ಹಾಸನಾಂಬೆ ದರ್ಶನ ಆರಂಭ – ವರ್ಷಕ್ಕೊಮ್ಮೆ ದರ್ಶನ ಕೊಡುವ ತಾಯಿಯ ಮಹಿಮೆ ಏನು?

ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ಗುರುವಾರ ತೆರೆಯಲಾಗಿದೆ. ಇಂದಿನಿಂದ ನ.11ರವರೆಗೆ ಹಾಸನಾಂಬೆ ದರ್ಶನ ಭಕ್ತರಿಗೆ ಸಿಗಲಿದೆ. ಗೊನೆಯುಳ್ಳ ಬಾಳೆ ಕಂಬ ಕಡಿದ ಬಳಿಕ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಶ್ರೀ, ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀಗಳು, ಮುಜರಾಯಿ ಸಚಿವ ಬಸವಂತಪ್ಪ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ತೆರೆಯಲಾಗಿದೆ.
ಇದನ್ನೂ ಓದಿ:ಬೆಳೆಗಾರರು ರೊಚ್ಚಿಗೆದ್ದಿದ್ದೇಕೆ? – MSP V/s FRP ಮೋಸ ಎಲ್ಲಾಗ್ತಿದೆ?
ಹಾಸನಾಂಬೆ ದೇವಿಯ ಮಹಿಮೆಯೇನು?, ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವುದು ಯಾಕೆ ಎಂಬ ಕಾರಣ ನೋಡುವುದಾದರೆ, ಇದರ ಹಿಂದೆ ಪೌರಾಣಿಕ ಕಥೆಯಿದೆ. ಒಂದು ಕಾಲದಲ್ಲಿ ದಟ್ಟವಾದ ಕಾಡಿನಿಂದ ಆವೃತವಾಗಿದ್ದ ಹಾಸನ ಪ್ರದೇಶವನ್ನು ಚನ್ನಪಟ್ಟಣ ಕೋಟೆಯ ಪಾಳೇಗಾರರಾದ ಕೃಷ್ಣಪ್ಪ ನಾಯಕ, ಚೆನ್ನ ನಾಯಕ ಮತ್ತು ಬೊಮ್ಮ ನಾಯಕರು ಆಳುತ್ತಿದ್ದರಂತೆ. ಈ ಪವಿತ್ರ ಸ್ಥಳಕ್ಕೆ ಸಪ್ತಮಾತೃಕೆಯರು ಆಗಮಿಸಿದಾಗ, ಅವರಲ್ಲಿ ಮೂವರು ದೇವಿಯರಾದ ಮಹೇಶ್ವರಿ, ಕೌಮಾರಿ ಮತ್ತು ವೈಷ್ಣವಿ ಹಾಸನದಲ್ಲಿಯೇ ನೆಲೆಸಿದರು ಎಂದು ಪೌರಾಣಿಕ ಕಥೆಗಳು ತಿಳಿಸುತ್ತವೆ. ಈ ದೇವಿಯರನ್ನು ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾ ತ್ರಿಪುರಸುಂದರಿಯರ ಸ್ವರೂಪದಲ್ಲಿಯೂ ಆರಾಧಿಸಲಾಗುತ್ತದೆ. ದೇವಿಯರ ಶಕ್ತಿಸ್ವರೂಪವನ್ನು ಸಿಂಹಾಸನಿ ಎಂದು ಕರೆಯಲಾಗುತ್ತದೆ ಎಂಬ ಪ್ರತೀತಿಯೂ ಇದೆ. ಕಾಲಕ್ರಮೇಣ ಈ ದೇವಿಯನ್ನು ಹಾಸನಾಂಬೆ ಎಂದು ಭಕ್ತರು ಕರೆಯಲು ಆರಂಭಿಸಿದರು.
ಹಾಸನಾಂಬೆ ದೇವಿಯ ಉಗಮದ ಕುರಿತು ಮತ್ತೊಂದು ಪೌರಾಣಿಕ ಕಥೆಯಿದೆ. ಕಾಶಿಯಲ್ಲಿ ನೆಲೆಸಿದ್ದ ಸಪ್ತಮಾತೃಕೆಯರು ದಕ್ಷಿಣ ಭಾರತದತ್ತ ಪ್ರಯಾಣ ಬೆಳೆಸಲು ನಿರ್ಧರಿಸಿದರು. ದೇವಿಯು ಭಕ್ತರಿಗೆ ಒಂದು ಕಟ್ಟುನಿಟ್ಟಾದ ನಿಯಮವನ್ನು ವಿಧಿಸಿದ್ದಳು. ನಾನು ನಿಮ್ಮ ಹಿಂದೆ ಬರುತ್ತೇನೆ, ಆದರೆ ಯಾವುದೇ ಕಾರಣಕ್ಕೂ ನೀವು ಹಿಂತಿರುಗಿ ನೋಡಬಾರದು ಎಂದು ಆದೇಶಿಸಿದ್ದಳು. ಆಗಮನದ ಸೂಚನೆಯಾಗಿ ಕೇಳಿಬರುವ ಗೆಜ್ಜೆಯ ನಾದವನ್ನೇ ಅನುಸರಿಸಬೇಕು ಎಂಬ ಷರತ್ತನ್ನು ವಿಧಿಸಿದ್ದರು. ದೇವಿಯರು ಹಾಸನ ಪ್ರದೇಶಕ್ಕೆ ಆಗಮಿಸಿ ಇಲ್ಲಿಯೇ ನೆಲೆಸಲು ನಿರ್ಧರಿಸಿದಾಗ, ಗೆಜ್ಜೆಯ ನಾದ ನಿಂತುಹೋಯಿತು. ಇದರಿಂದ ಆತಂಕಗೊಂಡು ಕುತೂಹಲಕ್ಕೆ ಒಳಗಾದ ಅವರನ್ನು ಹಿಂಬಾಲಿಸುತ್ತಿದ್ದವರು ಹಿಂದೆ ತಿರುಗಿ ನೋಡಿದರು. ಆಗ ದೇವಿಯರು, ತಾವು ವಿಧಿಸಿದ್ದ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಇನ್ನು ಮುಂದೆ ಇದೇ ಸ್ಥಳದಲ್ಲಿ ನೆಲೆಸುವುದಾಗಿ ತಿಳಿಸಿದರು ಎಂಬುದು ಪ್ರತೀತಿ. ಭಕ್ತರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದರೂ ದೇವಿಯರು ಹಾಸನದಲ್ಲಿಯೇ ನೆಲೆಸಿದರು ಎಂದು ಪುರಾಣದಲ್ಲಿ ಹೇಳಲಾಗಿದೆ.ಈ ಕಥೆಯ ಪ್ರಕಾರ, ಸಪ್ತಮಾತೃಕೆಯರಲ್ಲಿ ಮೂವರು ಹಾಸನದಲ್ಲಿ, ಮೂವರು ದೇವಿಗೆರೆಯಲ್ಲಿ ಹಾಗೂ ಬ್ರಾಹ್ಮಿ ದೇವಿಯು ಕೆಂಚಮ್ಮನಾಗಿ ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದರು ಎಂಬ ನಂಬಿಕೆಯಿದೆ.
ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ವರ್ಷಕ್ಕೊಮ್ಮೆ ಮಾತ್ರ ತೆರೆಯುವುದು ಯಾಕೆ ಎಂದು ನೋಡುವುದಾದರೆ, ದೇವಾಲಯದ ಸಂಪ್ರದಾಯದ ಪ್ರಕಾರ, ಹಾಸನಾಂಬೆಯ ದರ್ಶನೋತ್ಸವವು ನಿಗದಿತ ವಾರ್ಷಿಕ ಆಚರಣೆಯಾಗಿದೆ. ದೀಪಾವಳಿ, ಯುಗಾದಿಯಂತಹ ಹಬ್ಬಗಳು ನಿರ್ದಿಷ್ಟ ಸಮಯದಲ್ಲಿ ಆಚರಿಸಲ್ಪಡುವಂತೆಯೇ, ಹಾಸನಾಂಬೆ ದೇವಿಯ ದರ್ಶನಕ್ಕೂ ಸಂಪ್ರದಾಯಬದ್ಧ ಕಾಲಾವಧಿಯನ್ನು ಅನುಸರಿಸಲಾಗುತ್ತದೆ. ಹೀಗಾಗಿ, ವರ್ಷಕ್ಕೊಮ್ಮೆ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವುದು ಭಕ್ತರ ಪಾಲಿಗೆ ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ.ಸಾಂಪ್ರದಾಯಿಕವಾಗಿ, ಆಶ್ವಯುಜ ಮಾಸದ ಕೃಷ್ಣ ಪಕ್ಷದಲ್ಲಿ ದಸರಾ ಮುಗಿದ ಬಳಿಕ ಬರುವ ಗುರುವಾರದಂದು ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ ಎಂಬ ನಂಬಿಕೆಯಿದೆ. ಆದರೆ, ಪಾಡ್ಯ ಅಥವಾ ಬಿದಿಗೆಯ ದಿನ ಗುರುವಾರ ಬಂದರೆ ಆ ದಿನ ಬಾಗಿಲು ತೆರೆಯದೆ, ಮುಂದಿನ ಗುರುವಾರದಂದು ತೆರೆಯುವ ಸಂಪ್ರದಾಯವಿದೆ.

ನೋಡಿರಿ

