ಅರಿಶಿನ ಶಾಸ್ತ್ರದ ದಿನವೇ ಮಗಳಿಗೆ ಅಂತಿಮ ವಿದಾಯ – ಮದುವೆಗೆ ಬರಬೇಕಾದವರು ಸ್ಮಶಾನಕ್ಕೆ ಬಂದರು

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಇಡೀ ಬೆಂಗಳೂರೇ ಕಂಬನಿ ಮಿಡಿದಿದೆ. ಸೋಮವಾರ ಹಸೆಮಣೆ ಏರಬೇಕಿದ್ದ ವಧು ರಸ್ತೆಯಲ್ಲಿ ಅಪ್ಪಚ್ಚಿಯಾಗಿದ್ದಳು. ಜೊತೆಗಿದ್ದ ಅತ್ತೆ ಮಗಳು ಕೂಡಾ ಸ್ಥಳದಲ್ಲೇ ಜೀವ ಬಿಟ್ಟಿದ್ದಳು. ಇವತ್ತು ಅರಿಶಿನ ಶಾಸ್ತ್ರ ನಡೆಯಬೇಕಿದ್ದ ಮದುವೆ ಮನೆಯಲ್ಲಿ ಮದುಮಗಳ ಅಂತಿಮಕಾರ್ಯ ನಡೆದಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘೋರ ಕೃತ್ಯ – ಪತ್ನಿ, ಅತ್ತೆ ಸೇರಿದಂತೆ 7 ಮಂದಿಯನ್ನು ಹ***ತ್ಯೆಗೈದ ಕ್ಯಾಬ್ ಡ್ರೈವರ್
ವಿಧಿ ಬರಹ ಎಂಥಾ ಘೋರ ಎಂದು ಹೇಳುವುದು ಇದಕ್ಕೆ. ಹೆತ್ತವರು ಮಗಳ ಮದುವೆಯ ಸಂಭ್ರಮದಲ್ಲಿದ್ದರು. ವಧು ಕೂಡಾ ಸೋಮವಾರ ತಾನು ಮೆಚ್ಚಿದ ಹುಡುಗನ ಮಡದಿಯಾಗಬೇಕಿತ್ತು. ಇವತ್ತು ಮನೆಯಲ್ಲಿ ಅರಿಶಿನ ಶಾಸ್ತ್ರ ನಡೆಯಬೇಕಿತ್ತು. ಆದರೆ ನಿನ್ನೆ (ಬುಧವಾರ) ಸಿಂಧುಶ್ರೀ ಮತ್ತು ಅತ್ತೆ ಮಗಳು ಮಗಳು ವಿದ್ಯಾ ಮದುವೆ ಆಮಂತ್ರಣ ಪತ್ರಿಕೆ ಹಂಚಲು ಹೋಗುತ್ತಿದ್ದರು. ನಿನ್ನೆ (ನವೆಂಬರ್11, ಬುಧವಾರ) ಸುಮಾರು 3:30ರ ವೇಳೆಗೆ ಮೈಸೂರು ರಸ್ತೆಯ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಬಳಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಅತಿ ವೇಗವಾಗಿ ಬಂದ ಟ್ರಕ್ ಇವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದಿದ್ದು, ಟ್ರಕ್ನ ಚಕ್ರ ಇಬ್ಬರ ತಲೆಯ ಮೇಲೆಯೇ ಹರಿದಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತ ಎಸಗುತ್ತಿದ್ದಂತೆಯೇ ಟ್ರಕ್ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.
ಮಂಡ್ಯ ಮೂಲದ ಸಿಂಧುಶ್ರೀ ಸೋಮವಾರ ಹಸೆಮಣೆ ಏರಬೇಕಿತ್ತು. ನವೆಂಬರ್ 16 ಮದುವೆ ಹಾಗೂ ಭಾನುವಾರ ರಿಸೆಪ್ಷನ್ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬಂಧುಗಳಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಲು ಸಿಂಧುಶ್ರೀ ತಮ್ಮ ಅತ್ತೆ ಮಗಳು, ಕಾಲೇಜು ವಿದ್ಯಾರ್ಥಿನಿ ವಿದ್ಯಾ ಜೊತೆ ಸ್ಕೂಟಿಯಲ್ಲಿ ಹೊರಟಿದ್ದರು. ಇವತ್ತು ಅರಿಶಿನ ಶಾಸ್ತ್ರ, ನಾಳೆ ಶುಕ್ರವಾರ ಮನೆಯಲ್ಲಿ ಬಳೆ ಶಾಸ್ತ್ರದ ಸಂಭ್ರಮವಿತ್ತು. ಇದೀಗ ಮನೆಗೆ ಬಂಧುಗಳು, ಸ್ನೇಹಿತರು ಆಗಮಿಸುತ್ತಿದ್ದಾರೆ. ಮದುಮಗಳಿಗೆ ಹರಸಬೇಕಾದವರು ಅಂತಿಮ ವಿಧಿ ವಿದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ನೋಡಿರಿ

