IPLಗೆ ಮತ್ತೆ ಬಾಂಗ್ಲಾ ಪ್ಲೇಯರ್ಸ್ – ಮಿನಿ ಆಕ್ಷನ್ ಗೆ ರೆಹಮಾನ್ ರೀ ಎಂಟ್ರಿ
ಗ್ರೀನ್ ಸಿಗ್ನಲ್ ನೀಡಿದ್ದೇಕೆ BCCI?

2027ರ ಐಪಿಎಲ್ ಮಿನಿ ಆಕ್ಷನ್ಗೆ ಇನ್ನೊಂದೇ ತಿಂಗಳು ಬಾಕಿ. ಡಿಸೆಂಬರ್ 16ಕ್ಕೆ ಗೋವಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ವಿಶ್ವದ ಶ್ರೀಮಂತ ಲೀಗ್ನಲ್ಲಿ ಆಡೋಕೆ ಈಗಾಗ್ಲೇ ವಿದೇಶಿ ಪ್ಲೇಯರ್ಸ್ ಕೂಡ ತಮ್ಮ ಹೆಸ್ರನ್ನ ರಿಜಿಸ್ಟರ್ ಮಾಡಿಕೊಳ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಬಾಂಗ್ಲಾ ಆಟಗಾರರಿಗೆ ಐಪಿಎಲ್ ಬಾಗಿಲು ಮತ್ತೆ ಓಪನ್ ಆಗಿದೆ.
ಇದನ್ನೂ ಓದಿ : ODI ಆಫರ್ ಕೈಬಿಟ್ಟ ಪಾಟಿದಾರ್ – ಭಾರತದ ಬಾಗಿಲು ಶಾಶ್ವತ ಬಂದ್?
2026ರ ಐಪಿಎಲ್ಗೂ ಮುನ್ನ ಬಾಂಗ್ಲಾದೇಶದ ಆಟಗಾರ ಮುಸ್ತಫಿಜುರ್ ರೆಹಮಾನ್ರನ್ನ ಕೆಕೆಆರ್ ಫ್ರಾಂಚೈಸಿ 9.20 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದ್ರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸೆಗಳು ಜಾಸ್ತಿಯಾದ ಬೆನ್ನಲ್ಲೇ ಭಾರತದಲ್ಲಿ ಬಾಂಗ್ಲಾ ಆಟಗಾರರಿಗೆ ಐಪಿಎಲ್ ಆಡಲು ಅವಕಾಶ ನೀಡಬಾರದು ಅಂತಾ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ವೇಳೆ ಬಿಸಿಸಿಐ ಸೂಚನೆ ಬೆನ್ನಲ್ಲೇ 2026ರ ಜನವರಿಯಲ್ಲಿ ಕೆಕೆಆರ್ ಫ್ರಾಂಚೈಸಿ ರೆಹಮಾನ್ರನ್ನ ತಂಡದಿಂದ ಕೈಬಿಟ್ಟಿತ್ತು. ಇದಾದ ಮೇಲೆ ದೊಡ್ಡ ಹೈಡ್ರಾಮಾವೇ ನಡೆದಿತ್ತು. ಯಾವಾಗ ತಮ್ಮ ದೇಶದ ಆಟಗಾರನನ್ನ ಐಪಿಎಲ್ನಲ್ಲಿ ಖರೀದಿ ಮಾಡಿ ಟೂರ್ನಿ ಆರಂಭಕ್ಕೂ ಮೊದ್ಲೇ ಕೈಬಿಟ್ರೋ ಇದ್ರಿಂದ ಸಿಟ್ಟಾದ ಬಾಂಗ್ಲಾ ಕ್ರಿಕೆಟ್ ಮಂಡಳಿ ಬಿಸಿಸಿಐ ನಮ್ಮ ಆಟಗಾರನಿಗೆ ಅವಮಾನ ಮಾಡಿದ್ರು. ಭಾರತದಲ್ಲಿ ನಡೆಯಲಿರೋ 2026ರ ಟಿ-20 ವಿಶ್ವಕಪ್ನಲ್ಲಿ ಆಡಲು ನಾವೂ ಕೂಡ ಭಾರತಕ್ಕೆ ಕಾಲಿಡಲ್ಲ. ನಮ್ಮ ಪಂದ್ಯಗಳನ್ನ ಲಂಕಾಗೆ ಶಿಫ್ಟ್ ಮಾಡಿ ಅಂತಾ ವರಸೆ ತೆಗೆದಿದ್ರು. ಈ ವೇಳೆ ನರಿಬುದ್ಧಿಯ ಪಾಕಿಸ್ತಾನ ಕೂಡ ನಾವು ಬಾಂಗ್ಲಾ ಬೆನ್ನಿಗೆ ಇದ್ದೇವೆ ಅಂತಾ ಬೇಳೆ ಬೇಯಿಸಿಕೊಳ್ಳೋಕೆ ನೋಡಿತ್ತು. ಆದ್ರೆ ಇದ್ಯಾವುದಕ್ಕೂ ಬಿಸಿಸಿಐ ಬಗ್ಗದೇ ಇದ್ದಾಗ ಕೊನೆಗೆ ಟೂರ್ನಮೆಂಟ್ನಿಂದಲೇ ಬಾಂಗ್ಲಾ ಹಿಂದೆ ಸರಿದಿತ್ತು. ಆದ್ರೀಗ 2027 ಐಪಿಎಲ್ಗೆ ಮತ್ತೆ ಬಾಂಗ್ಲಾ ಪ್ಲೇಯರ್ಸ್ ಎಂಟ್ರಿ ಕೊಡ್ತಿದ್ದಾರೆ.
2027ರ ಐಪಿಎಲ್ ಮಿನಿ ಹರಾಜಿಗೆ ಸಜ್ಜಾದ ಬಾಂಗ್ಲಾ ಪ್ಲೇಯರ್ಸ್!
ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರೆಹಮಾನ್ ಐಪಿಎಲ್ 2027ರ ಮಿನಿ ಹರಾಜಿಗೆ ತಮ್ಮ ಹೆಸರನ್ನ ನೋಂದಾಯಿಸಿಕೊಳ್ಳಲು ಸಿದ್ಧರಾಗಿದ್ದಾರೆ ಅಂತಾ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೇ ಮಾಹಿತಿ ನೀಡಿದೆ. ಹರಾಜಿನಲ್ಲಿ ಭಾಗವಹಿಸೋದಾಗಿ ಹೇಳಿದ್ರಿಂದ ಬಿಸಿಬಿ ಕೂಡ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ಅಷ್ಟೇ ಅಲ್ಲ ರೆಹಮಾನ್ ಜೊತೆ ಬಾಂಗ್ಲಾ ಆಟಗಾರರಾದ ನಹಿದ್ ರಾಣಾ, ರಿಶಾದ್ ಹೊಸೈನ್, ಹಸನ್ ಮಹ್ಮೂದ್, ತೌಹಿದ್ ಹೃದೋಯ್, ಟಸ್ಕಿನ್ ಅಹ್ಮದ್ ಮತ್ತು ಶೋರಿಫುಲ್ ಇಸ್ಲಾಂ ಸೇರಿದಂತೆ ಬಾಂಗ್ಲಾದೇಶದ ಇನ್ನೂ ಹಲವು ಕ್ರಿಕೆಟಿಗರು ಕೂಡ ಹರಾಜಿಗಾಗಿ ನೋಂದಾಯಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಬಿಸಿಸಿಐ ಪ್ರತಿ ಕ್ರಿಕೆಟ್ ಮಂಡಳಿಯನ್ನು ಸಂಪರ್ಕಿಸಿ, ಹರಾಜಿನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಆಟಗಾರರ ಹೆಸರುಗಳನ್ನು ನೋಂದಾಯಿಸುವಂತೆ ಕೇಳಿತ್ತು. ಅದ್ರಂತೆ ಬಾಂಗ್ಲಾ ಪ್ಲೇಯರ್ಸ್ ಕೂಡ ಸಿದ್ಧರಾಗಿದ್ದಾರೆ. ಅಷ್ಟಕ್ಕೂ ಇಲ್ಲಿ ಎರಡೂ ದೇಶಗಳ ನಡುವೆ ಮುನಿಸು ಕಮ್ಮಿಯಾಗೋಕೆ ಕಾರಣವೂ ಇದೆ.
ಸರ್ಕಾರ ಬದಲಾವಣೆ ಬಳಿಕ ಎರಡೂ ದೇಶಗಳ ನಡುವೆ ಸಾಮರಸ್ಯ!
2026ರ ಫೆಬ್ರವರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಭರ್ಜರಿ ಬಹುಮತ ಪಡೆದಿದ್ದು, ಪಕ್ಷದ ಮುಖ್ಯಸ್ಥ ತಾರಿಕ್ ರೆಹಮಾನ್ ಬಾಂಗ್ಲಾದೇಶದ ನೂತನ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ್ರು. ಹಾಗೇ ಕ್ರೀಡಾ ಸಚಿವರೂ ಬದಲಾದ್ರು. ಈ ವೇಳೆ ಬಾಂಗ್ಲಾದೇಶ ಭಾರತದ ಜೊತೆ ಯಾವುದೇ ವೈರತ್ವ ಸಾಧಿಸದೆ ಸ್ನೇಹಯುತವಾಗಿ ಮುಂದುವರಿಯೋಕೆ ಮುಂದಾಗಿದ್ರು. ಹೀಗಾಗಿ ಮಾತುಕತೆ ಮೂಲಕ ಸಾಕಷ್ಟು ವಿಚಾರಗಳನ್ನ ಬಗೆಹರಿಸಿಕೊಂಡಿದ್ದಾರೆ. ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥ ಶಹರಿಯಾರ್ ನಫೀಸ್ ನೀಡಿರುವ ಮಾಹಿತಿಯ ಪ್ರಕಾರ, ಐಪಿಎಲ್ ಮಿನಿ ಹರಾಜಿಗೂ ಮುನ್ನ BCCI ಎಲ್ಲ ಕ್ರಿಕೆಟ್ ಮಂಡಳಿಗಳನ್ನು ಸಂಪರ್ಕಿಸಿ, ಹರಾಜಿನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಆಟಗಾರರ ಹೆಸರುಗಳನ್ನು ನೋಂದಾಯಿಸುವಂತೆ ಕೇಳಿದೆ. ಅಂದರೆ ಬಾಂಗ್ಲಾದೇಶಕ್ಕೆ ಮಾತ್ರ ವಿಶೇಷ ಆಹ್ವಾನ ನೀಡಿಲ್ಲ. ಇದು ಸಾಮಾನ್ಯ ಹರಾಜು ಪ್ರಕ್ರಿಯೆ ಎಂದು BCB ಸ್ಪಷ್ಟಪಡಿಸಿದೆ.
ಒಟ್ನಲ್ಲಿ ಕಳೆದ ಆವೃತ್ತಿಗೂ ಮುನ್ನ ಮುಸ್ತಫಿಜುರ್‌ನನ್ನು ಹೊರಗಿಟ್ಟಿದ್ದ BCCI ಈಗ ಮತ್ತೆ ಬಾಂಗ್ಲಾ ಆಟಗಾರರಿಗೆ ಐಪಿಎಲ್ ಬಾಗಿಲು ತೆರೆದಿದೆ. ಇದು ಕೇವಲ ಹರಾಜಿನ ಸಾಮಾನ್ಯ ಪ್ರಕ್ರಿಯೆಯೇ ಅಥವಾ ಭಾರತ–ಬಾಂಗ್ಲಾ ಕ್ರಿಕೆಟ್ ಸಂಬಂಧದಲ್ಲಿ ಹೊಸ ಅಧ್ಯಾಯವೇ? ಎನ್ನುವಂತೆ ಪ್ರಶ್ನೆಗಳೂ ಮೂಡಿವೆ. ಆದ್ರೆ ಇದೆಲ್ಲಕ್ಕಿಂತ ಅತಿದೊಡ್ಡ ಪ್ರಶ್ನೆ ಅಂದ್ರೆ ಐಪಿಎಲ್ ಫ್ರಾಂಚೈಸಿಗಳು ಬಾಂಗ್ಲಾ ಪ್ಲೇಯರ್ಗಳನ್ನ ಪಿಕ್ ಮಾಡ್ತಾರಾ ಅನ್ನೋದು. ಕಳೆದ ಬಾರಿ ರೆಹಮಾನ್ರನ್ನ ಖರೀದಿ ಮಾಡಿ ಟೂರ್ನಿ ಆರಂಭಕ್ಕೂ ಮೊದ್ಲೇ ಕೈಬಿಟ್ಟಿದ್ದ ಕೊಲ್ಕತ್ತಾ ಇದ್ರಿಂದ ಹೊರ ಆಟಗಾರನನ್ನ ರಿಪ್ಲೇಸ್ ಮಾಡಬೇಕಾಗಿ ಬಂದಿತ್ತು. ಹೀಗಾಗಿ ಮುಂದೆಯೂ ಇದೇ ರೀತಿಯ ಸಿಚುಯೇಷನ್ಸ್ ಬಂದ್ರೆ ಹೇಗೆ ಅನ್ನೋ ಭಯ ಕೂಡ ಫ್ರಾಂಚೈಸಿಗಳಿಗೆ ಇರುತ್ತೆ. ಹೀಗಾಗಿ ಬಾಂಗ್ಲಾ ಪ್ಲೇಯರ್ಸ್ ಮಿನಿ ಹರಾಜಿಗೆ ಬಂದ್ರೂ ಖರೀದಿ ಆಗ್ತಾರಾ? ಐಪಿಎಲ್ ಅಖಾಡಕ್ಕೆ ಬರ್ತಾರಾ ಅನ್ನೋದೇ ಇಲ್ಲಿರೋ ಪ್ರಶ್ನೆ.

ನೋಡಿರಿ

