ಟ್ರೋಫಿಯಲ್ಲಿ ದೆಹಲಿ ಪರ ಆಡಿದ್ದ ಆರ್ಯವೀರ್, ಮೇಘಾಲಯ ವಿರುದ್ಧ ಬರೋಬ್ಬರಿ 297 ರನ್ ಸಿಡಿಸಿದ್ದರು. 309 ಎಸೆತಗಳನ್ನು ಎದುರಿಸಿ 51 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಆದರೆ ತಂದೆಯ ದಾಖಲೆಯನ್ನು ಮುರಿಯಲು ಇನ್ನೂ 23 ರನ್‌ಗಳ ಅಗತ್ಯವಿದ್ದಾಗ ಔಟಾಗುತ್ತಾರೆ.. ಈ ಬಗ್ಗೆ ಸೆಹ್ವಾಗ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಗನನ್ನು ಅಭಿನಂದಿಸುತ್ತಾ, ‘ಫೆರಾರಿಯನ್ನು 23 ರನ್‌ಗಳಿಂದ ಮಿಸ್ ಮಾಡಿಕೊಂಡೆ’ ಎಂದು ತಮಾಷೆ ಮಾಡಿದ್ದರು.
ಫೆರಾರಿ ಗೆಲ್ಲುವ ಅವಕಾಶ ಕೈತಪ್ಪಿದರೂ ಆರ್ಯವೀರ್ ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ. 2026ರ ಅಂಡರ್-19 ಏಷ್ಯಾಕಪ್‌ನಲ್ಲಿ ಅವರು ತೋರಿದ ಪ್ರದರ್ಶನ ಇದಕ್ಕೆ ಸಾಕ್ಷಿ. ನೇಪಾಳ ವಿರುದ್ಧ 70 ರನ್ ಗಳಿಸಿ ಟೂರ್ನಿ ಆರಂಭಿಸಿದ ಅವರು, ಯುಎಇ ವಿರುದ್ಧ 160 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಅಫ್ಘಾನಿಸ್ತಾನ ವಿರುದ್ಧದ ಸೆಮಿಫೈನಲ್‌ನಲ್ಲಿ 51 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲೂ 58 ರನ್ ಗಳಿಸಿ ತಮ್ಮ ಜವಾಬ್ದಾರಿ ನಿಭಾಯಿಸಿದರು. ಐದು ಇನ್ನಿಂಗ್ಸ್‌ಗಳಲ್ಲಿ 361 ರನ್ ಗಳಿಸಿದ ಅವರು ಟೂರ್ನಿಯ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡು ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
ಇದೀಗ ಮತ್ತೆ ವೀರೇಂದ್ರ ಸೆಹ್ವಾಗ್ ಮತ್ತು ಆರ್ಯವೀರ್ ಸೆಹ್ವಾಗ್ ನಡುವಿನ ಈ ಸ್ವಾರಸ್ಯಕರ ಸವಾಲು ಸೌಂಡ್ ಮಾಡುತ್ತಿದೆ. ಅಪ್ಪ ಮತ್ತು ಮಗನ ನಡುವಿನ ಚಾಲೆಂಜ್ ಮುಂದುವರಿಯಲಿ.. ಸವಾಲಿನಲ್ಲಿ ಆರ್ಯವೀರ್ ಗೆಲ್ಲಲಿ, ಫೆರಾರಿ ಕಾರು ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ನೋಡಿರಿ

